ವಿಜಯಪುರ: ಮೈಸೂರು ಹಾಗೂ ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಮಕ್ಕಳ ಮಾರಾಟ ಪ್ರಕರಣ ಅತ್ಯಂತ ಹೇಯ, ಅಮಾನವೀಯ ಹಾಗೂ ಅಕ್ಷಮ್ಯ ಅಪರಾಧ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಗುರುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಂಥ ಹೀನಾಯ ಕೃತ್ಯದಲ್ಲಿ ವೈದ್ಯರು, ಶಾಮೀಲಾದವರು ಯಾರೇ ಇದ್ದರೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ನಾಗರಿಕ ಸಮಾಜ ತಲೆ ತಗ್ಗಿಸುವಂಥ ಕೃತ್ಯ ಎಸಗಿದವರು ಯಾರೇ ಇದ್ದರೂ, ಯಾವುದೇ ಸರ್ಕಾರ ಇದ್ದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ ಎಂದರು.
ಭವಿಷ್ಯದಲ್ಲಿ ಇಂಥ ಕೃತ್ಯಗಳು ಜರುಗದಂತೆ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಅಲ್ಲದೇ ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆ, ಮಕ್ಕಳ ಮಾರಾಟ ಪ್ರಕರಣಗಳು ನಡೆಯದಂತೆ ಜಾಗೃತಿ ಮೂಡಿಸಲು ವಿಶೇಷ ತಂಡ ರಚಿಸಲಾಗುತ್ತದೆ ಎಂದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಗಂಡು-ಹೆಣ್ಣು ಎಂಬ ಭೇದಭಾವ ಅಳಿಸಿ ಹಾಕಿದ್ದರೂ. ನಾಗರಿಕ ಸಮಾಜ ತಲೆತಗ್ಗಿಸುವಂಥ ಈ ಕೃತ್ಯ ನಡೆದಿರುವುದು ಆಘಾತಕಾರಿ ಬೆಳವಣಿಗೆ. ಗಂಡು ಮಕ್ಕಳ ಮೇಲಿನ ಮೋಹದಿಂದ ಸ್ತ್ರೀ ವಿರೋಧಿ ಮನಸ್ಥಿತಿಯಿಂದ ಸಮಾಜ ಹೊರಬರಬೇಕು. ವೃದ್ಧಾಪ್ಯದಲ್ಲಿ ಹೆತ್ತವರನ್ನು ಪಾಲನೆ ಪೋಷಣೆ ಮಾಡುವಲ್ಲಿ ಹೆಣ್ಣುಮಕ್ಕಳೇ ವಿಶೇಷ ಕಾಳಜಿ ತೋರುತ್ತಾರೆ ಎಂದರು.
3-4 ರಾಜ್ಯಗಳಲ್ಲಿ ಕಾಂಗ್ರೆಸ್: ದೇಶದ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಟ 3-4 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಸಂಜೆ ವೇಳೆಗೆ ಎಕ್ಸಿಟ್ ಪೋಲ್ ಬರಲಿದೆ, ಕಾಯಿರಿ ಎಂದ ಅವರು ದೇಶದಲ್ಲಿ ಪ್ರಧಾನಿ ಮೋದಿ ವರ್ಚಸ್ಸು ಕಡಿಮೆಯಾಗಿದೆ ಎಂಬುದನ್ನು ಮಾಧ್ಯಮದವರೇ ಹೇಳುತ್ತಿದ್ದೀರಲ್ಲ ಎಂದರು.