Advertisement

ಪೌರತ್ವ ತಿದ್ದುಪಡಿಗೆ ತೀವ್ರ ವಿರೋಧ

02:17 PM Dec 20, 2019 | Team Udayavani |

ಕೋಲಾರ: ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ನಿಷೇಧಾಜ್ಞೆ ಜಾರಿ ನಡುವೆಯೂ ಸಿಪಿಎಂ ಮುಖಂಡರು ಪ್ರತಿಭಟಿಸಿ ಪೊಲೀಸರೊಂದಿಗೆ ತಿಕ್ಕಾಟ ನಡೆಸಿ, ಬಂಧನಕ್ಕೊಳಗಾದ ಘಟನೆ ನಗರದ ಬಸ್‌ ನಿಲ್ದಾಣ ವೃತ್ತದಲ್ಲಿ ನಡೆಯಿತು.

Advertisement

ಪೌರತ್ವ ತಿದ್ದಪಡಿ ಕಾಯ್ದೆ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆಗೆ ಕೆಲವು ಸಂಘಟನೆಗಳು ಕರೆ ನೀಡಿದ್ದರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿಯೂ ನಿಷೇಧಾಜ್ಞೆ ಹೇರಿದ್ದರು. ಇದನ್ನು ಲೆಕ್ಕಿಸದೇ ಸಿಪಿಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಬಸ್‌ ನಿಲ್ದಾಣದ ವೃತ್ತದಲ್ಲಿ ಮಧ್ಯಾಹ್ನ 12 ಗಂಟೆಗೆ ಸೇರಿದರು.

ಸಂಚಾರ ಅಸ್ತವ್ಯಸ್ತ: ಪ್ರತಿಭಟನೆಯ ಸುಳಿವು ಅರಿತ ಪೊಲೀಸರು, ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ ಪ್ರತಿಭಟಿಸದಂತೆ ಮನವಿ ಮಾಡಿದರು. ಮನವಿ ಲೆಕ್ಕಿಸದೆ ಕಾರ್ಯಕರ್ತರು ಕೆಂಪು ಬಾವುಟ ಗಳೊಂದಿಗೆ ಘೋಷಣೆ ಕೂಗುತ್ತಾ ಬಸ್‌ ನಿಲ್ದಾಣ ವೃತ್ತದತ್ತ ನುಗ್ಗಿದರು. ಪ್ರತಿಭಟನೆ ಆರಂಭವಾಗುತ್ತಿ ದ್ದಂತೆಯೇ ವೃತ್ತದಲ್ಲಿ ಸಂಚಾರ ಸ್ಥಗಿತಗೊಂಡಿತು.

ಪ್ರತಿಭಟನೆ ತೀವ್ರ: ಪೊಲೀಸರು ಜಾಗೃತಗೊಂಡು ಪ್ರತಿಭಟನಾಕಾರರನ್ನು ಒಬ್ಬೊಬ್ಬರಿಗೂ ಮೂರು ನಾಲ್ಕು ಮಂದಿ ಸುತ್ತುವರಿದು ಬಂಧಿಸಲು ಮುಂದಾದರು. ಸಿಪಿಎಂ ಕಾರ್ಯಕರ್ತರು ಪೌರತ್ವ ಕಾಯ್ದೆ ಮತ್ತು ಬಿಜೆಪಿ ವಿರುದ್ಧ ಘೋಷಣೆ ಮೊಳಗಿಸುತ್ತಲೇ ವೃತ್ತದಲ್ಲಿ ಕುಳಿತು ಪ್ರತಿಭಟನೆ ತೀವ್ರಗೊಳಿಸಿದರು. ಇದರಿಂದ ವಿಚಲಿತರಾದ ಪೊಲೀಸರು, ಬಲವಂತವಾಗಿ ವಾಹನಕ್ಕೆ ನೂಕಲು ಮುಂದಾದರು.

ಮಾತಿನ ಚಕಮಕಿ: ಪ್ರತಿಭಟನಾಕಾರರ ಬಂಧಿ ಸುತ್ತಿದ್ದಂತೆಯೇ ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ವಿ.ಗೀತಾ ಏಕಾಂಗಿಯಾಗಿ ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ನಗರ ಠಾಣೆ ಸಬ್‌ಇನ್ಸ್‌ಪೆಕ್ಟರ್‌ ಅಣ್ಣಯ್ಯ ನಡುವೆ ತೀವ್ರ ಮಾತಿನ ಚಕಮಕಿ ನಡೆಸಿದರು. ಏಕವಚನ ಪ್ರಯೋಗವು ನಡೆಯಿತು. ಮಹಿಳಾ ಪೇದೆಗಳು ವಿ.ಗೀತಾ ಅವರನ್ನು ಸುತ್ತುವರಿದು, ಬಲವಂತದಿಂದ ಪೊಲೀಸ್‌ ಜೀಪ್‌ ಹತ್ತಿಸಿದರು.

Advertisement

ಘೋಷಣೆ ಕೂಗಿ ಆಕ್ರೋಶ: ಈ ವೇಳೆ ವಿ.ಗೀತಾ ಜೀಪ್‌ ಹತ್ತುವುದಿಲ್ಲ, ಬಂಧಿತರಿರುವ ವಾಹನದಲ್ಲಿಯೇ ಬರುವಂತಾಗಿ ಹೇಳಿದ ವಿ.ಗೀತಾ, ಪ್ರತಿಭಟನಾಕಾರರಿದ್ದ ವಾಹನ ಏರುತ್ತಲೇ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಪ್ರಧಾನಿ ವಿರುದ್ಧ ಕಿಡಿ: ನಮ್ಮ ಸಂವಿಧಾನದ ಧರ್ಮ ನಿರಪೇಕ್ಷವನ್ನು ನುಚ್ಚುನೂರು ಮಾಡಲು ಸ್ವತಃ ಪ್ರಧಾನ ಮಂತ್ರಿಯವರೇ, ತನ್ನ ಹುದ್ದೆಯ ಘನತೆ ಮರೆತು ಪ್ರತಿಭಟನಾನಿರತರನ್ನು ಬಟ್ಟೆ ಮೇಲೆ ಗುರುತಿಸಬಹುದು ಎಂದು ಬಾಲಿಶ ಹೇಳಿಕೆ ನೀಡಿದ್ದಾರೆ. ತಿದ್ದುಪಡಿ ಆಗಿರುವ ಈ ಕಾನೂನಿ‌ನಲ್ಲಿ ಪೌರತ್ವ ನೀಡಲು ಧರ್ಮ ಆಧಾರವಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ದಿಂದ ಮಾತ್ರ ಬಂದವರಾಗಿರಬೇಕು ಎಂಬ ಅಂಶ ಒಳಗೊಂಡಿದೆ. ಇದು ನಮ್ಮ ಸಂವಿಧಾನದ ಆತ್ಮವಾದ ಧರ್ಮ ನಿರಪೇಕ್ಷ, ಸಮಾನತೆ ತತ್ವಗಳಿಗೆ ವಿರುದ್ಧ ಎಂದು ಆರೋಪಿಸಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಪಿ.ಶ್ರೀನಿವಾಸ್‌, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ, ಪಿ.ಆರ್‌.ಸೂರ್ಯನಾರಾಯಣ, ಟಿ.ಎಂ. ವೆಂಕಟೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next