Advertisement

Udupi: ಎಲ್ಲೆಡೆ ಜ್ವರ, ಶೀತ, ಕೆಮ್ಮು 

06:09 PM Aug 12, 2024 | Team Udayavani |

ಉಡುಪಿ: ಮಳೆಗಾಲದಲ್ಲಿ ದಿಢೀರ್‌ ಆರೋಗ್ಯ ಏರುಪೇರಾಗುವುದು ಸಾಮಾನ್ಯ. ಹಾಗಂತ ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಸಣ್ಣ ಜ್ವರ ಕಡಿಮೆ ಆಗಬಹುದು ಎಂಬ ನಿರ್ಲಕ್ಷ್ಯ ಬೇಡ, ಅದೇ ಮುಂದೆ ಹಾಸಿಗೆ ಹಿಡಿಯುವಂತೆ ಮಾಡಬಹುದು…

Advertisement

ಹೀಗಾಗಿ ಮಳೆಗಾಲದಲ್ಲಿ ಆರೋಗ್ಯದ ವಿಶೇಷ ಜಾಗೃತಿ ಅಗತ್ಯ.

ವಾರದ ಹಿಂದೆ ಸುರಿದ ಮಳೆ ಈಗ ಬಿಡುವು ಕೊಟ್ಟಿದೆ. ಮಳೆ ಬಿಸಿಲಿನ ವಾತಾವರಣವು ಹವಾಮಾನದಲ್ಲೂ ಒಂದಿಷ್ಟು ಬದಲಾವಣೆಗಳನ್ನು ಮಾಡುವುದರಿಂದ ಸಾಮಾನ್ಯವಾಗಿ ಆರೋಗ್ಯ ಮೇಲೆ ಪ್ರಭಾವ ಬೀರುತ್ತದೆ. ಇದೇ ವೇಳೆ ಸೊಳ್ಳೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದ ಹಲವು ರೀತಿಯ ರೋಗ ರುಜಿನಗಳು ಬರುತ್ತವೆ. ಜಿಲ್ಲೆಯಲ್ಲಿ ಕಳೆದ ತಿಂಗಳಿಗೆ ಹೋಲಿಸಿದರೆ ಇದೀಗ ಡೆಂಗ್ಯೂ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ ವೈರಲ್‌ ಫಿವರ್ ಜಾಸ್ತಿಯಾಗುತ್ತಿದೆ. ‌

ಜ್ವರ ಎರಡು ಮೂರು ದಿನ ಕಾಣಿಸಿಕೊಳ್ಳುತ್ತದೆ. ಮನೆಯಲ್ಲಿ ಒಬ್ಬರಿಂದೊಬ್ಬರಿಗೆ ಹರಡುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ವೈರಲ್‌ ಫಿವರ್ ಬಗ್ಗೆಯೂ ಎಚ್ಚರ ಇರಬೇಕು. ಸಾಮಾನ್ಯವಾಗಿ ಆರಂಭದಲ್ಲಿ ಸುಸ್ತು, ಮೈ-ಕೈ ನೋವು, ತಲೆನೋವು, ಜ್ವರ, ಶೀತ ಹೀಗೆ ಒಂದೊಂದೆ ಲಕ್ಷಣ ಕಾಣಿಸಿಕೊಳ್ಳುತ್ತದೆ. ಎರಡು ಮೂರು ದಿನವಾದರೂ ಆರೋಗ್ಯದಲ್ಲಿ ಸುಧಾರಣೆ ಕಾಣದೇ ಇದ್ದಾಗ ತತ್‌ಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಪರಿಶೀಲಿಸಿ ಔಷಧ ಪಡೆಯಬೇಕು. ಎರಡು ಮೂರು ದಿನದ ಮೇಲೂ ರಕ್ತ ಪರೀಕ್ಷೆ ಮಾಡಿಸದೇ ಅಥವಾ ವೈದ್ಯರನ್ನು ಸಂಪರ್ಕಿಸದೇ ಔಷಧಾಲಯದಿಂದ ಮಾತ್ರೆ ಇತ್ಯಾದಿ ತಂದು ತಿನ್ನುವುದು ಸರಿಯಲ್ಲ. ವೈದ್ಯರನ್ನು ಭೇಟಿ ಮಾಡಿ, ಸಮಾಲೋಚನೆಯ ಅನಂತರವೇ ಔಷಧ ಪಡೆಯಬೇಕು. ಮನೆಯಲ್ಲಿ ಯಾರಿಗಾದರೂ ಜ್ವರ ಅಥವಾ ದಿಢೀರ್‌ ಅಸ್ವಸ್ಥತೆ ಕಂಡು ಬಂದಾಗ ಉಳಿದವರು ಸ್ವಲ್ಪ ಎಚ್ಚರ ವಹಿಸಬೇಕು. ಆಹಾರ ಕ್ರಮದಲ್ಲೂ ಸ್ವಲ್ಪ ಬದಲಾವಣೆ ಮಾಡಿಕೊಂಡು ಗಂಜಿ ಅನ್ನ ರೀತಿಯ ಲಘು ಆಹಾರ ಸೇವನೆ ಉತ್ತಮ. ಅಲ್ಲದೆ ಬಿಸಿ ಆಹಾರ ಸೇವನೆಗೆ ಆದ್ಯತೆ ನೀಡಬೇಕು ಎನ್ನುತ್ತಾರೆ ವೈದ್ಯರು.

