Advertisement

ಸೋತರೂ ಮನಗೆದ್ದ ಭಾರತ

11:07 AM Oct 07, 2017 | |

ನವದೆಹಲಿ: ಆತಿಥೇಯ ಭಾರತ ತಂಡ 17 ವರ್ಷ ವಯೋಮಿತಿಯೊಳಗಿನ ಫ‌ುಟ್‌ಬಾಲ್‌ ವಿಶ್ವಕಪ್‌ ಕೂಟದ ಮೊದಲ ಪಂದ್ಯ ದಲ್ಲಿ ಅಮೆರಿಕ ವಿರುದ್ಧ 3-0 ಗೋಲುಗಳಿಂದ ಸೋಲುಂಡಿದೆ. ಸೋತರೂ ಅದೊಂದು ಹೀನಾಯ ಸೋಲಾಗಿರಲಿಲ್ಲ. ಬಲಿಷ್ಠ ಅಮೆರಿಕ ವಿರುದ್ಧ ಪ್ರಬಲ ಆಟ ಪ್ರದರ್ಶಿಸಿ ಅಭಿಮಾನಿಗಳ ಮನ ಗೆದ್ದ ಗೆಲುವು ಎಂದರೂ ತಪ್ಪಗಲಾರದು. 

Advertisement

ಶುಕ್ರವಾರ ನವದೆಹಲಿಯ ನೆಹರೂ ಕ್ರೀಡಾಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಪಂದ್ಯ ಆರಂಭದ ವೇಳೆ ಎದುರಾಳಿಗೆ ಭಾರತ ಸುಲಭ ತುತ್ತಾಗಬಹುದು ಎಂದೇ ಅಂದಾಜಿಸಲಾಗಿತ್ತು. ಇದಕ್ಕೆ ತಕ್ಕಂತೆ ಅಮೆರಿಕ ಬಿರುಸಿನ ಆಟ ಕೂಡ ಪ್ರದರ್ಶಿಸಿತು. ಆದರೆ ಈ ಹಂತದಲ್ಲಿ ಅಮೆರಿಕ ಕನಸನ್ನು ನುಚ್ಚು ನೂರು ಮಾಡಿದ ಭಾರತೀಯ ಗೋಲ್‌ ಕೀಪರ್‌ ಧೀರಜ್‌ ಪ್ರದರ್ಶನ ಪ್ರಶಂಸನೀಯ ಎನ್ನುವುದು ವಿಶೇಷ.

ಧೀರಜ್‌ ಧೀರ ಆಟ: ಪಂದ್ಯ ಆರಂಭವಾಗಿ 30 ನಿಮಿಷದವರೆಗೆ ಯಾವುದೇ ಗೋಲು ದಾಖಲಾಗಿರಲಿಲ್ಲ. ಅಮೆರಿಕ ಆಟಗಾರರು ಗೋಲು ಬಾರಿಸುವ ಹಲವು ಯತ್ನವನ್ನು ಗೋಲ್‌ ಕೀಪರ್‌ ಧೀರಜ್‌ ವಿಫ‌ಲಗೊಳಿಸಿದರು. ಆದರೆ 30ನೇ ನಿಮಿಷದಲ್ಲಿ ಅಮೆರಿಕಕ್ಕೆ ಸಿಕ್ಕ ಪೆನಾಲ್ಟಿಯನ್ನು ಸರ್ಜೆಂಟ್‌ ಗೋಲಾಗಿಸಿದರು. ಈ ಮೂಲಕ ಅಮೆರಿಕ ಗೋಲಿನ ಖಾತೆ ತೆರೆಯಿತು. ನಂತರ ಅಮೆರಿಕ ಪರ 51ನೇ ನಿಮಿಷದಲ್ಲಿ ಡರ್ಕಿನ್‌, 84ನೇ ನಿಮಿಷದಲ್ಲಿ ಕಾರ್ಲೆಟನ್‌ ಗೋಲು ಸಿಡಿಸಿದರು. ಭಾರತ ಹಲವು ಬಾರಿ ಗೋಲು ಬಾರಿಸಲು ಪ್ರಯತ್ನಿಸಿದ ಯತ್ನವೂ ವಿಫ‌ಲವಾಯಿತು.

