ಶಿವಮೊಗ್ಗ: ಹಿಂದೂಗಳ ಮಾರಣ ಹೋಮ ನಡೆಸಿ ವಿಜಯನಗರ ಸಾಮ್ರಾಜ್ಯ ಧ್ವಂಸ ಮಾಡಿದ ಬಹಮನಿ ಸುಲ್ತಾನನ ಉತ್ಸವ ಆಯೋಜಿಸುವುದರ ಜತೆಗೆ ಪಾಕಿಸ್ತಾನದ ನಾಯಕ ಶಾಹಿದ್ ಅಬ್ಟಾಸಿ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಆಚರಿಸಲಿ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಹಮನಿ ಸುಲ್ತಾನನ ಜಯಂತಿಯನ್ನು ಆಚರಣೆ ಮಾಡಲು ಹೊರಟಿರುವುದು ಅಕ್ಷಮ್ಯ ಅಪರಾಧ. ಯಾವುದೇ ಕಾರಣಕ್ಕೂ ಆಚರಣೆ ಮಾಡಬಾರದು. ಹಿಂದೂಗಳ ಕಗ್ಗೊಲೆ ನಡೆಸಿದ ಬಹಮನಿ ಸುಲ್ತಾನನ ಉತ್ಸವವನ್ನು ಆಯೋಜಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಹಮ್ಮದ್ ಬಿನ್ ತುಘಲಕ್‌ಗಿಂತ ಕೀಳುಮಟ್ಟದ ಆಡಳಿತ ನೀಡುತ್ತಿದೆ ಎಂದು ವಾಗ್ಧಾಳಿ ನಡೆಸಿದರು.
ಮಾರ್ಚ್ 6 ರಂದು ಉತ್ಸವ ಆಚರಣೆಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ್ ಹೇಳಿಕೆ ನೀಡಿದರೆ, ಬಹಮನಿ ಉತ್ಸವ ಆಚರಣೆ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಮುಖ್ಯಮಂತ್ರಿ ಹೇಳಿಕೆ ನೀಡುತ್ತಾರೆ. ಸರ್ಕಾರದ ಗಮನಕ್ಕೆ ತಾರದೆ ಉತ್ಸವ ಮಾಡುವುದಕ್ಕೆ ಹೊರಟಿರುವ ಸಚಿವ ಶರಣ ಪ್ರಕಾಶ್‌ರನ್ನು ಮಂತ್ರಿಮಂಡಲದಿಂದ ಕಿತ್ತು ಹಾಕುತ್ತೇನೆ ಎಂಬ ದಿಟ್ಟ ಹೆಜ್ಜೆಯನ್ನು ಮುಖ್ಯಮಂತ್ರಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಿದೆ. ಇದೀಗ ಬಹಮನಿ ಸುಲ್ತಾನರ ಉತ್ಸವ ಆಚರಣೆಗೂ ಮುಂದಾಗಿದೆ. ಅಷ್ಟೇ ಏಕೆ, ಪಾಕ್ ನಾಯಕ ಶಾಹಿದ್ ಅಬ್ಟಾಸಿ ಜಯಂತಿಯನ್ನು ರಾಜ್ಯ ಸರ್ಕಾರದಿಂದಲೇ ಆಚರಣೆ ಮಾಡಲಿ. ರಾಮ ಮಂದಿರ ಒಡೆದು ಹಾಕಿದ ಬಾಬರ್ ಜಯಂತಿಯನ್ನೂ ಆಚರಣೆ ಮಾಡಲಿ. ಗೋರಿಗಳಲ್ಲಿ ಮಲಗಿರುವ ದೇಶ ವಿರೋಧಿಗಳನ್ನು ಮೇಲಕ್ಕೆ ಕರೆ ತಂದು ಜಯಂತಿ ಆಚರಿಸಲಿ. ಹಿಂದೂಗಳನ್ನು ಗೋರಿಯೊಳಕ್ಕೆ ಕೂರಿಸಲಿ ಎಂದು ಕಿಡಿ ಕಾರಿದರು.
ಹಿಂದೂಗಳ ಹತ್ಯೆ ನಡೆಸಿದ ಕ್ರೂರ ವ್ಯಕ್ತಿಯ ಉತ್ಸವ ಮಾಡುತ್ತೇನೆ ಎಂಬ ಸಚಿವರ ಹೇಳಿಕೆ ಕೇವಲ ಹಿಂದೂಗಳಿಗಷ್ಟೆ ಅಲ್ಲ. ರಾಷ್ಟ್ರಪ್ರೇಮಿಗಳಿಗೆ ಮಾಡಿದ ಅಪಮಾನವಾಗಿದೆ. ಸಚಿವರು ಕೂಡಲೇ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.