Advertisement

ಜಾಗ ಮಂಜೂರು: ಗ್ರಾಮಸ್ಥರಿಂದ ಪ್ರತಿಭಟನೆ

04:29 PM Feb 19, 2020 | Suhan S |

ಕನಕಪುರ: ತಾಲೂಕಿನ ಕಸಬಾ ಹೋಬಳಿಯ ಬರಡನಹಳ್ಳಿ ಸರ್ವೆ ನಂ. 40ರ 5 ಎಕರೆ ಸರ್ಕಾರಿ ಗೋಮಾಳವನ್ನು ಸಾಗುವಳಿ ಮಾಡದ ಸತ್ತವರ ಹೆಸರಿಗೆ ತಹಶೀಲ್ದಾರ್‌ ಮಂಜೂರು ಮಾಡಿದ್ದಾರೆ. ಎಂದು ಆರೋಪಿಸಿ ಬರಡನಹಳ್ಳಿ ಚಾಕನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತಹಶೀಲ್ದಾರ್‌ ವಿರುದ್ಧ ಪ್ರತಿಭಟನೆ ನಡೆಸಿ ಆದೇಶವನ್ನು ರದ್ದು ಪಡಿಸುವಂತೆ  ಮನವಿ ಸಲ್ಲಿಸಿದರು.

Advertisement

ಪ್ರತತಿಭಟನೆಯಲ್ಲಿ ಚಾಕನಹಳ್ಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಹೇಶ್‌ ಮಾತನಾಡಿ, ಬರಡನಹಳ್ಳಿ ಸರ್ವೆ ನಂ. 40ರ 133 ಎಕರೆ ಸರ್ಕಾರಿ ಗೋಮಾಳದಲ್ಲಿ ಸಾಗುವಳಿ ಮಾಡದೆ ಮರಣ ಹೊಂದಿರುವ ಚಾಕನಹಳ್ಳಿ ಬೈರೇಗೌಡ ಎಂಬುವವರ ಹೆಸರಿಗೆ ತಹಶೀಲ್ದಾರ್‌ ಅಕ್ರಮವಾಗಿ ಐದು ಎಕರೆ ಜಾಗವನ್ನು ಮಂಜೂರು ಮಾಡಿದ್ದಾರೆ. ಸದರಿ ಈ ಗೋಮಾಳವನ್ನು ಬರಡನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ ದನಕರುಗಳ ಮೇವಿಗೆ ಮೀಸಲಿಡಲಾಗಿತ್ತು. ಅಲ್ಲದೆ ಸುಮಾರು 50-60 ವರ್ಷಗಳಿಂದಲೂ ಗೋಮಾಳದ ಜಾಗವನ್ನು ಯಾವುದೇ ವ್ಯಕ್ತಿಗೆ ಮಂಜೂರು ಮಾಡದೆ, ದನಕರುಗಳ ಮೇವಿಗೆ ಮೀಸಲಿಡಬೇಕು ಎಂದು ಹೋರಾಟ ಮಾಡಿಕೊಂಡು ಬಂದಿದ್ದೇವೆ ಎಂದು ಹೇಳಿದರು.

ಆದೇಶ ರದ್ದುಪಡಿಸಿ: ಗೋಮಾಳ ಜಾಗದಲ್ಲಿ 30 ಎಕರೆ ಜಾಗವನ್ನು ನವೋದಯ ಶಾಲೆಗೆ ಸರ್ಕಾರದಿಂದ ಮಂಜೂರು ಮಾಡಲಾಗಿದೆ. ಈ ಜಮೀನನ್ನು ಸರ್ಕಾರದ ಯೋಜನೆ ಹಾಗೂ ಸಾರ್ವಜನಿಕರ ಅನುಕೂಲ ಅಥವಾ ದನಕರುಗಳ ಮೇವಿಗೆ ಬಳಸಿಕೊಳ್ಳಲು ಗ್ರಾಮಸ್ಥರಿಂದ ಯಾವುದೇ ಆಕ್ಷೇಪಣೆ ಇಲ್ಲ. ಆದರೆ ಸಾಗುವಳಿ ಮಾಡದೆ 30 ವರ್ಷಗಳ ಹಿಂದೆಯೇ ಮರಣ ಹೊಂದಿರುವ ವ್ಯಕ್ತಿಯ ಹೆಸರಿಗೆ ಮಂಜೂರು ಮಾಡಿರುವುದು ಸರಿಯಲ್ಲ ಕೂಡಲೇ ಆದೇಶವನ್ನು ರದ್ದುಪಡಿಸಿ ಸರ್ಕಾರಿ ಗೋಮಾಳ ವನ್ನು ಉಳಿಸಬೇಕು ಎಂದು ಆಗ್ರಹಿಸಿದರು.

ಬರಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್‌.ಗಿರೀಶ್‌ ಮಾತನಾಡಿ, ಹಿಂದೆ ಇದ್ದ ತಹಶೀಲ್ದಾರ್‌ ಆನಂದಯ್ಯ ಅವರ ಅವಧಿಯಲ್ಲಿ ಸರ್ಕಾರಿ ಗೋಮಾಳದ ಜಾಗದಲ್ಲಿ ಸಾಗುವಳಿ ಮಾಡುತ್ತಿರುವ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿ ಜಮೀನು ಮಂಜೂರು ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸದೆ ಸ್ಥಳ ಪರಿಶೀಲನೆ ನಡೆಸಿ ಸಾಗುವಳಿ ಮಾಡದೇ ಇರುವುದನ್ನು ದೃಢಪಡಿಸಿಕೊಂಡು ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು. ಆದರೆ ಇತ್ತಿಚೆಗೆ ಬಂದ ಅಧಿಕಾರಿಗಳು ಸತ್ತವರ ಹೆಸರಿನಲ್ಲಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿ ಸ್ಥಳ ಪರಿಶೀಲಿಸದೆ ಗ್ರಾಮ ಲೆಕ್ಕಾಧಿಕಾರಿಗಳ ಗಮನಕ್ಕೆ ತರದೆ ಗ್ರಾಮಸ್ಥರ ಹೇಳಿಕೆ ಪಡೆಯದೆ ಐದು ಎಕರೆ ಸರ್ಕಾರಿ ಗೋಮಾಳವನ್ನು ಮಂಜೂರು ಮಾಡಿರುವುದು ಕಾನೂನು ಬಾಹಿರವಾಗಿದ್ದು ಕೂಡಲೇ ಬೈರೇಗೌಡ ಎಂಬುವವರ ಹೆಸರಿಗೆ ಮಂಜೂರು ಮಾಡಿರುವ ಸರ್ಕಾರಿ ಗೋಮಾಳವನ್ನು ರದ್ದುಗೊಳಿಸಬೇಕು. ಅಥವಾ

ಜಿಲ್ಲಾಧಿಕಾರಿಗಳು ಸದರಿ ವ್ಯಕ್ತಿ ಸರ್ವೆ ನಂ. 40ರಲ್ಲಿ  ಸಾಗುವಳಿ ಮಾಡುತ್ತಿರುವ ಬಗ್ಗೆ ಮಹಜರು ಮಾಡಿ ತೀರ್ಮಾನಿಸಿ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಕಾನೂನು ರೀತಿಯ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ತಹಶೀಲ್ದಾರ್‌ ವರ್ಷ ಒಡೆಯರ್‌ ಮಾತನಾಡಿ, ಹಿಂದೆ ಇದ್ದ ತಹಶೀಲ್ದಾರ್‌ ಆನಂದಯ್ಯ ಎರಡು ತಿಂಗಳ ಒಳಗಾಗಿ ಜಮೀನು ಮಂಜೂರು ಮಾಡಿಕೊಡುವುದಾಗಿ ಹೈಕೋರ್ಟ್‌ನಲ್ಲಿ ಅಪಿಡೆವಿಟ್‌ ಸಲ್ಲಿಸಿದ್ದರು. ಹಾಗಾಗಿ ಹೈಕೋರ್ಟ್‌ ಆದೇಶದಂತೆ ಜಮೀನು ಮಂಜೂರು ಮಾಡಿದ್ದೇನೆ. ಹೈಕೋರ್ಟ್‌ ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯಾಗಿತ್ತಿತ್ತು. ಸ್ಥಳ ಪರಿಶೀಲನೆ ವೇಳೆ ಜಮೀನಿನಲ್ಲಿ ಸಾಗುವಳಿ ಮಾಡಿತ್ತಿರುವ ದಾಖಾಲಾತಿ ನೀಡಿದ್ದಾರೆ ಎಂದು ಹೇಳಿದರು. ಚಾಕನಹಳ್ಳಿ ಗ್ರಾಪಂ ಸದಸ್ಯ ಎನ್‌.ರವಿ, ಮಾಜಿ ಅಧ್ಯಕ್ಷ ಚಂದ್ರಶೇಖರ್‌ ಸೇರಿದಂತೆ ಚಾಕನಹಳ್ಳಿ ಹಾಗೂ ಬರಡನಹಳ್ಳಿ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next