ಡ್ರಾ ಸಾಧಿಸಿದ ನ್ಯೂಜಿಲೆಂಡ್‌ 
ನವೀ ಮುಂಬೈನಲ್ಲಿ ನಡೆದ ಮತ್ತೂಂದು ಪಂದ್ಯದಲ್ಲಿ ಟರ್ಕಿ ವಿರುದ್ಧ ನ್ಯೂಜಿಲೆಂಡ್‌ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು. ಟರ್ಕಿಯ ಅಹ್ಮದ್‌ ಕುಟುಕು 18ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ಒದಗಿಸಿದ್ದರು. ಟರ್ಕಿ ಈ ಮುನ್ನಡೆ 58ನೇ ನಿಮಿಷದ ತನಕವೂ ಉಳಿಸಿಕೊಂಡಿತ್ತು. ಆಗ ನ್ಯೂಜಿಲೆಂಡಿನ ನಾಯಕ ಮ್ಯಾಕ್ಸ್‌ ಮಾತ ಆಕರ್ಷಕ ಎಡಗಾಲಿನ ಗೋಲೊಂದನ್ನು ಬಾರಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಈ ಪಂದ್ಯಕ್ಕೆ ಆರಂಭದಲ್ಲಿ ಮಳೆಯಿಂದ ಅಡಚಣೆಯಾಗಿತ್ತು.

ಪ್ರಧಾನಿ ಮೋದಿ ಚಾಲನೆ
ನವದೆಹಲಿ: ಕಿರಿಯರ ವಿಶ್ವಕಪ್‌ ಫ‌ುಟ್‌ಬಾಲ್‌ ಕೂಟಕ್ಕೆ ನವದೆಹಲಿ ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ
ಚಾಲನೆ ನೀಡಿದರು.  ಉದ್ಘಾಟನೆ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಈ
ವೇಳೆ ಭಾರತದ ಮಾಜಿ ಆಟಗಾರ ವಿಜಯನ್‌, ಬೈಚುಂಗ್‌ ಭುಟಿಯಾ, ಸುನಿಲ್‌ ಚೇಟ್ರಿ ಸೇರಿದಂತೆ ಅನೇಕ ಹಾಲಿ ಮಾಜಿ ಆಟಗಾ ರರನ್ನು ಮೋದಿ ಸನ್ಮಾನಿಸಿದರು. ಈ ವೇಳೆ ಕ್ರೀಡಾ ಸಚಿವ ರಾಜವರ್ಥನ್‌ ಸಿಂಗ್‌ ರಾಥೋಡ್‌ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. 

Advertisement

ಸರಳ ಉದ್ಘಾಟನಾ ಕಾರ್ಯಕ್ರಮ: ಫ‌ುಟ್‌ಬಾಲ್‌ ಉದ್ಘಾಟನಾ ಪಂದ್ಯ ಅತ್ಯಂತ ಸರಳವಾಗಿ ನಡೆಯಿತು. ಕಾಲ್ವೆಂಡನ್ನು ಪ್ರಧಾನಿ ನರೇಂದ್ರ ಮೋದಿ ಆತಿಥೇಯ ರಾಷ್ಟ್ರಕ್ಕೆ ಹಸ್ತಾಂತರಿಸುವ ಮೂಲಕ ಚಾಲನೆ ಸಿಕ್ಕಿತು. ಇದಾದ ಬಳಿಕ ಕ್ರೀಡಾಂಗಣಕ್ಕೆ ಇಳಿದ ಮೋದಿ ಅಮೆರಿಕ – ಭಾರತ ತಂಡದ ಆಟಗಾರರನ್ನು ಪರಿಚಯಿಸಿಕೊಂಡು
ಹಸ್ತಲಾಘವ ನಡೆಸಿದರು.

