ತಿ.ನರಸೀಪುರ: ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಅಧಿಕಾರಿಗಳ ತಂಡದೊಂದಿಗೆ ಕ್ಷೇತ್ರ ಪ್ರವಾಸ ಮಾಡಿ ಹಳ್ಳಿಗಾಡಿನ ಸಮಸ್ಯೆಗಳನ್ನು ಪಟ್ಟಿಮಾಡಿ, ಅಭಿವೃದ್ಧಿ ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗುವುದು ಎಂದು ಶಾಸಕ ಎಂ.ಅಶ್ವಿನ್‌ಕುಮಾರ್ ಹೇಳಿದರು.
ತಾಲ್ಲೂಕಿನ ಮಲಿಯೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 30 ಲಕ್ಷ ರೂ. ವೆಚ್ಚದ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದರು. ಜು.12ರ ನಂತರ ತಾಲೂಕು ಆಡಳಿತವನ್ನು ಖುದ್ದಾಗಿ ಕರೆದುಕೊಂಡು ಬಂದು ಗ್ರಾಮಿಣ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚೊಚ್ಚಲ ಆಯವ್ಯಯದಲ್ಲಿ ರೈತರ ಸಾಲಮನ್ನಾ ಮಾಡುವ ಮೂಲಕ ತಾವು ರೈತಪರ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕ್ಷೇತ್ರಕ್ಕೆ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಅವರ ಗಮನಕ್ಕೆ ತಂದು ಅನುದಾನ ತರುತ್ತೇನೆ ಎಂದರು.
ನೀರುಣಿಸಲು ಸೂಚನೆ: ಈಗಾಗಲೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ನೀರುಗಂಟಿಗಳ ಸಭೆ ನಡೆಸಿ ಮುಂಗಾರು ಕೃಷಿಗೆ ಎಲ್ಲಾ ಅಚ್ಚುಕಟ್ಟು ಪ್ರದೇಶಗಳ ರೈತರಿಗೆ ನೀರು ಹರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಕೆರೆಗಳಿಗೆ ನೀರು ತುಂಬಿಸಲು ಆದ್ಯತೆ ನೀಡುವಂತೆ ತಾಕೀತು ಮಾಡಿದ್ದೇನೆ ಎಂದು ತಿಳಿಸಿದರು.
ಮಲಿಯೂರು ಗ್ರಾಮಕ್ಕೆ ಆಗಮಿಸಿ ಶಾಸಕರನ್ನು ಗ್ರಾಮಸ್ಥರು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಬರಮಾಡಿಕೊಂಡರು. ಈ ವೇಳೆ ಗ್ರಾಪಂ ಅಧ್ಯಕ್ಷೆ ದೊಡ್ಡಮ್ಮ ಸಿದ್ದಯ್ಯ, ತಾಪಂ ಸದಸ್ಯ ಎಚ್.ಜವರಯ್ಯ, ಎಪಿಎಂಸಿ ಅಧ್ಯಕ್ಷ ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ಕೆ.ಕುಮಾರಸ್ವಾಮಿ, ಗ್ರಾಪಂ ಸದಸ್ಯರಾದ ಶಶಿಕಲಾ, ಅನ್ನಪೂರ್ಣ, ಲೋಕೋಪಯೋಗಿ ಇಲಾಖೆ ಎಇಇ ಎಚ್.ಎಂ.ಶಿವಶಂಕರಯ್ಯ,
ಸಹಾಯಕ ಎಂಜಿನಿಯರ್ ಸತೀಶ್ ಚಂದ್ರನ್, ಗುತ್ತಿಗೆದಾರ ಸಿ.ವೈ.ಚಿಕ್ಕಯಾಲಕ್ಕಿಗೌಡ, ಎಎಸ್‌ಐ ಬಿ.ವೈ.ಶಿವಣ್ಣ, ದಫೆದಾರ್ ಶ್ರೀನಿವಾಸ್, ಮುಖಂಡರಾದ ಪಂಚೆ ದೊಳ್ಳಯ್ಯ, ಡಿ.ಶಂಕರ, ದೀಪುದರ್ಶನ್, ನಂಜಾಪುರ ಸೋಮಣ್ಣ, ಮೇಸಿŒ ದೊಡ್ಡಯ್ಯ, ಗುಡ್ಡಪ್ಪಚಂದ್ರು, ಮಹೇಶ್, ಬಸವನಹಳ್ಳಿ ರಾಜಣ್ಣ ಇತರರಿದ್ದರು.