Advertisement

Foeticide Case; ಮಂಡ್ಯವನ್ನು ಬಿಡದ ಭ್ರೂಣ ಹತ್ಯೆ ಕಳಂಕ!

07:52 AM Aug 17, 2024 | Team Udayavani |

ಮಂಡ್ಯ: ಸಕ್ಕರೆ ನಾಡು ಮಂಡ್ಯವನ್ನು ಹೆಣ್ಣು ಭ್ರೂಣಪತ್ತೆ ಹಾಗೂ ಹತ್ಯೆ ಪ್ರಕರಣಗಳು ಬಿಡದೆ ಕಾಡುತ್ತಿವೆ. ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಆಲೆಮನೆಯಲ್ಲಿ ಭ್ರೂಣಪತ್ತೆ ಪ್ರಕರಣ ಹಾಗೂ ಪಾಂಡವಪುರ ಪಟ್ಟಣದ ಆರೋಗ್ಯ ಇಲಾಖೆಯ ವಸತಿ ಗೃಹದಲ್ಲಿ ಭ್ರೂಣಪತ್ತೆ ಹಾಗೂ ಹತ್ಯೆ ಪ್ರಕರಣಗಳು ಮಾಸುವ ಮುನ್ನವೇ ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ತವರು ಕ್ಷೇತ್ರ ನಾಗಮಂಗಲದಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

Advertisement

ತೋಟದ ಮನೆಯಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ದಂಧೆ ನಡೆಯುತ್ತಿರುವಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ದಾಳಿ ನಡೆಸಲು 2 ತಿಂಗಳಿಂದ ಯೋಜನೆ ಹಾಕಿದ್ದೆವು. ಗುರುವಾರ ರಾತ್ರಿ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕೆ. ಮೋಹನ್‌ ತಿಳಿಸಿದರು.

ಗುರುವಾರ ತಡರಾತ್ರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕೆ. ಮೋಹನ್‌ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಆಗ ಸ್ಥಳದಲ್ಲಿ ಹಾಸನ ಮೂಲದ ಗರ್ಭಿಣಿಯೂ ಇದ್ದರು. ಭ್ರೂಣಲಿಂಗ ಪತ್ತೆಗಾಗಿ ಆಕೆಯನ್ನು ಕರೆತರಲಾಗಿತ್ತು. ಈಕೆಗೆ ಈಗಾಗಲೇ 2 ಹೆಣ್ಣು ಮಕ್ಕಳಿದ್ದು, ಮೂರನೇ ಭ್ರೂಣವನ್ನು ಪತ್ತೆ ಮಾಡಿ ಗರ್ಭಪಾತ ಮಾಡಲು ಬಂದಿದ್ದರು ಎಂದು ತಿಳಿದು ಬಂದಿದೆ.

ಗರ್ಭಪಾತ ಕಿಟ್‌, ಸ್ಕ್ಯಾನಿಂಗ್‌ ಯಂತ್ರವನ್ನು ವಶಪಡಿಸಿಕೊಂಡ ಪೊಲೀಸರು ಗರ್ಭಿಣಿಯ ಪತಿ ಮನೋಹರ್‌, ತೋಟದ ಮನೆಯ ಮಾಲಕ ಧನಂಜಯ್‌, ನಾಗಮಣಿ ಸೇರಿ ಮೂವರನ್ನು ಬಂಧಿಸಿದ್ದಾರೆ. ಸ್ಕ್ಯಾನಿಂಗ್‌ ಮಾಡುತ್ತಿದ್ದ ಪ್ರಮುಖ ಆರೋಪಿ ಅಭಿಷೇಕ್‌ ಎಂಬಾತ ಪರಾರಿಯಾಗಿದ್ದಾನೆ.

ಸದನದಲ್ಲೂ ಚರ್ಚೆ
ಹೆಣ್ಣು ಭ್ರೂಣಹತ್ಯೆಯಲ್ಲಿ ತೊಡಗಿರುವ ವೈದ್ಯರು ಮತ್ತು ವಂಚಕರಿಗೆ ಸುಲಭವಾಗಿ ಜಾಮೀನು ಸಿಗದಂತೆ ರಾಜ್ಯ ಸರಕಾರ ಕಾನೂನನ್ನು ಬಲಪಡಿಸಲಿದೆ ಎಂದು ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದರು. ಅಲ್ಲಿಗೆ ಆ ವಿಚಾರ ಸಂಬಂಧ ಚರ್ಚೆ ತಣ್ಣಗಾಗಿತ್ತು. ಈಗ ಮತ್ತೆ ಮಂಡ್ಯದಲ್ಲೇ ಹೆಣ್ಣು ಭ್ರೂಣ ಪತ್ತೆ ಪ್ರಕರಣ ಬೆಳಕಿಗೆ ಬಂದಿರುವುದು ಆರೋಗ್ಯ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ ಎಂದು ಹೋರಾಟಗಾರರು, ಸಾರ್ವಜನಿಕರು ಕಿಡಿಕಾರಿದ್ದಾರೆ.

