Advertisement

ಲಿಂಗ ತಾರತಮ್ಯಕ್ಕೆ ಭ್ರೂಣ ಲಿಂಗ ಪತ್ತೆ ಕಾರಣ: ಡಾ|ರಾಮರಾವ್‌

06:30 AM Jul 22, 2018 | |

ಕುಂದಾಪುರ: ಪ್ರಸ್ತುತ ಉಡುಪಿಯಲ್ಲಿಯೇ ಲಿಂಗಾನುಪಾತದಲ್ಲಿ ವ್ಯತ್ಯಾಸವಿದ್ದು, ಒಂದು ಸಾವಿರ ಪುರುಷರಿಗೆ 950 ಮಂದಿ ಮಹಿಳೆಯರಿದ್ದಾರೆ. ಈ ರೀತಿಯ ಲಿಂಗ ತಾರತಮ್ಯಕ್ಕೆ ಭ್ರೂಣ ಲಿಂಗ ಪತ್ತೆ ಕೂಡ ಒಂದು ಪ್ರಮುಖ ಕಾರಣ ಎಂದು ಉಡುಪಿ ಜಿಲ್ಲಾಸ್ಪತ್ರೆಯ ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮರಾವ್‌ ಹೇಳಿದರು. 

Advertisement

ಶನಿವಾರ ಕುಂದಾಪುರದ ಭಂಡಾಕಾರ್ ಕಾಲೇಜಿನಲ್ಲಿ ತಾ|  ಕಾನೂನು ಸೇವಾ ಸಮಿತಿ, ಬಾರ್‌ ಅಸೋಸಿಯೇಶನ್‌ ಕುಂದಾಪುರ, ಅಭಿಯೋಗ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಭ್ರೂಣ ಲಿಂಗ ತಪಾಸಣೆ ತಡೆಯ ಬಗ್ಗೆ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. 

ಪುರುಷ ಹಾಗೂ ಮಹಿಳಾ ಅಸಮಾನತೆ ಎಲ್ಲ ಕಡೆಗಳಲ್ಲಿಯೂ ಇದ್ದು, ಈ ಸಮಸ್ಯೆಯ ಗಂಭೀರತೆ ನಾವೆಲ್ಲರೂ ಅರಿಯಬೇಕಿದೆ. ಭ್ರೂಣ ಲಿಂಗ ತಪಾಸಣೆ ತಡೆಯ ಕುರಿತು ಇನ್ನಷ್ಟು ಅರಿವು ಮೂಡಬೇಕಿದೆ. ಪರಸ್ಪರ ಪುರುಷ, ಸ್ತ್ರೀಯರ ಮಧ್ಯೆ ತುಂಬಾ ತಾರತಮ್ಯವಿದೆ. ಅದಕ್ಕೆ ಕಾರಣಗಳು ಹಲವು ಎಂದರು.

ಸಹಬಾಳ್ವೆಯಿಂದ ಸಂತೋಷ
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್‌ ನ್ಯಾಯಾಧೀಶ ಮತ್ತು ಕುಂದಾಪುರ ತಾ| ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಡಿ.ಪಿ.ಕುಮಾರಸ್ವಾಮಿ ಮಾತನಾಡಿ, ಜೀವನದಲ್ಲಿ ಕುಟುಂಬ, ಸಮಾಜದೊಂದಿಗೆ ಹೊಂದಾಣಿಕೆ  ಬಹಳ ಮುಖ್ಯ. ಹೀಗಿದ್ದಾಗ ಎಲ್ಲವನ್ನೂ ಕಲಿಯುವುದರ ಜತೆಗೆ ಬದುಕನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಪರಸ್ಪರರೊಂದಿಗೆ ಹೊಂದಾಣಿಕೆಗಳು ನಮ್ಮನ್ನು ಸಂತೋಷದಿಂದಿರಲು ಸಹಕಾರಿಯಾಗುತ್ತದೆ ಎಂದರು. 

ಕುಂದಾಪುರ ಬಾರ್‌ ಅಸೋಸಿ ಯೇಶನ್‌ನ ಅಧ್ಯಕ್ಷ ಸಳ್ವಾಡಿ ನಿರಂಜನ ಹೆಗ್ಡೆ, ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶಚಂದ್ರ ಶೆಟ್ಟಿ, ಬಾರ್‌ ಅಸೋಸಿಯೇಶನ್‌ನ ಪ್ರ. ಕಾರ್ಯದರ್ಶಿ ಎಚ್‌. ಪ್ರಮೋದ್‌ ಹಂದೆ ಉಪಸ್ಥಿತರಿದ್ದರು. 

Advertisement

ಕಾಲೇಜಿನ ಪ್ರಾಂಶುಪಾಲ ಡಾ| ಎನ್‌.ಪಿ ನಾರಾಯಣ ಶೆಟ್ಟಿ ಸ್ವಾಗತಿಸಿದರು. ಇಂಗ್ಲೀಷ್‌ ವಿಭಾಗದ ಉಪಾನ್ಯಾಸಕ ಶರಣ್‌ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಶುಭಕರಾಚಾರಿ ವಂದಿಸಿದರು.

ತಂತ್ರಜ್ಞಾನ ಸದುದ್ದೇಶಕ್ಕೆ ಬಳಕೆಯಾಗಲಿ
ತಂತ್ರಜ್ಞಾನ ನಮ್ಮ ಎಲ್ಲೆಗಳನ್ನು ಮೀರಿ ಬೆಳೆದಿದೆ. ಅದರ ಪ್ರಗತಿ ಸಮಾಜದ ಸ್ವಾಸ್ಥ್ಯ ಹಾಗೂ ಸದ್ಭಳಕೆಗೆ ವಿನಿಯೋಗವಾಗಬೇಕೇ ಹೊರತು, ದುರ್ಬಳಕೆ ಆಗಬಾರದು. ತಂತ್ರಜ್ಞಾನದಲ್ಲಿ ಒಂದಾದ ಭ್ರೂಣ ತಪಾಸಣೆ ಮೆಷಿನ್‌ ಹುಟ್ಟುವ ಮಗುವಿನ ದೈಹಿಕ ಲೋಪದೋಷಗಳನ್ನು ಆರೋಗ್ಯದ ಸಮಸ್ಯೆ ಅರಿಯಲು ಬಳಸಬೇಕು. ಆದರೆ ಇದನ್ನು ಲಿಂಗ ತಪಾಸಣೆಗೆ ಬಳಸುತ್ತಿರುವುವುದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಹೆಣ್ಣು ಲಿಂಗ ಭ್ರೂಣ ಹತ್ಯೆಯಾಗುತ್ತಿದೆ. ಇದರಿಂದ ಸಾಮಾಜಿಕ ಅಭದ್ರತೆ, ಅಸಮತೋಲನಕ್ಕೆ ದಾರಿಯಾಗಿದೆ. ಇದರ ಅರಿವಿನ ಜತೆಗೆ ಕಾನೂನಿನ ಅರಿವು ಇರಬೇಕಾಗಿದೆ.
– ಶ್ಯಾಮಲಾ ಭಂಡಾರಿ, ವಕೀಲರು

Advertisement

Udayavani is now on Telegram. Click here to join our channel and stay updated with the latest news.

Next