ದೋಹಾ: ನಾಲ್ಕು ವರ್ಷಗಳ ಬಳಿಕ ಫುಟ್ ಬಾಲ್ ಜಗತ್ತು ವಿಶ್ವಕಪ್ ಜಾತ್ರೆಗೆ ಸಿದ್ದವಾಗುತ್ತಿದೆ. ಆದರೆ ಅಂದುಕೊಂಡಿದ್ದಕ್ಕಿಂತ ಒಂದು ದಿನ ಮೊದಲೇ ವಿಶ್ವಕಪ್ ಆರಂಭವಾಗಲಿದೆ ಎಂದು ವರದಿಯಾಗಿದೆ. ಅಲ್ಲದೆ ಇದಕ್ಕೆ ಫಿಫಾ ಕೂಡಾ ಒಪ್ಪಿಗೆ ನೀಡಿದೆ.
ಈ ಬಾರಿಯ ಫಿಫಾ ವಿಶ್ವಕಪ್ ಕತಾರ್ ನಲ್ಲಿ ನಡೆಯಲಿದೆ. ಈ ಮೊದಲು ನವೆಂಬರ್ 21ರಂದು ಫುಟ್ ಬಾಲ್ ವಿಶ್ವಕಪ್ ಆರಂಭವಾಗುವುದು ಎಂದು ಯೋಜಿಸಲಾಗಿತ್ತು. ಆದರೆ ಇದೀಗ ನವೆಂಬರ್ 20ರಂದು ವಿಶ್ವಕಪ್ ಉದ್ಘಾಟನೆ ನಡೆಯಲಿದೆ ಎಂದು ಆಯೋಜಕರು ಹೇಳಿದ್ದಾರೆ.
ಹಳೆಯ ವೇಳಾಪಟ್ಟಿಯಲ್ಲಿ, ನವೆಂಬರ್ 21 ರಂದು ಈಕ್ವೆಡಾರ್ ವಿರುದ್ಧ ಕತಾರ್ ಅಧಿಕೃತ ಉದ್ಘಾಟನಾ ಪಂದ್ಯ ಆಡಬೇಕಿತ್ತು. ಆದರೆ ಇದೀಗ ವೇಳಾಪಟ್ಟಿ ಬದಲಾಗಿದ್ದು, ನೆದರ್ಲ್ಯಾಂಡ್ ವಿರುದ್ಧ ಸೆನೆಗಲ್ ತಂಡ ದಿನದ ಮೊದಲ ಪಂದ್ಯವಾಡಲಿದೆ.
ಇದನ್ನೂ ಓದಿ:ಕ್ರೇಜಿ ಕನಸಿನ ಬೋಪಣ್ಣ ಇಂದು ತೆರೆಗೆ
“ಆತಿಥೇಯ ರಾಷ್ಟ್ರ ಕತಾರ್ ನವೆಂಬರ್ 20 ಭಾನುವಾರದಂದು ಅದ್ವಿತೀಯ ಉದ್ಘಾಟನಾ ಸಮಾರಂಭದ ಭಾಗವಾಗಿ ಈಕ್ವೆಡಾರ್ ವಿರುದ್ಧ ಆಡಲಿದೆ” ಎಂದು ಫಿಫಾ ಹೇಳಿದೆ.
“ಇಂದು ಫಿಫಾ ಕೌನ್ಸಿಲ್‌ನ ಬ್ಯೂರೋ ತೆಗೆದುಕೊಂಡ ಸರ್ವಾನುಮತದ ನಿರ್ಧಾರದ ನಂತರ ವಿಶ್ವಕಪ್ ಪಂದ್ಯಾವಳಿಯ ಆರಂಭಿಕ ಪಂದ್ಯ ಮತ್ತು ಸಮಾರಂಭವನ್ನು ಒಂದು ದಿನ ಮುಂದಕ್ಕೆ ತರಲಾಗಿದೆ.” ಎಂದು ಪ್ರಕಟಣೆ ತಿಳಿಸಿದೆ.