Advertisement

ಅಭ್ಯರ್ಥಿ ಘೋಷಣೆ ನಂತರ ಕ್ಷೇತ್ರ ಚಿತ್ರಣ

03:46 PM Mar 25, 2019 | Team Udayavani |

ಕೋಲಾರ: ನಾಮಪತ್ರ ಸಲ್ಲಿಕೆಗೆ ಎರಡೇ ದಿನ ಬಾಕಿ ಉಳಿದಿರುವಾಗ ಕೋಲಾರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ ಮತ್ತು ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

Advertisement

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪಗೆ ಸ್ವಪಕ್ಷೀಯರ ವಿರೋಧ ಮರೆಸುವಂತೆ ಜೆಡಿಎಸ್‌ ಬೆಂಬಲಕ್ಕೆ ನಿಂತಿದ್ದರೆ, ಬಿಜೆಪಿ ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆಯೇ ಆ ಪಕ್ಷದ ಪಾಳೆಯದ ಉತ್ಸಾಹ ಅರ್ಧಕ್ಕೆ ಕುಸಿದಂತೆ ಕಾಣಿಸುತ್ತಿದೆ.

ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ವಿರುದ್ಧ ಸೆಡ್ಡು ಹೊಡೆದಿರುವ ಕಾಂಗ್ರೆಸ್‌ ಶಾಸಕರು ಕದನ ವಿರಾಮ ಘೋಷಿಸಿದ್ದು, ಯಾವುದೇ ಹೇಳಿಕೆ ನೀಡದೆ ತೆರೆಮರೆಯ ಕಾರ್ಯಾಚರಣೆಗೆ ಸಜ್ಜಾಗುತ್ತಿದ್ದಾರೆ.

ಕಾಂಗ್ರೆಸ್‌: ಕಾಂಗ್ರೆಸ್‌ ಪಕ್ಷದಿಂದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆದ್ದು, ಎಂಟನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಲು ಕೆ.ಎಚ್‌.ಮುನಿಯಪ್ಪ ಸಜ್ಜಾಗುತ್ತಿದ್ದರು. ಇವರಿಗೆ ಆಘಾತವಾಗುವಂತೆ ಇವರದ್ದೇ ಕಾಂಗ್ರೆಸ್‌ ಜೆಡಿಎಸ್‌ನ ನಾಲ್ವರು ಶಾಸಕರು ಕೆ.ಎಚ್‌.ಮುನಿಯಪ್ಪರಿಗೆ ಈ ಬಾರಿ ಟಿಕೆಟ್‌ ನೀಡದಂತೆ ಮಾಡಲು ದೆಹಲಿ ಯಾತ್ರೆ ಕೈಗೊಂಡಿದ್ದರು.

ಆದರೆ, ಯಾತ್ರೆಯು ಯಾವುದೇ ರೀತಿಯಿಂದಲೂ ಫ‌ಲ ನೀಡಲಿಲ್ಲ ಎನ್ನುವುದು ಕೆ.ಎಚ್‌.ಮುನಿಯಪ್ಪರಿಗೆ ಟಿಕೆಟ್‌ ಘೋಷಣೆಯಾಗಿರುವುದು ದೃಢಪಡಿಸಿದೆ. ಟಿಕೆಟ್‌ ಘೋಷಣೆಯಾಗುವವರೆಗೂ ಕೆ.ಎಚ್‌.ಮುನಿಯಪ್ಪ ವಿರುದ್ಧ ಗುಟುರು ಹಾಕುತ್ತಿದ್ದ ಶಾಸಕರು ಕೆ.ಎಚ್‌.ಮುನಿಯಪ್ಪರಿಗೆ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆಯೇ ಸದ್ದಡಗಿಸಿಕೊಂಡಿದ್ದಾರೆ.

Advertisement

ಹಾಗಂತ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧರಾಗಿದ್ದಾರೆ ಎಂದು ಭಾವಿಸುವಂತಿಲ್ಲ. ಏಕೆಂದರೆ, ಈ ಬಾರಿ ಕೆ.ಎಚ್‌.ಮುನಿಯಪ್ಪರನ್ನು ಸೋಲಿಸಲೇಬೇಕೆಂದು ಈ ಗುಂಪು ಪಣ ತೊಟ್ಟಿದೆ. ಇದಕ್ಕೆ ಪೂರಕವಾಗಿ ಕೆ.ಎಚ್‌.ಮುನಿಯಪ್ಪರ ಆಸ್ತಿ ವಿಚಾರಗಳು ಈಗಾಗಲೇ ಮೂರು ಸುದ್ದಿಗೋಷ್ಠಿಗಳ ಮೂಲಕ ಹೊರ ಹಾಕುವಂತೆ ಮಾಡಲಾಗಿದೆ.

