ದೋಹಾ: ಏಷ್ಯಾ ಖಂಡ ಬಹಳಷ್ಟು ವರ್ಷಗಳಿಂದ ಕಾತರದಿಂದ ನಿರೀಕ್ಷಿಸಿದ್ದ ಫಿಫಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಗೆ ಅಲ್ ಖೋರ್‌ನಲ್ಲಿರುವ “ಅಲ್ ಬೈತ್’ ಕ್ರೀಡಾಂಗಣ ರವಿವಾರ ರಾತ್ರಿ ಸಾಕ್ಷಿಯಾಯಿತು. ಕಣ್ಸೆಳೆಯುವ ದೀಪಾಲಂಕಾರ, ಅಭಿಮಾನಿಗಳ ಭೋರ್ಗರೆತ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫುಟ್‌ಬಾಲ್ ಜಗತ್ತಿಗೆ ತೆರೆದುಕೊಂಡ ಈ ಮನಮೋಹಕ ಕಾರ್ಯಕ್ರಮ ಬಳಿಕ ಒಂದೊಂದೇ ಆಕರ್ಷಣೆಯೊಂದಿಗೆ ಕ್ರೀಡಾಮಾನಸದಲ್ಲಿ ಅಚ್ಚೊತ್ತಿತು. ಏಕತೆ ಮತ್ತು ಸಹಿಷ್ಣುತೆ ಇಡೀ ಕಾರ್ಯಕ್ರಮದ ಮೂಲ ಆಶಯವಾಗಿತ್ತು.
ಹಾಲಿ ಚಾಂಪಿಯನ್ ಫ್ರಾನ್ಸ್ ಕಡೆಯಿಂದ ವಿಶ್ವಕಪ್ ಟ್ರೋಫಿ ಪಡೆಯುವ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಚಾಲನೆ ಲಭಿಸಿತು. ಫ್ರಾನ್ಸ್‌ನ ಲೆಜೆಂಡ್ರಿ ಫುಟ್ಬಾಲಿಗ ಮಾರ್ಸೆಲ್ ಡಿಸೈಲಿ ಈ ಟ್ರೋಫಿಯನ್ನು ಕತಾರ್ ಕೂಟದ ಸಂಘಟಕರಿಗೆ ಹಸ್ತಾಂತರಿಸಿದರು. ಉದ್ಘಾಟನ ಕಾರ್ಯಕ್ರಮದ ಬಳಿಕ ಆತಿಥೇಯ ಕತಾರ್ ವಿಶ್ವಕಪ್ ಇತಿಹಾಸದ ತನ್ನ ಪ್ರಥಮ ಪಂದ್ಯವನ್ನು ಈಕ್ವಡಾರ್ ವಿರುದ್ಧ ಆಡಿತು. ಭಾರತೀಯ ಕಾಲಮಾನದಂತೆ ರಾತ್ರಿ 9.30ಕ್ಕೆ ವಿಶ್ವಕಪ್ ಚೆಂಡು ಅಂಗಳಕ್ಕೆ ಅಪ್ಪಳಿಸಿತು.
ದಕ್ಷಿಣ ಕೊರಿಯಾದ ಖ್ಯಾತ ಬಿಟಿಎಸ್ ಸಿಂಗರ್ ಜಂಗ್‌ಕುಕ್ ಕಾರ್ಯಕ್ರಮ ಸಮಾರಂಭದ ವಿಶೇಷ ಆಕರ್ಷಣೆ ಎನಿಸಿತು. ಕತಾರಿ ಗಾಯಕ ಫಹಾದ್ ಅಲ್ ಕುಬೈಸಿ ಜತೆಗೂಡಿ ಮ್ಯೂಸಿಕ್ ಶೋ ನಡೆಸಿಕೊಟ್ಟರು. ಜಂಗ್ ಕುಕ್ ಅವರ ನ್ಯೂ ಟ್ರ್ಯಾಕ್ “ಡ್ರೀಮರ್’ ಇಲ್ಲಿ ಮೊಳಗಿತು. ಅಮೆರಿಕದ ಸೂಪರ್ ಸ್ಟಾರ್ ಮಾರ್ಗನ್ ಫ್ರೀಮನ್ ಸಮಾರಂಭವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕೇವಲ 50 ನಿಮಿಷಗಳಲ್ಲಿ ಉದ್ಘಾಟನ ಸಮಾರಂಭಕ್ಕೆ ತೆರೆ ಬಿತ್ತು.
ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ 32 ದೇಶಗಳ ಧ್ವಜಗಳೊಂದಿಗೆ ವಿಶೇಷ ಪ್ರದರ್ಶನ ನಡೆಯಿತು. ಪ್ರತಿಯೊಂದು ದೇಶದ ಆಟಗಾರರ ಜೆರ್ಸಿ ವೇದಿಕೆಯ ಮೇಲೆ ಪ್ರದರ್ಶನಗೊಂಡಿತು. ಇಲ್ಲಿ ಅದ್ಭುತ ತಂತ್ರಜ್ಞಾನ ಮೇಳೈಸಿತು. ವಿಶ್ವಕಪ್ ಲಾಂಛನ “ಲಾಯೀಬ್’ ಕೂಡ ವೇದಿಕೆಯಲ್ಲಿ ಕಾಣಿಸಿಕೊಂಡು ಸಮಾರಂಭದ ಆಕರ್ಷಣೆಯನ್ನು ಹೆಚ್ಚಿಸಿತು.
ಸೌದಿ ಅರೇಬಿಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಉದ್ಘಾಟನ ಸಮಾರಂಭ ಹಾಗೂ ಆರಂಭಿಕ ಪಂದ್ಯಗಳೆರಡಕ್ಕೂ ಸಾಕ್ಷಿಯಾದರು. ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫಾಂಟಿಯಾನೊ ಅರೆಬಿಕ್ ಭಾಷೆಯಲ್ಲಿ ಸ್ವಾಗತ ಕೋರುವ ಮೂಲಕ ಗಮನ ಸೆಳೆದರು.
ಇಂದಿನ ಪಂದ್ಯಗಳು:
ಇಂಗ್ಲೆಂಡ್-ಇರಾನ್
ಸ್ಥಳ: ಖಲೀಫಾ
ಇಂಟರ್‌ನ್ಯಾಶನಲ್ ಸ್ಟೇಡಿಯಂ
ಆರಂಭ: ಸಂಜೆ 6.30
ಸೆನೆಗಲ್-ನೆದರ್ಲೆಂಡ್ಸ್
ಸ್ಥಳ: ಅಲ್ ತುಮಾಮ ಸ್ಟೇಡಿಯಂ
ಆರಂಭ: ರಾತ್ರಿ 9.30
ಪ್ರಸಾರ: ನ್ಪೋರ್ಟ್ಸ್-18