Advertisement

ಬ್ಯುಸಿ ರಸ್ತೇಲಿ ದಿಢೀರ್‌ ಮೃತ್ಯುಕೂಪಗಳು

12:50 AM Dec 29, 2019 | Lakshmi GovindaRaj |

ಬೆಂಗಳೂರು: ಈ ಹಿಂದೆ ನಗರದ ವಿವಿಧೆಡೆ ತಲೆಯೆತ್ತಿದ್ದ ಅವೈಜ್ಞಾನಿಕ ಹಂಪ್‌ಗಳಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದವು. ನಂತರದ ದಿನಗಳಲ್ಲಿ ಆ ಹಂಪ್‌ಗ್ಳ ಸಂಖ್ಯೆ ತಗ್ಗಿತು. ಆದರೆ, ಈಗ ಅವುಗಳ ಜಾಗವನ್ನು ಸಮತಟ್ಟಲ್ಲದ ಮ್ಯಾನ್‌ಹೋಲ್‌ಗ‌ಳು ಆಕ್ರಮಿಸಿಕೊಂಡಿವೆ. ಅದರಲ್ಲೂ ಅತಿ ಹೆಚ್ಚು ದಟ್ಟಣೆ ಇರುವ ಮಾರ್ಗಗಳಲ್ಲಿ “ಮೃತ್ಯುಕೂಪ’ಗಳಾಗಿ ಪರಿಣಮಿಸುತ್ತಿವೆ.

Advertisement

ಕೇವಲ ಸಮತಟ್ಟಾಗಿಲ್ಲದ ಮ್ಯಾನ್‌ಹೋಲ್‌ಗ‌ಳಲ್ಲ; ಆಪ್ಟಿಕಲ್‌ ಫೈಬರ್‌ ಕೇಬಲ್‌ ಅಳವಡಿಕೆ ಚೆಂಬರ್‌ಗಳು, ವಾಟರ್‌ ವಾಲ್ವ್ ಮತ್ತು ಬೆಸ್ಕಾಂ ಚೆಂಬರ್‌ಗಳೂ ಇವೆ. ಪೀಕ್‌ ಅವರ್‌ನಲ್ಲಿ ಬರುವ ವಾಹನಗಳಿಗೆ ಏಕಾಏಕಿ ಎದುರಾಗುವ ಈ ತಡೆಗೋಡೆಗಳನ್ನು ತಪ್ಪಿಸಲು ಮುಂದಾಗಿ, ಸವಾರರು ಅಪಘಾತಕ್ಕೀಡಾಗುವುದು ಹೆಚ್ಚಾಗಿದೆ. ಸ್ಥಳೀಯ ಸರ್ಕಾರಿ ಸಂಸ್ಥೆಗಳಿಗೆ ಈ ಸಂಬಂಧ ಫೇಸ್‌ಬುಕ್‌ ಹಾಗೂ ಟ್ವಿಟರ್‌ ಮೂಲಕ ಅಧಿಕ ದೂರುಗಳು ಬರುತ್ತಿವೆ.

ಈ ಹಿನ್ನೆಲೆಯಲ್ಲಿ ಕೊನೆಪಕ್ಷ ಅತಿ ಹೆಚ್ಚು ದಟ್ಟಣೆ ಇರುವ ಕಾರಿಡಾರ್‌ಗಳನ್ನಾದರೂ ಈ “ಮೃತ್ಯುಕೂಪ’ಗಳಿಂದ ಮುಕ್ತಗೊಳಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದ್ದು, ಇದಕ್ಕಾಗಿ ಸಂಬಂಧಪಟ್ಟ ಇಲಾಖೆಗಳಿಗೆ ಮೂರು ವಾರಗಳ ಗಡುವು ವಿಧಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ನಗರದ 12 “ಹೈ ಡೆನ್ಸಿಟಿ ಕಾರಿಡಾರ್‌’ (ಅತಿ ಹೆಚ್ಚು ವಾಹನ ದಟ್ಟಣೆ ಮಾರ್ಗ)ಗಳ ಸಮೀಕ್ಷೆ ನಡೆಸಿ, ಜಲಮಂಡಳಿ, ಬೆಸ್ಕಾಂ, ಒಎಫ್ಸಿ ವಿಭಾಗ ಸೇರಿದಂತೆ ವಿವಿಧ ಇಲಾಖೆಗಳಿಗೆ ವರದಿ ಸಲ್ಲಿಸಿದೆ.

