Advertisement

ಶಾಲೆಗೆ ಶತಸಂಭ್ರಮ: ಸವಣೂರಿನಲ್ಲಿ ಹಬ್ಬದ ವಾತಾವರಣ

03:49 PM Dec 30, 2017 | |

ಸವಣೂರು: ಶಾಲೆಯೊಂದು ಶತಮಾನ ಪೂರೈಸುವ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಲು ಇಡೀ ಊರೇ ಸಿದ್ಧವಾಗಿದೆ. ಊರ ತುಂಬಾ ಹಬ್ಬದ ವಾತಾವರಣ. ಸವಣೂರು ಪೇಟೆಯನ್ನು ವಿದ್ಯುತ್‌ ದೀಪ, ರಾಷ್ಟ್ರ ಧ್ವಜಗಳಿಂದ ಶೃಂಗರಿಸಲಾಗಿದೆ. ಶ್ರವಣರ ಊರು ಸವಣೂರು ಈಗ ಶಿಕ್ಷಣದೂರು ಆಗಿದೆ. ನೂರು ವರ್ಷಗಳಲ್ಲಿ ಈ ಶಾಲೆಯಲ್ಲಿ ಕಲಿತು ವಿವಿಧೆಡೆ ಉನ್ನತ ಉದ್ಯೋಗ ಪಡೆದವರು ಹಲವರು.

Advertisement

1917 ಡಿಸೆಂಬರ್‌ 15ರಂದು ಚಾಪಲ್ಲ ಎಂಬಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಆರಂಭಗೊಳ್ಳವುವ ಮೂಲಕ ಜ್ಞಾನಮಂದಿರವೊಂದು ರೂಪುಗೊಂಡಿತು.ಅಜಲಾಡಿ ಬೀಡು ಕರಿಯಪ್ಪ ಬಂಟ ಮುಗೇರುಗುತ್ತು ಅವರ ಮುಖಂಡತ್ವದಲ್ಲಿ ಊರಿನವರು ಸೇರಿ ಶಾಲೆಗೊಂದು ಸೂರು ಮಾಡಿದರೆಂದು ಹೇಳಲಾಗಿದೆ. 1963ರ ವರೆಗೂ ಕಿರಿಯ ಪ್ರಾಥಮಿಕ ಶಾಲೆಯಾಗಿದ್ದ ಇದು ಜುಲೈ 8,1963ರಂದು ಇದು ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಾಡು ಹೊಂದಿ ಜಿಲ್ಲಾ ಬೋರ್ಡ್‌ನ ಉಸ್ತುವಾರಿಯಲ್ಲಿದ್ದ ಈ ಶಾಲೆಯು ಸವಣೂರು ಬಸದಿ ಬಳಿಯ ಕಟ್ಟಡವೊಂದರಲ್ಲಿ 15-04-1970ನೇ ಇಸವಿಯವರೆಗೆ ನಡೆಯಿತು.

ನಂತರ ಸವಣೂರು, ಪುಣ್ಚಪ್ಪಾಡಿ ಗ್ರಾಮದ ಶಿಕ್ಷಣಾಸಕ್ತರು ಸೇರಿಕೊಂಡು ತಾಲೂಕು ಅಭಿವೃದ್ಧಿ ಮಂಡಳಿ, ಗ್ರಾ.ಪಂ.ನ ಸಹಕಾರದಲ್ಲಿ ಈಗಿರುವ ಸ್ಥಳದಲ್ಲಿ ಸುಂದರವಾದ ವಿದ್ಯಾದೇಗುಲ ನಿರ್ಮಿಸಿದರು. ಅಂದು 200 ಮಕ್ಕಳನ್ನು ಹೊಂದಿದ್ದ ಈ ಶಿಕ್ಷಣ ಸಂಸ್ಥೆ ಈಗಲೂ ಅದನ್ನು ಉಳಿಸಿಕೊಂಡಿದೆ. 

ಅಂದು ಮುಳಿಹುಲ್ಲಿನ ಛಾವ ಣಿಯಾಗಿದ್ದ ಶಾಲೆ ಇಂದು ತಾರಸಿ ಛಾವಣಿಯಾಗಿದೆ. ಶತ ಸಂಭ್ರಮದಲ್ಲಿರುವ ಈ ಶಾಲೆಯ ಶತಮಾನೋತ್ಸವ ಅವಿಸ್ಮರಣೀಯ ವಾಗಿರಿಸುವ ನಿಟ್ಟಿನಲ್ಲಿ ಈಗಾಗಲೇ ಸುಮಾರು 23 ಲಕ್ಷ ರೂ. ವೆಚ್ಚದಲ್ಲಿ ಗ್ಯಾಲರಿ ನಿರ್ಮಿಸಲಾಗಿದೆ. 25 ಲಕ್ಷ ರೂ. ವೆಚ್ಚದಲ್ಲಿ ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ಕೊಠಡಿಗಳಲ್ಲಿ ವರ್ಲಿ ಚಿತ್ರಕಲೆ ಬಿಡಿಸಲಾಗಿದೆ. ಸಂಸ್ಕೃತಿ, ಶಿಕ್ಷಣಕ್ಕೆ ಸಂಬಂಧಿಸಿದ ವಿಚಾರಗಳು ಮೂಡಿಬಂದಿದೆ. ಶತಸಂಭ್ರಮದಲ್ಲಿರುವ ಈ ಶಾಲೆಯಲ್ಲಿ ಇಲ್ಲಿವರೆಗೆ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಗೌರವಿಸುವುದು,ಅವರ ಸೇವಾ ವಿವರವನ್ನು ಶತಹೆಜ್ಜೆ ಪುಸ್ತಕದಲ್ಲಿ ದಾಖಲಿಸುವ ಮೂಲಕ ಅವರ ಸೇವೆ ಗುರುತಿಸುವ ಕಾರ್ಯ ನಡೆದಿದೆ.

ಪ್ರಸ್ತುತ ಈ ಶಾಲೆಯಲ್ಲಿ 226 ವಿದ್ಯಾರ್ಥಿಗಳು, ಮುಖ್ಯಶಿಕ್ಷಕರು ಸೇರಿ 8 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನೊಳಗೊಂಡ ಶತಸಂಭ್ರಮಾಚರಣೆಯನ್ನು ಕಣ್ತುಂಬಿಸಿಕೊಳ್ಳಲು ಇಡೀ ಊರಿಗೆ ಊರೇ ಎದುರು ನೋಡುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next