Advertisement

Feticide:ಭ್ರೂಣ ಹತ್ಯೆ ಪ್ರಕರಣ-ಸ್ಕ್ಯಾನಿಂಗ್‌ ಕೇಂದ್ರ,ತಪಾಸಣೆ ಬಿಗಿ: ದಿನೇಶ್‌ ಗುಂಡೂರಾವ್‌

12:27 AM Nov 30, 2023 | Team Udayavani |

ಬೆಂಗಳೂರು: ಭ್ರೂಣ ಹತ್ಯೆ ಪ್ರಕರಣ ಗಳಿಂದಾಗಿ ನಮ್ಮ ಇಲಾಖೆಗೆ ಅವಮಾನ ಆದಂತಾಗಿದೆ ಎಂಬುದನ್ನು ಒಪ್ಪಿಕೊಂಡ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಇದು ಯಾರೂ ಒಪ್ಪುವಂಥದ್ದಲ್ಲ ಎಂದರು.

Advertisement

ವಿಕಾಸಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಭ್ರೂಣಹತ್ಯೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಈ ವಿಚಾರದಲ್ಲಿ ಸ್ಪಷ್ಟ ಕಾನೂನುಗಳಿದ್ದು, ಅವುಗಳ ಜಾರಿ ಆಗಲೇಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ನಡೆದಿರುವ ಭ್ರೂಣ ಹತ್ಯೆ ಪ್ರಕರಣದ ತನಿಖೆಯು ಪೊಲೀಸರ ಮೂಲಕ ನಡೆಯುತ್ತಿದ್ದು, ಇದಕ್ಕೆ ಆರೋಗ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ಪೊಲೀಸರು ಇಂತಹದೊಂದು ಜಾಲ ಪತ್ತೆ ಮಾಡಿರುವುದು ನಮ್ಮ ಇಲಾಖೆಯ ಕಣ್ತೆರೆಸಿದಂತಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆಯೂ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದರು.
ಲಿಂಗಾನುಪಾತದಲ್ಲಿ ವ್ಯತ್ಯಯ ಇದೆ ಎಂದರೆ, ರಾಜ್ಯಾದ್ಯಂತ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಿವೆ ಎಂದೇ ಅರ್ಥ. ಇದರಲ್ಲಿ ಯಾವುದೇ ಅನುಮಾನಗಳಿಲ್ಲ. ಇದೊಂದು ಸಾಮಾಜಿಕ ಪಿಡುಗಾಗಿದೆ. ಇದಕ್ಕೆ ಕಡಿವಾಣ ಹಾಕಲೇಬೇಕಿದೆ.

ಗರ್ಭಿಣಿಯರ ನೋಂದಣಿ ಪ್ರಕ್ರಿಯೆ, ಅವರ ಆರೈಕೆ ಪ್ರಕ್ರಿಯೆ, ಜನನ ಪ್ರಮಾಣದ ಪರಿಶೀಲನೆ ಹಾಗೂ ಸ್ಕ್ಯಾನಿಂಗ್‌ ಕೇಂದ್ರಗಳ ತಪಾಸಣೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತದೆ. ಸರಕಾರದಲ್ಲಿ ನೋಂದಣಿ ಮಾಡಿಸಿಕೊಂಡ ಗರ್ಭಿಣಿಯರಿಗೆ ಪ್ರಸವ ಆಗಿದೆಯೇ ಇಲ್ಲವೇ ಎಂಬುದು ಸ್ಪಷ್ಟವಾಗಬೇಕು. ಇದನ್ನು ಬೆಂಬಿಡದೆ ನಿಗಾ ಇಡಬೇಕು. ಸ್ಕ್ಯಾನಿಂಗ್‌ ಕೇಂದ್ರಗಳ ತಪಾಸಣೆಯನ್ನು ನಡೆಸಿ ತಿಂಗಳಿಗೊಮ್ಮೆ ಅಧಿಕಾರಿಗಳ ಹಂತದಲ್ಲಿ ಸಭೆಗಳನ್ನು ನಡೆಸಬೇಕು. ಆಯುಕ್ತರ ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಪ್ರತಿ 6 ತಿಂಗಳಿಗೊಮ್ಮೆ ಸಚಿವರ ಅಧ್ಯಕ್ಷತೆಯಲ್ಲಿ ಈ ಕುರಿತು ಪರಿಶೀಲಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next