ಅದನ್ನು ಆಧರಿಸಿ ಹೊಸ ವರ್ಷದ ಮೊದಲ ವಾರದ ಒಳಗೆ ರಸ್ತೆಯಲ್ಲಿರುವ ಈ ಏರಿಳಿತಗಳ ಚೆಂಬರ್‌ಗಳನ್ನು ಸಮತಟ್ಟುಗೊಳಿಸಲು ನಿರ್ಧರಿಸಲಾಗಿದೆ. ಗಂಟೆಗೆ 20 ಸಾವಿರಕ್ಕಿಂತ ಅಧಿಕ ವಾಹನಗಳು ಸಂಚರಿಸುವ ರಸ್ತೆಗಳನ್ನು ಹೈಡೆನ್ಸಿಟಿ ಕಾರಿಡಾರ್‌ ಎಂದು ಗುರುತಿಸಲಾಗಿದೆ. ಅದರಂತೆ ನಗರದ ಉಳಿದ ರಸ್ತೆಗಳಿಗೆ ಹೋಲಿಸಿದರೆ, ಈ ಕಾರಿಡಾರ್‌ಗಳಲ್ಲಿ ವಾಹನದಟ್ಟಣೆ ಹಲವುಪಟ್ಟು ಅಧಿಕ. ಹಾಗಾಗಿ, ವೇಗಮಿತಿ ಕೂಡ ತುಂಬಾ ಕಡಿಮೆ ಇರುತ್ತದೆ.

ಅಂತಹ ಕಡೆಗಳಲ್ಲಿ ಈ ಸಮತಟ್ಟಲ್ಲದ ಮ್ಯಾನ್‌ಹೋಲ್‌ ಅಥವಾ ಚೆಂಬರ್‌ಗಳಿಂದ ವಾಹನಗಳು ಮತ್ತಷ್ಟು ಮಂದಗತಿಯಲ್ಲಿ ಸಾಗುತ್ತವೆ. ‌ ಕೆಲವು ಕಡೆ ಇವು ರಸ್ತೆಯ ಮೇಲ್ಮೈಗಿಂತ ಒಂದರಿಂದ ಒಂದೂವರೆ ಅಡಿ ಮೇಲೆ ಬಂದಿದ್ದರೆ, ಹಲವೆಡೆ ಒಂದು ಅಡಿಯಷ್ಟು ಕೆಳಗಿರುತ್ತವೆ. ಆ ಮಾರ್ಗದಲ್ಲಿ ಬರುವ ವಾಹನಗಳು ಇವುಗಳನ್ನು ತಪ್ಪಿಸಲು ಮುಂದಾದಾಗ, ಹಿಂದಿನ ವಾಹನಗಳು ಬಂದು ಡಿಕ್ಕಿಹೊಡೆಯುವ ಸಾಧ್ಯತೆ ಹೆಚ್ಚಿರುತ್ತದೆ ಅಥವಾ ಕೆಲ ಸಲ ಸವಾರರೇ ಆಯತಪ್ಪಿ ಬೀಳುತ್ತಾರೆ.

