Advertisement

Mandya ನಾಗಮಂಗಲ ಗಲಭೆ ಪೂರ್ವಯೋಜಿತ ಕೃತ್ಯ: ಬಿಜೆಪಿ

12:11 AM Sep 13, 2024 | Team Udayavani |

ಮಂಡ್ಯ: ಗಣೇಶ ಮೆರವಣಿಗೆ ವೇಳೆ ನಾಗಮಂಗಲ ಪಟ್ಟಣದಲ್ಲಿ ನಡೆದ ಗಲಭೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಬಿಜೆಪಿ ನಾಯಕರು, ನಾಗಮಂಗಲ ಗಲಭೆ ಪೂರ್ವಯೋಜಿತ ಕೃತ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಸರಕಾರ ಸಹಕಾರ ನೀಡುತ್ತಿರುವುದರಿಂದಲೇ ಇಂಥ ಕೃತ್ಯಗಳು ಹೆಚ್ಚುತ್ತಿವೆ ಎಂದು ಕಿಡಿ ಕಾರಿದ್ದಾರೆ.

Advertisement

ಗಲಭೆ ಹಿನ್ನೆಲೆಯಲ್ಲಿ ಗುರುವಾರ ಸಂಜೆ ನಾಗಮಂಗಲ ಪಟ್ಟಣಕ್ಕೆ ಭೇಟಿ ನೀಡಿದ ಬಿಜೆಪಿ ನಿಯೋಗ ಪರಿಸ್ಥಿತಿ ಅವಲೋಕನ ಮಾಡಿತು. ಬೆಂಕಿಯಿಂದ ಸುಟ್ಟು ಕರಕಲಾದ ಅಂಗಡಿಗಳನ್ನು ವೀಕ್ಷಿಸಿ ಮಾಲೀಕರಿಂದ ಮಾಹಿತಿ ಪಡೆದುಕೊಂಡು, ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಸರಕಾರ ಸಹಕಾರ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿತು.

ಇದು ಸಣ್ಣ ಘಟನೆಯೇ?
ಸುದ್ದಿಗಾರರೊಂದಿಗೆ ಮಾತನಾಡಿ, ಗೃಹ ಸಚಿವರು ಇದನ್ನು ಸಣ್ಣ ಘಟನೆ ಎನ್ನುತ್ತಾರೆ. ಪೆಟ್ರೋಲ್‌ ಬಾಂಬ್‌ ಹಾಕಿರುವುದು ಅವರಿಗೆ ಸಣ್ಣ ಘಟನೆಯೇ? ಭಯೋತ್ಪಾದನ ಕೃತ್ಯವೂ ಈ ರೀತಿ ನಡೆಯುವುದಿಲ್ಲ. ಕಾನೂನನ್ನು ಸಂಪೂರ್ಣವಾಗಿ ಕೈಗೆತ್ತುಕೊಂಡಿದ್ದಾರೆ. ಕಳೆದ ಬಾರಿಯೂ ಗಣಪತಿ ವಿಚಾರಕ್ಕೆ ಗಲಾಟೆಯಾಗಿದೆ. ಇದು ಪೂರ್ವ ನಿಯೋಜಿತ ಕೃತ್ಯ. ಮಸೀದಿಯಲ್ಲಿ ಪ್ಲಾನ್‌ ಮಾಡಿ ಗಲಭೆ ಎಬ್ಬಿಸಿದ್ದಾರೆ. ಗಣಪತಿ ಹಬ್ಬ ನಡೆಯಬಾರದು ಎಂದು ಕುತಂತ್ರ ಮಾಡಿ ಈ ಕೃತ್ಯ ಮಾಡಿದ್ದಾರೆ. ಕೃತ್ಯದಲ್ಲಿ ಅಂಗಡಿ-ಮುಂಗಟ್ಟು ಕಳೆದುಕೊಂಡವರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವರಾದ ಕೆ.ಸಿ. ನಾರಾಯಣಗೌಡ, ಡಾ| ಅಶ್ವತ್ಥನಾರಾಯಣ್‌, ಸುನಿಲ್‌ಕುಮಾರ್‌, ಮಾಜಿ ಶಾಸಕ ಕೆ. ಸುರೇಶ್‌ಗೌಡ, ಮಾಜಿ ಸಂಸದ ಪ್ರತಾಪ್‌ ಸಿಂಹ ಮತ್ತಿತರರು ನಿಯೋಗದಲ್ಲಿದ್ದರು.

ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಸಹಕಾರ: ವಿಜಯೇಂದ್ರ
ದೇಶದ್ರೋಹಿಗಳಿಗೆ ಕಾಂಗ್ರೆಸ್‌ ಸರಕಾರ ಸಹಕಾರ ನೀಡುತ್ತಿರುವುದರಿಂದಲೇ ರಾಜ್ಯದಲ್ಲಿ ಇಂಥ ಘಟನೆಗಳು ನಡೆಯಲು ಕಾರಣವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು. ನಾಗಮಂಗಲದಲ್ಲಿ ಶಾಂತಿಯುತವಾಗಿ ಗಣಪತಿ ಮೆರಣಿಗೆ ಮಾಡುತ್ತಿದ್ದರು. ಪೂರ್ವನಿಯೋಜಿತವಾಗಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಅಂಗಡಿಗಳಿಗೆ ಬೆಂಕಿ ಹಾಕಿ ನಾಶ ಮಾಡಿದ್ದಾರೆ. ದೇಶ ದ್ರೋಹಿಗಳು ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದರು. ಪೊಲೀಸರು ಘಟನೆ ವೇಳೆ ಮೂಕ ಪ್ರೇಕ್ಷಕರಾಗಿದ್ದಾರೆ. ಕಾಂಗ್ರೆಸ್‌ ಶಾಸಕರೇ, ಮುಂದಿನ ದಿನಗಳಲ್ಲಿ ನಿಮ್ಮ ಮನೆಗಳಿಗೂ ಈ ದೇಶ ದ್ರೋಹಿಗಳು ನುಗ್ಗುತ್ತಾರೆ. ಬಂಧಿತ ಹಿಂದೂಗಳನ್ನು ಬಿಡುಗಡೆ ಮಾಡಬೇಕು. ದೇಶ ದ್ರೋಹಿಗಳಿಗೆ ಶಿಕ್ಷೆ ನೀಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.

Advertisement

ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ಮೇಲೆ ದಾಳಿ ನಡೆಸಿದ್ದು ಪೂರ್ವನಿಯೋಜಿತ ಕೃತ್ಯ. ಘಟನೆ ಸಂಬಂಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು. ಮತಾಂಧ ಮುಸ್ಲಿಮರು ಕಳೆದ ವರ್ಷವೂ ಗಲಭೆ ಸೃಷ್ಟಿಸುವ ಪ್ರಯತ್ನ ಮಾಡಿದ್ದರು.
– ಸಿ.ಟಿ. ರವಿ, ವಿಧಾನ ಪರಿಷತ್‌ ಸದಸ್ಯ

ಹಿಂದೂಗಳೆಲ್ಲರೂ ಸೇರಿ ಆರಾಧ್ಯ ದೈವ ಗಣಪತಿ ಮೆರವಣಿಗೆ ನಡೆಸುವ ವೇಳೆ ಪಾಕಿಸ್ತಾನದ ಮನಃಸ್ಥಿತಿ ಇರುವವರು ಕಿಡಿ ಹಚ್ಚಿದ್ದಾರೆ. ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು.
– ಕೆ.ಎಸ್‌. ಈಶ್ವರಪ್ಪ, ಮಾಜಿ ಡಿಸಿಎಂ

ರಾಜ್ಯ ಸರಕಾರ ಇಡೀ ಹಿಂದೂ ಸಮಾಜದ ಕ್ಷಮೆ ಕೇಳಬೇಕು. ಹಿಂದೂ ಸಮಾಜದ ಮೇಲೆ ಸರಕಾರವೇ ಗದಾಪ್ರಹಾರ ಮಾಡುತ್ತಿದೆ. ಸರಕಾರ ನಡೆದುಕೊಳ್ಳುವ ರೀತಿ ಸರಿ ಇಲ್ಲ. ಗಲಾಟೆ ಮಾಡುವವರಿಗೆ ಶಕ್ತಿ, ಕುಮ್ಮಕ್ಕು ನೀಡುತ್ತಿದೆ.
– ಎಸ್‌.ಎನ್‌. ಚನ್ನಬಸಪ್ಪ, ಶಾಸಕ

 

Advertisement

Udayavani is now on Telegram. Click here to join our channel and stay updated with the latest news.