ಎಲ್ಲಾ ತಂಡಗಳಿಗೂ ಮೋದಿ ಸ್ವಾಗತ: ವಿಶ್ವಕಪ್‌ನಲ್ಲಿ ಪಾಲ್ಗೊಂಡ ಎಲ್ಲಾ ತಂಡಗಳಿಗೂ ಪ್ರಧಾನಿ ನರೇಂದ್ರ ಮೋದಿ ಸ್ವಾಗತ ನೀಡಿದ್ದಾರೆ. ಫಿಫಾ ಅ-17 ವಿಶ್ವಕಪ್‌ನಲ್ಲಿ ಪಾಲ್ಗೊಂಡ ಎಲ್ಲಾ ತಂಡಗಳಿಗೂ ಸ್ವಾಗತ. ಖಂಡಿತವಾಗಿಯೂ ಫ‌ುಟ್ಬಾಲ್‌ ಪ್ರೇಮಿಗಳಿಗೆ ಇದು ಟ್ರೆಂಡ್‌ ಆಗಲಿದೆ ಎಂದು ಮೋದಿ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಭಾರತಕ್ಕೆ ಅ-17 ಫ‌ುಟ್ಬಾಲ್‌ ವಿಶ್ವಕಪ್‌ ಆತಿಥ್ಯ ಸಿಕ್ಕಿದೆ. ಆರು ನಗರಗಳಲ್ಲಿ ಪಂದ್ಯಗಳು ಆರಂಭವಾಗಿದ್ದು ಅ.28 ರಂದು ಫೈನಲ್‌
ಪಂದ್ಯ ನಡೆಯಲಿದೆ.

ಕ್ರಿಕೆಟ್‌ ದಿಗ್ಗಜ ಸಚಿನ್‌ ಸ್ಫೂರ್ತಿಯ ಸಂದೇಶ 
ನವದೆಹಲಿ:
ಶುಕ್ರವಾರ 17 ವರ್ಷದೊಳಗಿನ ಫ‌ುಟ್ಬಾಲ್‌ ವಿಶ್ವಕಪ್‌ಗ್ೂ ಮುನ್ನ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ಭಾರತ ತಂಡಕ್ಕೆ ಸ್ಫೂರ್ತಿದಾಯಕ ಸಂದೇಶ ನೀಡಿದ್ದಾರೆ. “ಭಾರತ ಅ-17 ಫ‌ುಟ್ಬಾಲ್‌ ತಂಡಕ್ಕೆ ನನ್ನ ಶುಭಾಶಯಗಳು. ನಿಮ್ಮ ಕನಸನ್ನು ಬೆನ್ನುಹತ್ತಿ ನನಸಾಗಿಸಿಕೊಳ್ಳಿ, ಅದನ್ನು ಆನಂದಿಸಿ’ ಎಂದು ಟ್ವೀಟ್‌ ಮಾಡಿದ್ದಾರೆ. ಸಚಿನ್‌ ಮಾಡಿರುವ ಟ್ವೀಟ್‌ ಭಾರೀ ಸಂಖೆಯಲ್ಲಿ ರಿಟ್ವೀಟ್‌ ಆಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಲೈಕ್‌ಗಳು ಬಂದಿವೆ. ಈ ಹಿಂದೆ ಕೂಡ ರಿಯೋ ಒಲಿಂಪಿಕ್ಸ್‌ ಸೇರಿದಂತೆ ವಿವಿಧ ಕೂಟದಲ್ಲಿ ಪಾಲ್ಗೊಂಡ ಭಾರತ ತಂಡಕ್ಕೆ ಸಚಿನ್‌ ಟ್ವೀಟ್‌ ಮೂಲಕ ಶುಭ ಕೋರಿದ್ದನ್ನು ಸ್ಮರಿಸಬಹುದು.

