ಮಾಗಡಿ: ಮಾಗಡಿ ಅವರೆಗೆ ಬೆಂಗಳೂರಿನಲ್ಲಿ ಬೇಡಿಕೆ ಹೆಚ್ಚು. ಬೆಂಗಳೂರಿನವರಿಗೆ ಮಾಗಡಿ ಅವರೇಕಾಯಿ ಅಚ್ಚುಮೆಚ್ಚು. ನಾಡಪ್ರಭು ಕೆಂಪೇಗೌಡರ ತವರೂರು ಮಾಗಡಿ ಸೊಗಡಿನ ಅವರೇಕಾಯಿ ಹೆಚ್ಚು ರುಚಿಕರವಾಗಿದ್ದು, ದಿನೇ ದಿನೆ ಅವರೇಕಾಯಿ ಜನಪ್ರಿಯಗೊಳ್ಳುತ್ತಿದ್ದು, ಬೇಡಿಕೆಯೂ ಸಹ ಹೆಚ್ಚಾಗಿದೆ. ಮಾಗಡಿ ಮಣ್ಣೇ ಅಂತದ್ದು.
ಬೆಟ್ಟಗುಡ್ಡಗಳಿಂದ ಅವೃತ್ತವಾಗಿರುವ ಮಾಗಡಿ ಭೂ ಪ್ರದೇಶವು ಕೆಂಪು ಮಣ್ಣು, ಮರಳು ಮಿಶ್ರಿತ ಮಣ್ಣು. ಈ ಮಣ್ಣಿನಲ್ಲಿ ರೈತರು ಅವರೇ ಕಾಯಿ ಬೆಳೆಯಲಾಗುತ್ತದೆ. ಮಿಶ್ರ ಬೆಳೆಯಾಗಿಯೂ ಬೆಳೆಯಲಾಗುತ್ತದೆ.
ಬಿಸಿಲಿನ ತಾಪಮಾನ ಹೆಚ್ಚಾದಂತೆ ಅವರೇಕಾಯಿ ಸೊಗಡು ಸಹ ಹೆಚ್ಚುತ್ತಿರುತ್ತದೆ. ಚಳಿಗಾಲದಲ್ಲಿ ಹೆಚ್ಚು ಕಾಯಿ ಸಹ ಗಿಡದಲ್ಲಿ ಬರುತ್ತದೆ ಎನ್ನುತ್ತಾರೆ. ರೈತರು ಅವರೇಕಾಯಿ ಬೆಳೆದು ಉತ್ತಮ ಆದಾಯ ಗಳಿಸಬಹುದಾಗಿದೆ. ಆದರೆ ಆತಂಕವೇನೆಂದರೆ ಮಧ್ಯವರ್ತಿಗಳ ಹಾವಳಿ ಸಿಲುಕಿ ರೈತರು ಆದಾಯದಲ್ಲಿ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ.
ಚಿನಗಲು ಅವರೇಕಾಯಿ ಫೇಮಸ್ಸು: ಹೈಬ್ರಿಡ್ ತಳಿ ಅವರೇಕಾಯಿಗೆ ಬೆಲೆ. 50ರಿಂದ 60 ರೂ. ಇದ್ದರೇ, ಮಾಗಡಿಯ ಚಿನಗಲು ಅವರೇಕಾಯಿ ಬೆಲೆ ಕನಿಷ್ಠ 60 ರೂ.ನಿಂದ 65 ರೂ. ಇದೆ. ಬೇಳೆ 150 ರೂ.ನಿಂದ 200 ರೂ. ಇದೆ. ಆದರೂ ಗ್ರಾಹಕರು ಮಾತ್ರ ಮಾಗಡಿ ಅವರೇಕಾಯಿ ಬೇಳೆಯನ್ನು ಮಾರುಕಟ್ಟೆಯಲ್ಲಿ ಹುಡುಕಿಕೊಂಡು ಖರೀಸುತ್ತಾರೆ. ಇದರ ಮಧ್ಯೆ ವ್ಯಾಪಾರಸ್ಥರು ಮಾಗಡಿ ಅವರೇಕಾಯಿಯಂತೆ ಕಾಣುವ ಹುಣಸೂರು ಇತರೆ ಬೇರೆ ಕಡೆಯ ಅವರೇಕಾಯಿ ತಂದು ಮಾಗಡಿಯಲ್ಲಿಯೂ ಮಾರಾಟ ಮಾಡಿ ಹಣ ಗಳಿಸುತ್ತಾರೆ.