ಆದರೆ, ಕಾಂಗ್ರೆಸ್‌ ಪಕ್ಷದಲ್ಲಿ ತಮ್ಮ ಶಕ್ತಿ ಸಾಮರ್ಥ್ಯಗಳ ಮೇಲೆ ನಂಬಿಕೆ ಇಟ್ಟಿರುವ ಕೆ.ಎಚ್‌.ಮುನಿಯಪ್ಪ ವಿರೋಧಿಗಳ ಯಾವುದೇ ಆರೋಪಕ್ಕೂ ಪ್ರತಿಕ್ರಿಯಿಸಿಲ್ಲ. ಅಕ್ರಮ ಆಸ್ತಿ ಸಂಪಾದನೆಯ ಸರಣಿ ಸುದ್ದಿಗೋಷ್ಠಿ ನಡೆಸಿದವರ ಬಗ್ಗೆಯೂ ಚಕಾರವೆತ್ತಿಲ್ಲ. ಯಥಾಪ್ರಕಾರ ತಾವಾಯಿತು ತಮ್ಮ ಸಿದ್ಧತೆಯಾಯಿತು ಎಂಬಂತೆ ನಾಮಪತ್ರ ಸಲ್ಲಿಕೆಗೆ ಸಜ್ಜಾಗುತ್ತಿದ್ದಾರೆ.

ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಜನಸಾಗರವನ್ನು ಸೇರಿಸುವ ಮೂಲಕ ತಮ್ಮ ವಿರೋಧಿಗಳಿಗೆ ಉತ್ತರಿಸಬೇಕೆಂದು ಕೆ.ಎಚ್‌.ಮುನಿಯಪ್ಪ ತೀರ್ಮಾನಿಸಿದಂತಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಇಡೀ ದಿನ ನಾಮಪತ್ರ ಸಲ್ಲಿಕೆ ಸಂದರ್ಭಕ್ಕೆ ಜನರನ್ನು ಸೇರಿಸುವ ಕುರಿತು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಸಮ್ಮಿಶ್ರ ಧರ್ಮ ಪಾಲಿಸುವ ಜೆಡಿಎಸ್‌: ಈಗಾಗಲೇ ಕಾಂಗ್ರೆಸ್‌ ಜೆಡಿಎಸ್‌ ಅತೃಪ್ತರ ಬಣದಲ್ಲಿ ಗುರುತಿಸಿಕೊಂಡಿರುವ ಕೋಲಾರ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ, ಬಿಜೆಪಿಯತ್ತ ವಾಲುತ್ತಿರುವ ಮಾಲೂರು ಮಾಜಿ ಶಾಸಕ ಮಂಜುನಾಥಗೌಡ ಅವರನ್ನು ಹೊರತುಪಡಿಸಿ ಕ್ಷೇತ್ರ ವ್ಯಾಪ್ತಿಯ ಎಂಟು ತಾಲೂಕುಗಳ ಜೆಡಿಎಸ್‌ ಮುಖಂಡರು ಕೆ.ಎಚ್‌.ಮುನಿಯಪ್ಪರ ಬೆನ್ನಿಗೆ ನಿಂತಿದ್ದಾರೆ.

ಕೋಲಾರದಲ್ಲಿ ಭಾನುವಾರ ದಿಢೀರ್‌ ಪತ್ರಿಕಾಗೋಷ್ಠಿ ನಡೆಸಿ, ಕಾಯಾ ವಾಚಾ ಮನಸಾ ಪ್ರಾಮಾಣಿಕತೆಯಿಂದ ತಾವೆಲ್ಲರೂ ಕೆ.ಎಚ್‌.ಮುನಿಯಪ್ಪರ ಗೆಲುವಿಗೆ ಶ್ರಮಿಸುವುದಾಗಿ ಘೋಷಿಸುವ ಮೂಲಕ, ಪರೋಕ್ಷವಾಗಿ ಕಾಂಗ್ರೆಸ್‌ ಶಾಸಕರ ವಿರೋಧವನ್ನು ತಾವು ತುಂಬಿಕೊಡುತ್ತೇವೆ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.

