Advertisement

FIFA ಅರ್ಹತಾ ಸುತ್ತಿನ ಪಂದ್ಯ: ಆರ್ಜೆಂಟೀನಾ-ಬ್ರಝಿಲ್‌ ಅಭಿಮಾನಿಗಳ ಬಡಿದಾಟ

11:49 PM Nov 22, 2023 | Team Udayavani |

ರಿಯೋ ಡಿ ಜನೈರೊ (ಬ್ರಝಿಲ್‌): ಫಿಫಾ ವಿಶ್ವಕಪ್‌ ಫ‌ುಟ್‌ಬಾಲ್‌ ಅರ್ಹತಾ ಸುತ್ತಿನ ಪಂದ್ಯದ ವೇಳೆ ಆತಿಥೇಯ ಬ್ರಝಿಲ್‌ ಮತ್ತು ಆರ್ಜೆಂಟೀನಾ ಅಭಿಮಾನಿಗಳ ನಡುವೆ ಮಾರಾಮಾರಿ ನಡೆದಿದೆ. ಈ ಸಂದರ್ಭದಲ್ಲಿ ಆರ್ಜೆಂಟೀನಾದ ಸ್ಟಾರ್‌ ಆಟಗಾರ ಲಿಯೋನೆಲ್‌ ಮೆಸ್ಸಿ ತಮ್ಮ ದೇಶದ ಅಭಿಮಾನಿಗಳ ಪರವಾಗಿ ನಿಂತಿದ್ದಾರೆ. ಬ್ರಝಿಲ್‌ ಭದ್ರತಾ ಸಿಬಂದಿ ನಡೆಸಿಕೊಂಡ ರೀತಿ ಸರಿಯಲ್ಲ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ.

Advertisement

ಬುಧವಾರ ರಾತ್ರಿ “ಮರಕಾನಾ ಸ್ಟೇಡಿಯಂ’ನಲ್ಲಿ ಬ್ರಝಿಲ್‌-ಆರ್ಜೆಂಟೀನಾ ನಡುವಿನ ಹೈ ವೋಲ್ಟೇಜ್  ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹೇಳುವ ವೇಳೆ ಸಣ್ಣ ಮಟ್ಟದ ಗಲಭೆ ಕಂಡುಬಂತು. ಬಳಿಕ ತೀವ್ರಗೊಂಡಿತು. ಈ ಗಲಭೆಯ ವೇಳೆ ಅನೇಕರು ಗಾಯಗೊಂಡರು. ಆಗ ಮಧ್ಯ ಪ್ರವೇಶಿಸಿದ ಭದ್ರತಾ ಸಿಬಂದಿ ಮತ್ತು ಪೊಲೀಸರು ಆರ್ಜೆಂಟೀನಾ ಅಭಿಮಾನಗಳ ವಿರುದ್ಧ ಆರೋಪ ಮಾಡಿದರು. ಇವರೇ ಗಲಭೆಗೆ ಮೂಲ ಎಂಬ ರೀತಿಯಲ್ಲಿ ವರ್ತಿಸಿದರು. ಲಾಠಿಚಾರ್ಜ್‌ ಕೂಡ ನಡೆಯಿತು. ರಕ್ತಸಿಕ್ತ ಅಭಿಮಾನಿಗಳನ್ನು ಸ್ಟೇಡಿಯಂನಿಂದ ಹೊರಗೆ ಸಾಗಿಸಲಾಯಿತು.
ಈ ಸಂದರ್ಭದಲ್ಲಿ ಸ್ಟಾಂಡ್‌ನ‌ಲ್ಲಿದ್ದ ಆಸನಗಳನ್ನು ಕಿತ್ತು ಪೊಲೀಸರ ಮೇಲೆ ಎಸೆಯಲಾಗಿದೆ. ಕೆಲವು ವೀಕ್ಷಕರು ಇದರಿಂದ ಪಾರಾಗಲು ಮೈದಾನಕ್ಕೆ ಧಾವಿಸಿದರು. ಗಲಭೆಗೆ ಸಂಬಂಧಿಸಿದಂತೆ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಲಿಯೋನೆಲ್‌ ಮೆಸ್ಸಿ ಸೇರಿದಂತೆ ಇತರ ಆಟಗಾರರು ಡ್ರೆಸ್ಸಿಂಗ್‌ ರೂಮ್‌ಗೆ ತೆರಳಿದರು. ಇದಕ್ಕೂ ಮುನ್ನ ಮೆಸ್ಸಿ ಮತ್ತು ಸಹ ಫ‌ುಟ್ಬಾಲಿಗರು ಮೈದಾನದಿಂದಲೇ ಫ‌ುಟ್‌ಬಾಲ್‌ ಅಭಿಮಾನಿಗಳನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ ಇದು ಫ‌ಲ ನೀಡಲಿಲ್ಲ.

ಬ್ರಝಿಲ್‌ಗೆ ಹ್ಯಾಟ್ರಿಕ್‌ ಸೋಲು
27 ನಿಮಿಷಗಳ “ಬ್ರೇಕ್‌’ ಬಳಿಕ ಆಟ ಮುಂದುವರಿಯಿತು. ಹಾಲಿ ವಿಶ್ವ ಚಾಂಪಿಯನ್‌ ಆರ್ಜೆಂಟೀನಾ 1-0 ಅಂತರದಿಂದ ಬ್ರಝಿಲ್‌ಗೆ ಸೋಲುಣಿ ಸಿತು. ಇದು ಅರ್ಹತಾ ಸುತ್ತಿನಲ್ಲಿ ಬ್ರಝಿಲ್‌ಗೆ ಎದುರಾದ ಸತತ 3ನೇ ಸೋಲಾಗಿದೆ. ಗೆಲುವಿನ ಬಳಿಕ ಆರ್ಜೆಂಟೀನಾ ಆಟಗಾರರು ಅಭಿಮಾನಿಗಳೊಂದಿಗೆ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next