ಬಗೆ ಬಗೆಯ ತಿನಿಸುಗಳು ಲಭ್ಯ: ಚುಮ ಚುಮ ಚಳಿಯಲ್ಲಿ ಅವರೇಕಾಯಿಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ತಿನ್ನುವುದು ಎಲ್ಲೆಡೆ ಸಾಮಾನ್ಯವಾಗಿದೆ. ಅದರಲ್ಲೂ ಈ ಚಳಿಗಾಲದಲ್ಲಿ ಅವರೇಕಾಯಿ, ಬೇಳೆಯಿಂದ ಅಡುಗೆ ತಯಾರಿಸುವುದೇ ಮಹಿಳೆಯರಿಗೆ ವಿಶೇಷ. ಪ್ರತಿವರ್ಷ ಬೆಂಗಳೂರಿನ ಸಜ್ಜನರಾವ್ ವೃತ್ತ ಸೇರಿದಂತೆ ವಿವಿಧೆಡೆ ಮಾಗಡಿ ಅವರೇ ಬೇಳೆ ಮೇಳ ಮಾಡಲಾಗುತ್ತದೆ. ಸುಮಾರು 30 ರಿಂದ 40 ಟನ್ ಅವರೇ ಬೇಳೆ ಪ್ರತಿದಿನ ಮಾರುಕಟ್ಟೆಗೆ ಬರುತ್ತದೆ. ಅವರೇಕಾಯಿ ಬೇಳೆಯಿಂದ ತಯಾರಿಸಿದ ದೋಸೆ, ಇಡ್ಲಿ, ಪಾಯಸ, ಚಕ್ಕಲಿ, ನಿಪ್ಪಟ್ಟು ಬಿಳಿ ಹೋಳಿಗೆ, ಅವರೇಕಾಳು ಉಪ್ಪಿಟ್ಟು ಹೀಗೆ ಬಗೆ ಬಗೆಯ ತಿನಿಸುಗಳು ಲಭ್ಯವಾಗಲಿವೆ.
ಅವರೇಕಾಯಿ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಅಗತ್ಯ : ವಿವಿಧ ತಳಿಯ ಹೈಬ್ರಿಡ್ ಅವರೇಕಾಯಿ ಮಾರುಕಟ್ಟೆ ಪ್ರವೇಶಿಸಿದರೂ ಸಹ ಮಾಗಡಿ ಅವರೇಕಾಯಿ, ಬೇಳೆಗೆ ಬೇಡಿಕೆ ಇದ್ದೇ ಇರುತ್ತದೆ. ರುಚಿಯೂ ಹೆಚ್ಚಿರುವುದರಿಂದ ಬೆಲೆಯಲ್ಲಿಯೂ ಸಹ ಅಧಿಕವಾಗಿರುತ್ತದೆ. ಹೆಚ್ಚು ಸೊಗಡಿನ ಅವರೇಕಾಯಿ, ಅದರಲ್ಲೂ ಚಿನಗಲು ಅವರೇ ತುಂಬ ಜನಪ್ರಿಯ. ಇದನ್ನೇ ಕೇಳಿಕೊಂಡು ಗ್ರಾಹಕರು ಮಾರುಕಟ್ಟೆಗೆ ಬರುತ್ತಾರೆ. ಅವರೇಕಾಯಿ, ಬೇಳೆ ಮಾರಾಟಕ್ಕೆ ಮಾರುಕಟ್ಟೆಗೆ ಹೋದರೆ ಸಾಕು. ದಳ್ಳಾಳಿಗಳ ದಬ್ಟಾಳಿಕೆ ಹಾವಳಿಯಿಂದ ರೈತರಿಗೆ ಆದಾಯ ತುಂಬಾ ಕಡಿಮೆ. ರೈತರಿಗೆ ಅವರೇಕಾಯಿ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಒದಗಿಸಿದರೆ ತುಂಬಾ ಅನುಕೂಲ ಆಗಲಿದೆ. ದಳ್ಳಾಳಿಗಳಿಗೆ ಕಡಿವಾಣ ಹಾಕಬೇಕು ಎಂದು ಶಾನಭೋಗನಹಳ್ಳಿ ಪ್ರಗತಿಪರ ರೈತ ಎಸ್ .ವಿ.ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಮಾತ್ರವಲ್ಲ, ಬೇರೆ ಬೇರೆ ರಾಜ್ಯದಲ್ಲಿಯೂ ಮಾಗಡಿಯ ಅವರೇಗೆ ತುಂಬ ಬೇಡಿಕೆಯಿದೆ. ಏಕೆಂದರೆ ಹೆಚ್ಚು ಸೊಗಡು, ಗಮಗಮಸುವ ಕಾಯಿ ದೊರಕುತ್ತದೆ. ಹಿಂಗಾರು ಮಳೆ ಬಿದ್ದಿದ್ದರಿಂದ ಅವರೇ ಗಿಡ ಚಿಗುರೊಡೆದು ಹೂವು, ಕಾಯಿಯೂ ಹೆಚ್ಚಲಿದೆ. ಹೂವು ಬಿಡುವ ಸಮಯದಲ್ಲಿ, ಕಾಯಿ ಆಗುವ ವೇಳೆ ರೋಗಬಾಧೆ ಬಾರದಂತೆ ಅಧಿಕಾರಿಗಳು ಸೂಚಿಸುವ ಔಷಧ ಸಿಂಪಡಿಸಿದರೆ ಉತ್ತಮ.
–ನಾಗರಾಜು, ತೋಟಗಾರಿಕೆ ಸಹಾಯಕ ನಿರ್ದೇಶಕ
– ತಿರುಮಲೆ ಶ್ರೀನಿವಾಸ್