Advertisement

ಖಚಿತ ಮಾಹಿತಿ ಮೇರೆಗೆ ದಾಳಿ
ಭ್ರೂಣಪತ್ತೆ ಹಾಗೂ ಹತ್ಯೆ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರಕಿತ್ತು. ಅದಕ್ಕಾಗಿ ದಾಳಿ ನಡೆಸಲು ತಯಾರಿ ಮಾಡಿಕೊಂಡಿದ್ದೆವು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕೆ. ಮೋಹನ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಡೆಕಾಯ್‌ ಆಪರೇಶನ್‌ ಮೂಲಕ ಭ್ರೂಣಪತ್ತೆ ಮಾಡುತ್ತಿದ್ದ ಮನೆ ಮೇಲೆ ದಾಳಿ ಮಾಡಲಾಗಿದೆ. ಗರ್ಭಿಣಿಯ ಸಹಕಾರದೊಂದಿಗೆ ಡೆಕಾಯ್‌ ಕಾರ್ಯಾಚರಣೆ ಮಾಡಿದ್ದೇವೆ. ದಾಳಿಯ ಸಂದರ್ಭದಲ್ಲಿ ನಮ್ಮ ಅಧಿಕಾರಿಗಳ ಮೇಲೆ ದಾಳಿ ಮಾಡುವ ಯತ್ನವೂ ನಡೆಯಿತು ಎಂದು ವಿವರಿಸಿದರು.

ತೋಟದ ಮನೆಯ ಮಾಲಕ ಧನಂಜಯ ಎಂಬಾತ ಈ ಕೃತ್ಯ ನಡೆಸಿದ್ದಾನೆ. ಅಭಿಷೇಕ್‌ ಎಂಬ ವ್ಯಕ್ತಿ ಸ್ಕ್ಯಾನಿಂಗ್‌ ಮಾಡುತ್ತಿದ್ದ. ಈತ ಬೆಂಗಳೂರಿನ ಬಯ್ಯಪ್ಪನಹಳ್ಳಿ ಹಾಗೂ ಪಾಂಡವಪುರ ಪಟ್ಟಣದ ಭ್ರೂಣಪತ್ತೆ ಪ್ರಕರಣದಲ್ಲಿಯೂ ಭಾಗಿಯಾಗಿದ್ದ. ನಾವು ಕಳುಹಿಸಿದ್ದ ಗರ್ಭಿಣಿಯ ಜತೆಗೆ ಮತ್ತೊಬ್ಬಳಿಗೂ ಸ್ಕ್ಯಾನಿಂಗ್‌ ಮಾಡಿದ್ದರು ಎಂದರು. ದಾಳಿ ವೇಳೆ ಎಬಿ2 ಕಿಟ್‌ ಮಾತ್ರೆಗಳು ಸಿಕ್ಕಿವೆ. ಇವನ್ನು ಯಾವ ಮೆಡಿಕಲ್‌ನಲ್ಲಿ ಖರೀದಿಸಲಾಗಿದೆ ಅನ್ನುವ ಬಗ್ಗೆ ತನಿಖೆ ಮಾಡಬೇಕಿದೆ ಎಂದರು.

ಜಿಲ್ಲೆಯಲ್ಲಿ ಈ ಹಿಂದೆ ಬೆಳಕಿಗೆ ಬಂದಿದ್ದ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕ್ಕಾಗಿ ಒಪ್ಪಿಸಲಾಗಿತ್ತು. ಅಂಥದ್ದೇ ಪ್ರಕರಣ ನಾಗಮಂಗಲ ತಾಲೂಕಿನಲ್ಲಿ ಕಂಡು ಬಂದಿರುವುದು ಅಕ್ಷಮ್ಯ. ಆರೋಪಿಗಳು ಯಾರೇ ಆಗಲಿ, ಕಠಿನ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
– ಎನ್‌.ಚಲುವರಾಯಸ್ವಾಮಿ,
ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next