Advertisement

ಉದ್ದೇಶಿತ 193 ಕಿ.ಮೀ. ಉದ್ದದ 12 ಕಾರಿಡಾರ್‌ಗಳಲ್ಲಿ ಪ್ರತಿ ಕಿ.ಮೀ.ಗೆ ಮೂರರಿಂದ ನಾಲ್ಕು ಸಮತಟ್ಟಾಗಿರದ ಮ್ಯಾನ್‌ಹೋಲ್‌ ಅಥವಾ ಚೆಂಬರ್‌ಗಳು ಎದುರಾಗುತ್ತವೆ. ಅಂದರೆ ಸರಿಸುಮಾರು 660ಕ್ಕೂ ಹೆಚ್ಚು ಈ ರೀತಿಯ ಉಬ್ಬು-ತಗ್ಗುಗಳನ್ನು ಗುರುತಿಸಲಾಗಿದೆ. ಈ ಪೈಕಿ ಒಎಫ್ಸಿ ಕೇಬಲ್‌ ಅಳವಡಿಕೆಯಿಂದ ಉದ್ಭವಿಸಿದ ಚೆಂಬರ್‌ಗಳೇ 419 ಹಾಗೂ ಮ್ಯಾನ್‌ಹೋಲ್‌ಗ‌ಳು 210 ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಎಸ್‌. ಸೋಮಶೇಖರ್‌ ಮಾಹಿತಿ ನೀಡಿದರು. ಇವುಗಳನ್ನು ಸರಿಪಡಿಸಲು 3ರಿಂದ 4 ವಾರಗಳ ಕಾಲಾವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಗರದಲ್ಲಿ 3,200ಕ್ಕೂ ಅಧಿಕ: ನಗರದಾದ್ಯಂತ ಸುಮಾರು 6 ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ಜಲಮಂಡಳಿಯ 2.04 ಲಕ್ಷ ಮ್ಯಾನ್‌ಹೋಲ್‌ಗ‌ಳು, 4,800ಕ್ಕೂ ಅಧಿಕ ಬೆಂಗಳೂರು ವಿದ್ಯುತ್‌ ಸರಬರಾಜು ಸಂಸ್ಥೆ (ಬೆಸ್ಕಾಂ), ಕರ್ನಾಟಕ ವಿದ್ಯುತ್‌ ಸರಬರಾಜು ನಿಗಮ (ಕೆಪಿಟಿಸಿಎಲ್‌)ಕ್ಕೆ ಸೇರಿದ ಚೆಂಬರ್‌ಗಳಿವೆ. ಇದರಲ್ಲಿ ಈ ರೀತಿಯ 3,200ಕ್ಕೂ ಅಧಿಕ ಸಮತಟ್ಟಾಗಿರದ ಮ್ಯಾನ್‌ಹೋಲ್‌ಗ‌ಳು ಇವೆ. ಪ್ರಸಕ್ತ ಸಾಲಿನಲ್ಲಿ 15 ಸಾವಿರಕ್ಕೂ ಅಧಿಕ ಮ್ಯಾನ್‌ಹೋಲ್‌ಗ‌ಳನ್ನು ಜಲಮಂಡಳಿ ಸಮತಟ್ಟುಗೊಳಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಸಮತಟ್ಟಲ್ಲದ ಮ್ಯಾನ್‌ಹೋಲ್‌ಗ‌ಳನ್ನು ಬಿಬಿಎಂಪಿ ಸಮೀಕ್ಷೆ ಮಾಡಿ, ನಮಗೆ ವರದಿ ಸಲ್ಲಿಸಿದೆ. ಅವುಗಳನ್ನು ಸಮತಟ್ಟು ಮಾಡುವ ಕೆಲಸ ಪ್ರಗತಿಯಲ್ಲಿದೆ. ಜನವರಿ ಮೊದಲ ವಾರದ ಒಳಗೆ 12 ಕಾರಿಡಾರ್‌ಗಳ ಎಲ್ಲ ಮ್ಯಾನ್‌ಹೋಲ್‌ಗ‌ಳು ರಸ್ತೆಮಟ್ಟಕ್ಕೆ ದುರಸ್ತಿ ಮಾಡಲಾಗುವುದು’ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ಸಮತಟ್ಟು ಯಾಕಿಲ್ಲ?: ಮ್ಯಾನ್‌ಹೋಲ್‌ ಅಥವಾ ಚೆಂಬರ್‌ಗಳನ್ನು ಉದ್ದೇಶಪೂರ್ವಕವಾಗಿ ರಸ್ತೆಮಟ್ಟಕ್ಕಿಂತ ತುಸು ಎತ್ತರಕ್ಕೆ ನಿರ್ಮಿಸಲಾಗಿರುತ್ತದೆ. ಮುಂಬರುವ ದಿನಗಳಲ್ಲಿ ಆ ರಸ್ತೆಗಳ ದುರಸ್ತಿ ಮಾಡಿದಾಗ ಮ್ಯಾನ್‌ಹೋಲ್‌ಗ‌ಳು ಅದಕ್ಕೆ ಸಮತಟ್ಟಾಗಲಿ ಎಂದು ಈ ಕ್ರಮ ಅನುಸರಿಸಲಾಗುತ್ತದೆ. ಆದರೆ, ಆರಂಭಿಕ ಎರಡು-ಮೂರು ವರ್ಷಗಳು ಈ ಮ್ಯಾನ್‌ಹೋಲ್‌ ಸ್ಟ್ರಕ್ಚರ್‌ಗಳು ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿದ್ದರೆ, ನಾಲ್ಕಾರು ವರ್ಷಗಳ ನಂತರ ರಸ್ತೆ ಮಟ್ಟಕ್ಕಿಂತ ಕೆಳಗೆ ಹೋಗುತ್ತವೆ. ಈ ನಿಟ್ಟಿನಲ್ಲಿ ಹೇಳುವುದಾದರೆ, ಒಂದಲ್ಲಾ ಒಂದು ರೀತಿ ಸಮಸ್ಯೆಯಾಗಿ ಪರಿಣಮಿಸುತ್ತವೆ. ಆದ್ದರಿಂದ ನಿರ್ಮಾಣಕ್ಕೆ ಅನುಸರಿಸುವ ಕ್ರಮದಲ್ಲಿ ಬದಲಾವಣೆ ಆಗಬೇಕಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

-3200 ನಗರದಲ್ಲಿರುವ ಸಮತಟ್ಟಲ್ಲದ ಮ್ಯಾನ್‌ಹೋಲ್‌/ಚೆಂಬರ್‌ಗಳು
-419 ಕಾರಿಡಾರ್‌ಗಳಲ್ಲಿನ ಸಮತಟ್ಟಲ್ಲದ ಒಎಫ್ಸಿ ಚೆಂಬರ್‌ಗಳು
-210 ಸಮತಟ್ಟಲ್ಲದ ಮ್ಯಾನ್‌ಹೋಲ್‌ಗ‌ಳು
-193 ಕಿ.ಮೀ. ಹೈಡೆನ್ಸಿಟಿ ಕಾರಿಡಾರ್‌ ಉದ್ದ
-19 ನೀರಿನ ವಾಲ್ವ್ ಚೆಂಬರ್‌ಗಳು

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next