ಮಂಡ್ಯ: ಜಿಲ್ಲೆಯಲ್ಲಿ 9 ಕಡೆ ಜ್ವರ ತಪಾಸಣೆ ಕೇಂದ್ರಗಳನ್ನು ಗುರುತಿಸಲಾಗಿದ್ದು, ಜ್ವರಕ್ಕೆ ಸಂಬಂಧಿಸಿದಂತೆ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಪ್ರತೀ ತಾಲೂಕು ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು, ಮಂಡ್ಯದಲ್ಲಿ 3 ಜ್ವರ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿನ ವೈದ್ಯರಿಗೆ ಎಲ್ಲ ರೀತಿಯ ತರಬೇತಿ ನೀಡಲಾಗಿದ್ದು, 24 ಗಂಟೆ ಕೆಲಸ ನಿರ್ವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವೈದ್ಯರಿಗೆ ಸೂಕ್ತ ರಕ್ಷಣೆ: ಜ್ವರ ಬಂದವರು ಖಾಸಗಿ ಕ್ಲಿನಿಕ್ ಗಳಿಗೆ ತೆರಳುತ್ತಿದ್ದಾರೆ. ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಮಿಮ್ಸ್‌ಗೆ ತೆರಳಲು ಸೂಚಿಸುತ್ತಾರೆ. ಆದರೆ ಕೆಲವರು ನೀವೇ ಚಿಕಿತ್ಸೆ ನೀಡಬೇಕು ಎಂದು ಒತ್ತಾಯ, ಗಲಾಟೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಖಾಸಗಿ ಕ್ಲಿನಿಕ್‌ಗಳ ವೈದ್ಯರಿಗೆ ಸೂಕ್ತ ರಕ್ಷಣೆಗೆ ಕ್ರಮ ವಹಿಸಲಾಗಿದೆ. ಸಾರ್ವಜನಿಕರು ಖಾಸಗಿ ವೈದ್ಯರ ಜೊತೆ ಶಾಂತಿ, ಸಂಯಮದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ಅನಗತ್ಯ ಹೊರಗೆ ಬರಬೇಡಿ: ಅನಾವಶ್ಯಕವಾಗಿ ಯಾರಾದರು ಸಂಚರಿಸುವುದು ಕಂಡು ಬಂದರೆ ಅವರ ವಿರುದ್ಧ ಐಪಿಸಿ ಸೆಕ್ಷನ್ ಅಡಿ ದೂರು ದಾಖಲಿಸಲಾಗುವುದು. ತುರ್ತು ಸಂದರ್ಭ ಹೊರತುಪಡಿಸಿ ಅನಗತ್ಯವಾಗಿ ಓಡಾಡಬಾರದು. ಜಿಲ್ಲೆಯ ಎಲ್ಲ ಗಡಿಭಾಗಗಳನ್ನು ಮುಚ್ಚಲಾಗಿದೆ. ಅಲ್ಲದೆ, ಗ್ರಾಮಗಳಿಗೂ ಅಪರಿಚಿತರನ್ನು ಸೇರಿಸದಂತೆ ಸೂಚನೆ ನೀಡಲಾಗಿದ್ದು, ಗ್ರಾಮಸ್ಥರು ತಮ್ಮ ಆರೋಗ್ಯ ದೃಷ್ಟಿಯಿಂದ ಗ್ರಾಮಗಳಿಗೆ ನಿರ್ಬಂಧ ಹೇರಿದ್ದಾರೆ.
ಸೋಂಕು ಪತ್ತೆಯಾಗಿಲ್ಲ: ಸದ್ಯ ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ. ಪಕ್ಕದ ಜಿಲ್ಲೆಯ ಮೈಸೂರಿನ ನಂಜನಗೂಡಿನ ಔಷಧ ಕಾರ್ಖಾನೆಯ ಸಿಬ್ಬಂದಿಗೆ ಕೋವಿಡ್ 19 ದೃಢ ಆಗಿದೆ. ಇದರಿಂದ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ರಾಜ್ಯದಲ್ಲಿ ಮೂರನೇ ಹಂತ ಸಮುದಾಯಕ್ಕೂ ಹರಡುತ್ತಿದ್ದು, ಜಿಲ್ಲೆಯ ಜನರು ಮುಂಜಾಗ್ರತೆಯಿಂದ ಇರಬೇಕು ಎಂದು ಎಚ್ಚರಿಸಿದರು.