ಕೆ.ಎಚ್‌.ಮುನಿಯಪ್ಪ ತಮ್ಮೆಲ್ಲ ಚುನಾವಣೆಗಳನ್ನು ಹೀಗೆ ಸ್ವಪಕ್ಷೀಯರ ಬೆಂಬಲಕ್ಕಿಂತಲೂ ಪರ ಪಕ್ಷೀಯರ ಬೆಂಬಲದ ಮೂಲಕವೇ ಗೆದ್ದಿರುವುದು ಇತಿಹಾಸವಾಗಿದೆ. ನಿರೀಕ್ಷಿಸಿದಂತೆಯೇ ಈಗಲೂ ಕೋಲಾರದ ಜೆಡಿಎಸ್‌ ದಳಪತಿಗಳು ಕೋಲಾರ ಕ್ಷೇತ್ರದಲ್ಲಿ ಸಮ್ಮಿಶ್ರ ಧರ್ಮ ಪಾಲಿಸುವುದಾಗಿ ಘೋಷಿಸಿ, ಇದು ತಮ್ಮ ಹೈಕಮಾಂಡ್‌ ಆದೇಶ ಎಂದು ಹೇಳಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕೋಲಾರದ ಶಾಸಕ ಕೆ.ಶ್ರೀನಿವಾಸಗೌಡರನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್‌ನ ಪರಾಜಿತ ಜೆಡಿಎಸ್‌ ಅಭ್ಯರ್ಥಿಗಳು ಹಾಗೂ ಜೆಡಿಎಸ್‌ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮತ್ತು ಚಿಂತಾಮಣಿಯ ಶಾಸಕ ಜಿ.ಕೆ.ಕೃಷ್ಣಾರೆಡ್ಡಿಯವರ ಬೆಂಬಲ ತಮಗಿದೆಯೆನ್ನುವುದನ್ನು ನಾಮಪತ್ರ ಸಲ್ಲಿಕೆಯ ಒಂದು ದಿನ ಮುನ್ನವೇ ಜಗಜ್ಜಾಹೀರಾಗುವಂತೆ ಮಾಡಿದ್ದಾರೆ.

ಕಾಂಗ್ರೆಸ್‌ ಪಕ್ಷದ ಅತೃಪ್ತರು ಕೆ.ಎಚ್‌.ಮುನಿಯಪ್ಪ ಅಕ್ರಮ ಆಸ್ತಿ ಸಂಪಾದಿಸಿರುವ ಜನದ್ರೋಹಿ ಎಂದು ಜರಿಯುತ್ತಿರುವಾಗಲೇ, ಕೆ.ಎಚ್‌.ಮುನಿಯಪ್ಪ ಉತ್ತಮ ಹಾಗೂ ಒಳ್ಳೆಯ ಜನಪ್ರತಿನಿಧಿ ಎನ್ನುವ ಮಾತನ್ನು ಜೆಡಿಎಸ್‌ ಮುಖಂಡರಿಂದಲೇ ಹೇಳಿಸುವ ಮೂಲಕ ಕೆ.ಎಚ್‌.ಮುನಿಯಪ್ಪ ಚುನಾವಣೆಗೆ ಸ್ವಪಕ್ಷೀಯರ ವಿರೋಧದ ನಡುವೆಯೂ ಚುನಾವಣೆಗೆ ಭರ್ಜರಿಯಾಗಿ ಸಜ್ಜಾಗುತ್ತಿರುವುದನ್ನು ತೋರ್ಪಡಿಸಿಕೊಂಡಿದ್ದಾರೆ.

ಅಭ್ಯರ್ಥಿ ಘೋಷಿಸುತ್ತಿದ್ದಂತೆ ಉತ್ಸಾಹ ಕುಸಿತ: ಲೋಕಸಭಾ ಚುನಾವಣೆ ಮುನ್ನವೇ ಕಾಂಗ್ರೆಸ್‌ ಪಕ್ಷದಲ್ಲಿ ಭುಗಿಲೆದ್ದಿದ್ದ ಅತೃಪ್ತರ ಚಟುವಟಿಕೆಗಳಿಂದಾಗಿ ಬಿಜೆಪಿ ಈ ಬಾರಿ ತಮ್ಮದೇ ಕಪ್‌ ಎನ್ನುವಂತೆ ಉತ್ಸಾಹದಲ್ಲಿತ್ತು. ಆದರೆ, ಅಭ್ಯರ್ಥಿಯಾಗಿ ಬಿಬಿಎಂಪಿ ಕಾರ್ಪೋರೆಟರ್‌ ಎಸ್‌.ಮುನಿಸ್ವಾಮಿ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿ ಪಾಳೆಯದ ಉತ್ಸಾಹ ಅರ್ಧಕ್ಕೆ ಕುಸಿದಂತೆ ಕಂಡು ಬರುತ್ತಿದೆ.

