ಚಿತ್ತಾಪುರ: ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನೊಬ್ಬ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ್ ಅವರ ಮೇಲೆ ಹಲ್ಲೆ ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ತಾಲೂಕಿನ ದೇವಾಜಿ ನಾಯಕ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಮಲ್ಲಿನಾಥ ಎನ್ನುವವರು ಹಲ್ಲೆ ನಡೆಸಿದ್ದಾರೆ. ಬುಧವಾರ ರಾತ್ರಿ 8 ಗಂಟೆಗೆ ಕಲಬುರಗಿಯಲ್ಲಿರುವ ಬಿಇಒ ಮನೆಗೆ ನುಗ್ಗಿ ಬಕೆಟ್ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳಿಂದ ತಲೆಗೆ ಹೊಡೆದ ಪರಿಣಾಮ ಗಂಭೀರವಾಗಿ ಗಾಯವಾಗಿದ್ದರಿಂದ ರಕ್ತಸ್ರಾವವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ಏಳು ಟಾಕಿ ಹಾಕಲಾಗಿದೆ.
ಶಾಲೆಗೆ ಹಾಜರಾಗದೇ ಇರುವ ಕಾರಣ ಸಂಬಳ ತಡೆ ಹಿಡಿಯಲಾಗಿದ್ದರಿಂದ ಕುಪಿತಗೊಂಡು ಶಿಕ್ಷಕ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿದ ಶಿಕ್ಷಕನನ್ನು ಬಂಧಿಸಲಾಗಿದೆ.
ಸರ್ಕಾರಿ ನೌಕರರ ಸಂಘ ಖಂಡನೆ: ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ್ ಅವರ ಮೇಲೆ ಶಿಕ್ಷಕ ಮಲ್ಲಿನಾಥ ಎನ್ನುವವರು ಹಲ್ಲೆ ಮಾಡಿರುವುದು ಖಂಡನೀಯ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಪ್ಪಿತಸ್ಥ ಶಿಕ್ಷಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೌಕರರ ಸಂಘದ ಅಧ್ಯಕ್ಷ ಹಾಗೂ ಪದಾ ಧಿಕಾರಿಗಳಾದ ಚಂದ್ರಾಮ ಅಮ್ಮನಗಡೆ, ಪರಶುರಾಮ, ಬಸಪ್ಪ ಯಂಬತ್ನಾಳ, ರಮೇಶ ಪತ್ತಾರ್ ಮನವಿ ಮಾಡಿದ್ದಾರೆ.