ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಗೆಲುವು ಸಾಧಿಸಿದೆ. ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾರತ ತಂಡ 151 ರನ್ ಅಂತರದ ಐತಿಹಾಸಿಕ ಗೆಲುವು ಸಾಧಿಸಿತ್ತು. ಭಾರತ ತಂಡದ ಗೆಲುವಿನಲ್ಲಿ ಪ್ರತಿಯೊಬ್ಬ ಆಟಗಾರರು ಕೊಡುಗೆ ನೀಡಿದ್ದರು. ತಂಡದ ಈ ಪ್ರದರ್ಶನದ ಹಿಂದಿನ ಕಾರಣವನ್ನು ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ತೆರೆದಿಟ್ಟಿದ್ದಾರೆ.
ಆರ್.ಅಶ್ವಿನ್ ಜೊತೆ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಶ್ರೀಧರ್, ಮೂರನೇ ದಿನದಾಟದಲ್ಲಿ ನಡೆದ ಘಟನೆಯೇ ಇದಕ್ಕೆ ಕಾರಣ ಎಂದಿದ್ದಾರೆ.
ಇದನ್ನೂ ಓದಿ:ಐಪಿಎಲ್ 2021: ದುಬೈನಲ್ಲಿ ಅಭ್ಯಾಸ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್
ಮೊದಲ ಇನ್ನಿಂಗ್ಸ್ ನಲ್ಲಿ ಜೇಮ್ಸ್ ಆ್ಯಂಡರ್ಸನ್ ಬ್ಯಾಟಿಂಗ್ ಮಾಡಲು ಬಂದಾಗ ಬುಮ್ರಾ ಬೌಲಿಂಗ್ ಮಾಡುತ್ತಿದ್ದರು. ಜಿಮ್ಮಿ ಗೆ ಬುಮ್ರಾ 90 ಮೈಲಿ ಪ್ರತಿ ಕಿ.ಮೀ ವೇಗದಲ್ಲಿ ಬಾಲ್ ಎಸೆದಿದ್ದರು. ಇದರಿಂದ ಕೋಪಗೊಂಡ ಆ್ಯಂಡರ್ಸನ್, ನೀನು ಎಲ್ಲರಿಗೂ ಕಡಿಮೆ ವೇಗದಲ್ಲಿ ಬಾಲ್ ಹಾಕುತ್ತಿದ್ದೆ, ನನಗೆ ಮಾತ್ರ ವೇಗವಾಗ ಹಾಕುತ್ತಿದ್ದೀಯ ಎಂದು ರೇಗಿದ್ದರು ಎಂದು ಶ್ರೀಧರ್ ಹೇಳಿದರು. ಆ್ಯಂಡರ್ಸನ್ ರ ಈ ಹೇಳಿಕೆ ನನಗೆ ಆಶ್ಚರ್ಯ ಉಂಟು ಮಾಡಿದೆ ಎಂದು ರವಿ ಅಶ್ವಿನ್ ಪ್ರತಿಕ್ರಿಯೆ ನೀಡಿದರು.
ದಿನದಾಟದ ಬಳಿಕ ಆಟಗಾರರು ಡ್ರೆಸ್ಸಿಂಗ್ ರೂಮ್ ಕಡೆಗೆ ತೆರಳುವಾಗ ಆ್ಯಂಡರ್ಸನ್ ಬಳಿ ಹೋದ ಬುಮ್ರಾ, ನಾನು ಉದ್ದೇಶಪೂರ್ವಕವಾಗಿ ಅಷ್ಟೊಂದು ವೇಗವಾಗಿ ಬಾಲ್ ಹಾಕಿರಲಿಲ್ಲ ಎಂದರು. ಆದರೆ ದರ್ಪ ತೋರಿದ ಜಿಮ್ಮಿ, ಬುಮ್ರಾರನ್ನು ತಳ್ಳುತ್ತಾ, ನೀನು ನನಗೆ ಮಾತ್ರ 90 ಮೈಲಿ ವೇಗದಲ್ಲಿ ಬಾಲ್ ಹಾಕಿದ್ದೆ. ಅದು ಮೋಸ. ನಾನದನ್ನು ಒಪ್ಪುವುದಿಲ್ಲ ಎಂದಿದ್ದರು.
ಈ ಘಟನೆ ಟೀಂ ಇಂಡಿಯಾದ ಆಟಗಾರರನ್ನು ಕೆರಳಿಸಿತ್ತು. ಇದರಿಂದಾಗಿ ಎಲ್ಲರೂ ಒಂದಾಗಿ ಆಡಿದ್ದರು. ಇದರಿಂದ ಗೆಲುವು ಸಾಧ್ಯವಾಯಿತು ಎಂದಿದ್ದಾರೆ ಶ್ರೀಧರ್.