ಟಿಕೆಟ್‌ ಗಿಟ್ಟಿಸುವ ಮಂಚೂಣಿಯಲ್ಲಿದ್ದ ಡಿ.ಎಸ್‌.ವೀರಯ್ಯ, ಛಲವಾದಿ ನಾರಾಯಣಸ್ವಾಮಿ, ಚಿ.ನಾ.ರಾಮು ಇತರರ ಅಭಿಮಾನಿ ಬೆಂಬಲಿಗರು ನಿರುತ್ಸಾಹಕ್ಕೆ ಗುರಿಯಾಗಿದ್ದಾರೆ. ಈ ಬಾರಿ ಬಿಜೆಪಿ ಟಿಕೆಟ್‌ ಭೋವಿ ಸಮುದಾಯಕ್ಕೆ ಎಂದು ನಂಬಿಕೊಂಡು ಚುನಾವಣೆಗೆ ಸಜ್ಜಾಗುತ್ತಿದ್ದ ಡಾ.ಶಿವಣ್ಣ, ರಮೇಶ್‌ಬಾಬು, ವಕೀಲ ಶಂಕರಪ್ಪ ಮತ್ತಿತರರ ಪಾಳೆಯದಲ್ಲಿಯೂ ಅಸಮಾಧಾನ ಎದ್ದು ಕಾಣಿಸುತ್ತಿದೆ.

ಬಿಜೆಪಿ ಅಭ್ಯರ್ಥಿ ಆಯ್ಕೆ ಹಿನ್ನೆಲೆಯಲ್ಲಿ ಕೆ.ಎಚ್‌.ಮುನಿಯಪ್ಪರ ಕೈವಾಡ ಇದೆಯೆನ್ನುವ ಮಾತುಗಳು ಬಿಜೆಪಿ ಪಾಳೆಯದಿಂದಲೇ ಕೇಳಿ ಬರುವಂತಾಗಿದೆ. ಕೆ.ಎಚ್‌.ಮುನಿಯಪ್ಪರ ಅಕ್ರಮ ಆಸ್ತಿ ಸಂಪಾದನೆ ಕುರಿತು ಪ್ರತಿಭಟನೆ ನಡೆಸಿದ ಬಿಜೆಪಿ ಗುಂಪಿಗೆ, ಇದೀಗ ತಮ್ಮ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಎಸ್‌.ಮುನಿಸ್ವಾಮಿ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ವ್ಯಕ್ತವಾಗುತ್ತಿರುವ ಆರೋಪಗಳನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಆದರೂ, ಬಿಜೆಪಿ ಮುಖಂಡರು ಕಾರ್ಯಕರ್ತರು ಅಭ್ಯರ್ಥಿ ಯಾರೇದರೇನು, ಈ ಬಾರಿ ಬದಲಾವಣೆ ಖಚಿತ. ತಮ್ಮ ಮತ ಪಕ್ಷಕ್ಕೆ ಅಥವಾ ಮೋದಿಗೆ ಎನ್ನುವಂತೆ ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ.

ಅತೃಪ್ತರ ಗುಂಪಿನಲ್ಲಿ ಕವಿದ ಕಾರ್ಮೋಡ: ಕೋಲಾರ ಕ್ಷೇತ್ರದಲ್ಲಿ ಈಬಾರಿ ಕೆ.ಎಚ್‌.ಮುನಿಯಪ್ಪ ಬದಲಾವಣೆಯಾಗಬೇಕೆಂದು ಕಾಂಗ್ರೆಸ್‌, ಜೆಡಿಎಸ್‌ ಅತೃಪ್ತರ ಗುಂಪು ಆರು ತಿಂಗಳಿನಿಂದಲೂ ಚಟುವಟಿಕೆಗಳನ್ನು ಮಾಡುತ್ತಿತ್ತು. ಆದರೆ, ಕೆ.ಎಚ್‌.ಮುನಿಯಪ್ಪ ಬೇಡ ಎಂಬ ಒಂದೇ ಗುರಿ ಇಟ್ಟುಕೊಂಡು ವಿರೋಧ ವ್ಯಕ್ತಪಡಿಸುತ್ತಿದ್ದ ಅತೃಪ್ತರ ಪಾಲಿಗೆ ಕೋಲಾರದಿಂದ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿಯೊಬ್ಬರನ್ನು ಹುಡುಕಲಾಗಲಿಲ್ಲ.

