Advertisement

ಪಕ್ಷಕ್ಕಾಗಿ ಕ್ಷೇತ್ರ ತ್ಯಾಗ ಅನಿವಾರ್ಯ

07:35 AM Mar 17, 2019 | Team Udayavani |

ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ಜೆಡಿಎಸ್‌ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ. ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಾರ್ಯಕರ್ತರು ಹಾಗೂ ನಾಯಕರು ಭ್ರಮ ನಿರಸಗೊಂಡಿರುವುದು ಸರಿ. ರಾಷ್ಟ್ರ ರಾಜಕಾರಣ ಹಿನ್ನೆಲೆಯಲ್ಲಿ ಇಂತಹ ಸ್ಥಿತಿ ಬಂದೊದಗಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ| ಡಿ.ಎಲ್‌.ವಿಜಯಕುಮಾರ್‌ ಮನವಿ ಮಾಡಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಅವರು, ಈಗಾಗಲೇ ಎರಡು ಜಿಲ್ಲೆಯ ನಾಯಕರು ರಾಜ್ಯ ಹಾಗೂ ಎಐಸಿಸಿ ಪ್ರಮುಖರಿಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಕಾಂಗ್ರೆಸ್‌ ಅಭ್ಯರ್ಥಿ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು ಎಂಬ ಬಗ್ಗೆ ಒತ್ತಾಯಿಸಲಾಗಿದೆ. ಇಂದಿರಾ ಗಾಂಧಿಗೆ ರಾಜಕೀಯ ಮರುಜನ್ಮ ನೀಡಿದ ಈ ಕ್ಷೇತ್ರ ಭಾವನಾತ್ಮಕ ದೃಷ್ಟಿಯಲ್ಲಿದೆ. ಜೆಡಿಎಸ್‌ಗಿಂತಲೂ ಕಾಂಗ್ರೆಸ್‌ ಶಕ್ತಿಯುತವಾಗಿದೆ. ಈಗಾಗಲೇ ಆ ಪಕ್ಷದ ಮುಖಂಡರು ವಿಧಾನ ಪರಿಷತ್‌ ಉಪಾಧ್ಯಕ್ಷ ಎಸ್‌.ಎಲ್‌ ಧರ್ಮೇಗೌಡರು ವಾಸ್ತವದ
ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್‌ ಅಭ್ಯರ್ಥಿ ಸ್ಪರ್ಧೆ ಒಳಿತು ಎಂದಿರುವುದು ಸ್ವಾಗತಾರ್ಹವಾದುದಾಗಿದೆ. ರಾಜಕಾರಣದಲ್ಲಿ
ಸತ್ಯ ಹೇಳುವ ಧೈರ್ಯ ಮಾಡಿರುವ ಅವರ ಹೇಳಿಕೆಯನ್ನು ಪಕ್ಷ ಸ್ವಾಗತಿಸುತ್ತದೆ. ಸ್ವತಹ ಪ್ರಬಲ ಆಕಾಂಕ್ಷಿಯಾದ ನನ್ನನ್ನು ಸೇರಿದಂತೆ ಇತರ ಆಕಾಂಕ್ಷಿಗಳು ಈ ವಾಸ್ತವ ಪರಿಸ್ಥಿತಿ ಹಾಗೂ ಕಟು ಸತ್ಯ ಅರಿತು ಪಕ್ಷದ ಒಳಿತಿಗಾಗಿ ತ್ಯಾಗ ಮಾಡಬೇಕು ಎಂದಿದ್ದಾರೆ.

ಇನ್ನೂ ಕಾಲ ಮಿಂಚಿಲ್ಲ ಕಾಂಗ್ರೆಸ್‌ ನವರ ಒತ್ತಡ, ಜೆಡಿಎಸ್‌ನವರ ವಾಸ್ತವ ಮಾತುಗಳು ಕಾಂಗ್ರೆಸ್‌ ಅಭ್ಯರ್ಥಿ ಸ್ಪರ್ಧೆಗೆ ಅವಕಾಶವಾಗಲೂಬಹುದು. ಆದ್ದರಿಂದ ಪಕ್ಷದ ಕಾರ್ಯಕರ್ತರು ಎದೆಗುಂದಬಾರದು ಮತ್ತು ಒತ್ತಾಯ ಇರಬೇಕೆ ಹೊರತು ಚಳುವಳಿಯ ಮೂಲಕ ಪಕ್ಷದ ಮುಖಂಡರನ್ನು ನಿಂದಿಸುವ ಹೇಳಿಕೆಗಳನ್ನು ಸಹಿಸಲಾಗದು ಎಂದು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ 20 ಸ್ಥಾನಗಳಲ್ಲಿ ಜೆಡಿಎಸ್‌ ನವರ ಬೆಂಬಲ ಪಡೆದು, ಉಳಿದ 8 ಸ್ಥಾನಗಳಲ್ಲಿ ಅವರಿಗೆ ಬೆಂಬಲ ನೀಡುವುದು ಅನಿವಾರ್ಯ. ಈ ಕೊಡು-ಕೊಳ್ಳುವಿಕೆಯ ಮಧ್ಯೆ ನೋವು ಇರುತ್ತದೆ. ಇದೆಲ್ಲವನ್ನು ಅರ್ಥ ಮಾಡಿಕೊಂಡು ದೂರದೃಷ್ಟಿಯಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನವನ್ನು ಗಳಿಸುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್‌ ಪಕ್ಷದ ಸರ್ಕಾರವನ್ನು ಪುನಹ ಆರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದದಾರೆ.

Advertisement

Udayavani is now on Telegram. Click here to join our channel and stay updated with the latest news.

Next