ಮುಂಬೈ: ಮೂರನೇ ವ್ಯಕ್ತಿಗಳ ಅನಗತ್ಯ ಹಸ್ತಕ್ಷೇಪದ ಕಾರಣದಿಂದ ಭಾರತೀಯ ಫುಟ್ ಬಾಲ್ ಸಂಸ್ಥೆಯನ್ನು ವಿಶ್ವ ಫುಟ್ ಬಾಲ್ ನ ಪ್ರಮುಖ ಸಂಸ್ಥೆ ಫಿಫಾ ಅಮಾನತು ಮಾಡಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಮಂಗಳವಾರ ಬೆಳಗ್ಗೆ ಈ ನಿರ್ಧಾರ ಕೈಗೊಂಡಿದೆ.
ಫಿಫಾ ಕೌನ್ಸಿಲ್‌ನ ಬ್ಯೂರೋ, ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಅನ್ನು ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲು ಸರ್ವಾನುಮತದಿಂದ ನಿರ್ಧರಿಸಿದೆ. ಮೂರನೇ ವ್ಯಕ್ತಿಗಳ ಅನುಚಿತ ಪ್ರಭಾವದ ಕಾರಣದಿಂದ ಈ ನಿರ್ಧಾರ ಮಾಡಲಾಗಿದ್ದು, ಇದು ಫಿಫಾ ಕಾಯಿದೆಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಎಐಎಫ್‌ಎಫ್ ಕಾರ್ಯಕಾರಿ ಸಮಿತಿಯ ಅಧಿಕಾರವನ್ನು ವಹಿಸಿಕೊಳ್ಳಲು ನಿರ್ವಾಹಕರ ಸಮಿತಿಯನ್ನು ರಚಿಸುವ ಆದೇಶವನ್ನು ರದ್ದುಗೊಳಿಸಿದ ನಂತರ ಮತ್ತು ಎಐಎಫ್‌ಎಫ್ ಆಡಳಿತವು ಎಐಎಫ್‌ಎಫ್‌ನ ದೈನಂದಿನ ವ್ಯವಹಾರಗಳ ಸಂಪೂರ್ಣ ನಿಯಂತ್ರಣವನ್ನು ಮರಳಿ ಪಡೆದ ನಂತರ ಅಮಾನತು ರದ್ದುಗೊಳಿಸಲಾಗುವುದು ಎಂದು ಫಿಫಾ ಮಂಡಳಿ ತಿಳಿಸಿದೆ.
ಇದನ್ನೂ ಓದಿ:2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನನ್ನ ಕನಸು: ಅಚಂತ ಶರತ್ ಕಮಲ್
“ಅಮಾನತು ಕಾರಣದಿಂದ ಅಕ್ಟೋಬರ್ 11-30 ರಂದು ಭಾರತದಲ್ಲಿ ನಡೆಯಲಿರುವ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಅನ್ನು ಪ್ರಸ್ತುತ ಭಾರತದಲ್ಲಿ ಯೋಜಿಸಿದಂತೆ ನಡೆಸಲು ಸಾಧ್ಯವಿಲ್ಲ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.