ಕೈಗೆಟುಕದ ಮಲ್ಲಿಕಾರ್ಜುನ ಖರ್ಗೆ, ಮಹದೇವಪ್ಪ ಇತ್ಯಾದಿ ಹೆಸರುಗಳನ್ನು ಪ್ರಸ್ತಾಪಿಸುತ್ತಲೇ ಸಮಯ ವ್ಯರ್ಥ ಮಾಡಿಕೊಂಡಿದ್ದಾರೆ. ಕೆ.ಎಚ್‌.ಮುನಿಯಪ್ಪರ ಹೆಸರಿನಲ್ಲಿದ್ದ ಆಸ್ತಿಯ ಪಹಣಿಗಳನ್ನು ಹಂಚಿ ಸುದ್ದಿಗೋಷ್ಠಿ ಮಾಡಿಸಿದರೂ ಪ್ರಯೋಜನವಾಗಿಲ್ಲ.

ಶನಿವಾರ ಕಾಂಗ್ರೆಸ್‌ ಪಕ್ಷದಿಂದ ಅಧಿಕೃತವಾಗಿ ಕೆ.ಎಚ್‌.ಮುನಿಯಪ್ಪ ಅಭ್ಯರ್ಥಿ ಎಂದು ಘೋಷಣೆಯಾಗುತ್ತಿದ್ದಂತೆಯೇ ಅತೃಪ್ತರ ಗುಂಪಿನಲ್ಲಿ ಕಾರ್ಮೋಡ ಕವಿದಂತಾಗಿದೆ. ಇಷ್ಟು ತಾವಾಡಿದ್ದ ಮಾತುಗಳನ್ನು ತಾವೇ ನುಂಗಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಪಕ್ಷಕ್ಕೆ ಕಟ್ಟು ಬಿದ್ದು ಕೆ.ಎಚ್‌.ಮುನಿಯಪ್ಪರನ್ನು ಬೆಂಬಲಿಸಬೇಕು. ಇಲ್ಲವೇ ಪಕ್ಷಕ್ಕೆ ಸೆಡ್ಡು ಹೊಡೆದು ಬಿಜೆಪಿಯನ್ನು ಬೆಂಬಲಿಸಬೇಕು ಎನ್ನುವಂತಾಗಿದೆ.

ಸದ್ಯಕ್ಕೆ ಮೌನಕ್ಕೆ ಶರಣಾಗಿದ್ದರೂ ಅತೃಪ್ತರ ಬಣ ಕೆ.ಎಚ್‌.ಮುನಿಯಪ್ಪರನ್ನು ಬೆಂಬಲಿಸುವ ಸಾಧ್ಯತೆಗಳು ತೀರಾ ಕಡಿಮೆ. ಅತೃಪ್ತ ಬಣದ ಮುಖಂಡರು ಹಿಂದೆ ಘೋಷಿಸಿದಂತೆ ಸಿಡಿ ಮತ್ತಿತರ ಅಸ್ತ್ರಗಳನ್ನು ಕೆ.ಎಚ್‌.ಮುನಿಯಪ್ಪ ವಿರುದ್ಧ ಬಿಡಲು ಸಿದ್ಧತೆ ಮಾಡಿಕೊಳ್ಳಬಹುದು. ಆದರೂ, ಅತೃಪ್ತ ಬಣ ತ್ರಿಶಂಕು ಪರಿಸ್ಥಿತಿಯಲ್ಲಿದೆ.

ಇವೆಲ್ಲಾ ಘಟನಾವಳಿಗಳ ನಡುವೆಯೇ ಸೋಮವಾರ ಕಾಂಗ್ರೆಸ್‌, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ನೂಕುನುಗ್ಗಲು ಉಂಟಾಗುವ ಸಾಧ್ಯತೆ ಇದೆ. ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಪೂರ್ಣಗೊಂಡ ನಂತರವಷ್ಟೇ ಕ್ಷೇತ್ರದ ಚಿತ್ರಣ ಸ್ಪಷ್ಟವಾಗಲಿದೆ.

* ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next