ಹೊಸದಿಲ್ಲಿ: ಭಾರತ ಸರ್ಕಾರವು ಇತ್ತೀಚೆಗೆ ಆಧಾರ್ ಮಾಹಿತಿಯನ್ನು ನವೀಕೃತವಾಗಿರಿಸುವ (Aadhaar card Update) ಮಹತ್ವವನ್ನು ಒತ್ತಿಹೇಳಿದೆ. ನಾಗರಿಕರು ಪ್ರತಿ 10 ವರ್ಷಗಳಿಗೊಮ್ಮೆ ತಮ್ಮ ಆಧಾರ್ ವಿವರಗಳನ್ನು ನವೀಕರಿಸುವ ಅಗತ್ಯವಿದೆ ಎಂದು ಸರ್ಕಾರ ಹೇಳಿದೆ. ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಸರ್ಕಾರವು ಸೆಪ್ಟೆಂಬರ್ 14, 2024ರವರೆಗೆ ಉಚಿತ ಆಧಾರ್ ಅಪ್‌ಡೇಟ್ ಸೇವೆಯನ್ನು ನೀಡುತ್ತಿದೆ.
ಕಳೆದ ವರ್ಷ ಮತ್ತು ಪ್ರಸಕ್ತ ವರ್ಷದಲ್ಲಿ ಈ ಗಡುವನ್ನು ಈಗಾಗಲೇ ಹಲವು ಬಾರಿ ವಿಸ್ತರಿಸಲಾಗಿದ್ದರೂ, ಮುಂದಿನ ದಿನಗಳಲ್ಲಿ ಈ ವಿಸ್ತರಣೆ ಮುಂದುವರಿಯುವ ಬಗ್ಗೆ ಯಾವುದೇ ಖಚಿತತೆಯಿಲ್ಲ.
ಈ ಬದಲಾವಣೆಗಳನ್ನು ಆಫ್ ಲೈನ್ ನಲ್ಲಿಯೂ ಮಾಡಬಹುದು. ಆದರೆ, ಸೆ.14ರವರೆಗೆ ಆನ್ ಲೈನ್ ನಲ್ಲಿ ಮಾಡಯವ ಪರಿಷ್ಕರಣೆಗಳು ಮಾತ್ರ ಉಚಿತವಾಗಿದೆ. ಆನ್ ಲೈನ್ ನ ಹೊರತಾಗಿ, ವ್ಯಕ್ತಿಗಳು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬಹುದು ಮತ್ತು ತಮ್ಮ ದಾಖಲೆಗಳನ್ನು ಬದಲಾಯಿಸಲು ಸಣ್ಣ ಶುಲ್ಕವನ್ನು ಪಾವತಿಸಬಹುದು.
ಗಮನಾರ್ಹವಾಗಿ, ನೀವು ಹೆಸರು, ವಿಳಾಸ, ಹುಟ್ಟಿದ ದಿನಾಂಕ/ವಯಸ್ಸು, ಲಿಂಗ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ, ಸಂಬಂಧದ ಸ್ಥಿತಿ ಮತ್ತು ಮಾಹಿತಿ ಹಂಚಿಕೆ ಸಮ್ಮತಿಯಂತಹ ಜನಸಂಖ್ಯಾ ಮಾಹಿತಿಯನ್ನು ಆನ್ ಲೈನ್ ನಲ್ಲಿ ಉಚಿತವಾಗಿ ನವೀಕರಿಸಬಹುದು.
ಆದಾಯ ತೆರಿಗೆಯನ್ನು ಸಲ್ಲಿಸುವುದರಿಂದ ಹಿಡಿದು ಶಿಕ್ಷಣ ಸಂಸ್ಥೆಗಳಿಗೆ ಸೇರುವವರೆಗೆ ಮತ್ತು ಪ್ರಯಾಣದ ಉದ್ದೇಶಗಳಿಗಾಗಿಯೂ ಸಹ ಆಧಾರ್ ಈಗ ವಿವಿಧ ಸೇವೆಗಳಿಗೆ ಬಳಸಲಾಗುವ ನಿರ್ಣಾಯಕ ಗುರುತಿನ ದಾಖಲೆಯಾಗಿದೆ. ಆಧಾರ್ ಡೇಟಾಬೇಸ್ ನ ನಿಖರತೆ ಮತ್ತು ದೃಢೀಕರಣವನ್ನು ಖಚಿತಪಡಿಸಿಕೊಳ್ಳಲು ಆಗಾಗ ಅಪ್ಡೇಟ್ ಮಾಡುವುದು ಮುಖ್ಯ.