ಘಾನಾಗೆ ಗೆಲುವು
ನವದೆಹಲಿ/ಮುಂಬೈ: ಫಿಫಾ ಅಂಡರ್‌-17 ವಿಶ್ವಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ಘಾನಾ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಶುಕ್ರವಾರ ನವದೆಹಲಿಯ “ಜವಾಹರಲಾಲ್‌ ನೆಹರೂ ಸ್ಟೇಡಿಯಂ’ನಲ್ಲಿ ನಡೆದ “ಎ’ ವಿಭಾಗದ ಪಂದ್ಯದಲ್ಲಿ 2 ಬಾರಿಯ ಚಾಂಪಿಯನ್‌ ಘಾನಾ ಏಕೈಕ ಗೋಲಿನಿಂದ ಕೊಲಂಬಿಯಾವನ್ನು ಮಣಿಸಿತು. ಪಂದ್ಯದ 39ನೇ ನಿಮಿಷದಲ್ಲಿ ಸಾದಿಕ್‌ ಇಬ್ರಾಹಿಂ ಬಾರಿಸಿದ ಗೋಲು ಪಂದ್ಯದ ಫ‌ಲಿತಾಂಶವನ್ನು ನಿರ್ಧರಿಸಿತು. 1991 ಮತ್ತು 1995ರ ಚಾಂಪಿಯನ್‌ ಆಗಿರುವ ಘಾನಾ ಈ ಬಾರಿಯ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಪರಾಜಿತ ಕೊಲಂಬಿಯಾ ತನ್ನ ಮುಂದಿನ ಪಂದ್ಯದಲ್ಲಿ ಆತಿಥೇಯ ಭಾರತವನ್ನು ಎದುರಿಸಲಿದೆ (ಅ. 9). 

ಕೊಲಂಬಿಯಾಗೆ ಹಿನ್ನಡೆ: ಗುಂಪು “ಎ’ನಲ್ಲಿ ನಡೆದ ಪಂದ್ಯದಲ್ಲಿ ಎರಡೂ ತಂಡಗಳಿಂದ ಸಮಬಲದ ಹೋರಾಟ ಕಂಡು ಬಂತು. ಗೋಲುಗಳಿಸುವ ಉಮೇದಿನಿಂದಲೇ ಎರಡೂ ತಂಡಗಳು ನುಗ್ಗಿದವು. ಆದರೆ ಸಾದಿಕ್‌ ಇಬ್ರಾಹಿಂ ಘಾನ ಪರ ಗೋಲಿನ ಖಾತೆ ತೆರೆದು ಗೆಲುವಿಗೆ ನೆರವಾದರು.

ಇಂದಿನ ಪಂದ್ಯಗಳು
1 ಗ್ರೂಪ್‌ “ಸಿ’: ಜರ್ಮನಿ- ಕೋಸ್ಟಾರಿಕಾ, ಸ್ಥಳ: ಗೋವಾ, ಆರಂಭ: ಸಂಜೆ 5.00

2 ಗ್ರೂಪ್‌ “ಡಿ’: ಬ್ರೆಜಿಲ್‌-ಸ್ಪೇನ್‌, ಸ್ಥಳ: ಕೊಚ್ಚಿ, ಆರಂಭ: ಸಂಜೆ 5.00

3 ಗ್ರೂಪ್‌ “ಸಿ’: ಇರಾನ್‌-ಗಿನಿ, ಸ್ಥಳ: ಗೋವಾ, ಆರಂಭ: ರಾತ್ರಿ 8.00 

4 ಗ್ರೂಪ್‌ “ಡಿ’: ಕೊರಿಯಾ -ನೈಗರ್‌, ಸ್ಥಳ: ಕೊಚ್ಚಿ, ಆರಂಭ: ರಾತ್ರಿ 8.00 

ನೇರ ಪ್ರಸಾರ
ಸೋನಿ ಟೆನ್‌ 2, ಸೋನಿ ಟೆನ್‌ 2ಎಚ್‌ಡಿ, ಸೋನಿ ಟೆನ್‌3, ಸೋನಿ ಟೆನ್‌ 3 ಎಚ್‌ಡಿ ಸಮಯ: ಸಂಜೆ 5ಕ್ಕೆ 

Advertisement

Udayavani is now on Telegram. Click here to join our channel and stay updated with the latest news.

Next