ಮಕ್ಕಳ ಬಗ್ಗೆಯೂ ಇರಲಿ ಎಚ್ಚರ

Advertisement

ಮಕ್ಕಳಿಗೆ ಜ್ವರ, ಕೆಮ್ಮು, ಶೀತ ಇತ್ಯಾದಿ ಕಾಣಿಸಿಕೊಂಡಾಗ ವೈದ್ಯರನ್ನು ಸಂಪರ್ಕಿಸಿ ಔಷಧ ಕೊಡಿಸು ವುದು ಮಾತ್ರವಲ್ಲದೆ ಮನೆಯಲ್ಲೂ ಸೂಕ್ತ ರೀತಿಯ ಆರೈಕೆ ಮಾಡಬೇಕು. ಆರೋಗ್ಯ ಪೂರ್ಣ ಪ್ರಮಾಣ ದಲ್ಲಿ ಸರಿಯಾದ ಅನಂತರದಲ್ಲೆ ಶಾಲೆಗೆ ಕಳುಹಿಸುವುದು ಉತ್ತಮ. ಬೇರೆ ಮಕ್ಕಳಿಗೆ ಜ್ವರ ಹರಡುವ ಸಾಧ್ಯತೆ ಇರುವು ದರಿಂದ ಜ್ವರ ಕಡಿಮೆ ಆದ ಮೇಲೆ ಕಳುಹಿಸಬೇಕು.

ಏನು ಮಾಡಬೇಕು?

ಜ್ವರ, ಶೀತ, ತಲೆನೋವು ಸಹಿತ ದಿಢೀರ್‌ ಅಸ್ವಸ್ಥತೆ ಕಂಡುಬಂದಾಗ ಎರಡು ದಿನದ ಅನಂತರವೂ ವೈದ್ಯರಿಗೆ ತೊರಿಸದೇ ಇರಬಾರದು

ಅಗತ್ಯ ಎನಿಸಿದಾಗ ವೈದ್ಯಬಳಿ ಹೋದ ಸಂದರ್ಭದಲ್ಲಿ ರಕ್ತ ಪರೀಕ್ಷೆ ಮಾಡಿಸಿ

ಕುದಿಸಿ ಆರಿಸಿದ ನೀರನ್ನೇ ಕುಡಿಯುವುದು ಅಭ್ಯಾಸ ಮಾಡಿಕೊಳ್ಳುವುದು.

ಹೊರಗೆ ಹೋಗುವ ಸಂದರ್ಭದಲ್ಲಿ ಮನೆಯಿಂದಲೇ ನೀರನ್ನು ತೆಗೆದುಕೊಂಡು ಹೋಗುವುದು

ವೈದ್ಯರ ಸಲಹೆ ಇಲ್ಲದೇ ಔಷಧ ವಸ್ತುಗಳನ್ನು ಬಳಸುವುದು ಸರಿಯಲ್ಲ.

ಸುದೃಢ ಆರೋಗ್ಯ ಕಾಪಾಡಲು ಲಘು ವ್ಯಾಯಾಮ, ಮನೆಮದ್ದು ಹಾಗೂ ಮನೆಯಲ್ಲಿ

ಸಿದ್ಧಪಡಿಸಿದ ಆಹಾರ ತಿನ್ನುವುದು ಉತ್ತಮ

ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಸಂಜೆ ವೇಳೆಗೆ ಮನೆಯ ಕಿಟಕಿ ಬಾಗಿಲು ಮುಚ್ಚಿಕೊಳ್ಳುವುದು/ ಸೊಳ್ಳೆ ಪರದೆ ಅಳವಡಿಸಿಕೊಳ್ಳುವುದು.

ಎಳನೀರು ಚಿಪ್ಪುಗಳು ಎಲ್ಲಿಯಂದರಲ್ಲಿ ಎಸೆಯದಂತೆ ಎಚ್ಚರ ವಹಿಸುವುದು

ಬಸ್‌ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ನಿಂತಾಗ ಸೊಳ್ಳೆಯಿಂದ ದೂರ ಉಳಿಯಬೇಕು. (ಸೊಳ್ಳೆ ಕಚ್ಚದಂತೆ ಎಚ್ಚರ ಇರಬೇಕು)

ನಿರ್ಲಕ್ಷ್ಯ ಮಾಡುವುದು ಸರಿಯಲ್ಲ
ಡೆಂಗ್ಯೂ, ಮಲೇರಿಯಾ ಇತ್ಯಾದಿ ಸಾಂಕ್ರಾಮಿಕ ರೋಗದ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆಯಾಗುತ್ತಿವೆ. ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳಲ್ಲಿ ಡೆಂಗ್ಯೂ ಕೂಡ ಕಡಿಮೆಯಿದೆ. ಸಾಮಾನ್ಯ ಜ್ವರದ ಬಗ್ಗೆಯೂ ಎಚ್ಚರ ಇರಬೇಕು. ಕೆಮ್ಮು, ಶೀತ ಇತ್ಯಾದಿ ಯಾವುದನ್ನೂ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ವೈದ್ಯರ ಸೂಚನೆಯಂತೆ ಔಷಧ ಪಡೆಯಬೇಕು.
-ಡಾ| ಪ್ರಶಾಂತ್‌ ಭಟ್‌, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ, – ಡಾ| ನಾಗರತ್ನಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ

 

Advertisement

Udayavani is now on Telegram. Click here to join our channel and stay updated with the latest news.

Next