Advertisement

ಹಬ್ಬದ ಸಡಗರಕ್ಕೆ ಉಂಡೆ, ಉಸ್ಲಿ, ಪಾಯಸ

06:00 AM Oct 10, 2018 | |

ಹಬ್ಬದ ಸಂದರ್ಭದಲ್ಲಿ ಏನಾದರೂ ಹೊಸ ಬಗೆಯ ತಿಂಡಿ ಮಾಡಿ ಮನೆ ಮಂದಿಯನ್ನು ಮೆಚ್ಚಿಸಬೇಕು ಎಂದು ಎಲ್ಲ ಗೃಹಿಣಿಯರೂ ಆಸೆಪಡುತ್ತಾರೆ. ಅಂತವರಿಗಾಗಿ, ನವರಾತ್ರಿ ಹಬ್ಬದಲ್ಲಿ ಮಾಡಬಹುದಾದ ಸರಳ, ಸತ್ವಯುತ ತಿನಿಸುಗಳ ರೆಸಿಪಿ ಇಲ್ಲಿದೆ. 

Advertisement

1. ಕಡಲೆಕಾಳು ಉಂಡೆ 
ಬೇಕಾಗುವ ಸಾಮಗ್ರಿ: ಮೊಳಕೆ ಬರಿಸಿದ ಕಡಲೆ ಕಾಳು- 2 ಕಪ್‌, ತೆಂಗಿನ ತುರಿ- 1/2 ಕಪ್‌, ಶುಂಠಿ- ಅರ್ಧ ಇಂಚು, ಹಸಿಮೆಣಸು, ಉಪ್ಪು, ಇಂಗು.

ಮಾಡುವ ವಿಧಾನ: ಕಡಲೆಕಾಳನ್ನು ಚೆನ್ನಾಗಿ ತೊಳೆದು, ನೀರಲ್ಲಿ ನೆನೆಸಿ, ಮೊಳಕೆಯೊಡೆಸಿ. ಮೊಳಕೆಕಾಳಿನ ಜೊತೆಗೆ ತೆಂಗಿನತುರಿ, ಶುಂಠಿ, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಇಂಗು ಸೇರಿಸಿ, ನೀರುಹಾಕದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಇಡ್ಲಿ ತಟ್ಟೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿದರೆ ಕಡಲೆಕಾಳು ಮೊಳಕೆ ಖಾರದ ಉಂಡೆ ಸವಿಯಲು ಸಿದ್ಧ. 

2. ಕಡಲೆಕಾಳು  ವಡೆ 
ಬೇಕಾಗುವ ಸಾಮಗ್ರಿ:
ಮೊಳಕೆ ಬರಿಸಿದ ಕಡಲೆ ಕಾಳು- 2 ಕಪ್‌, ತೆಂಗಿನ ತುರಿ- 1/2 ಕಪ್‌, ಹೆಚ್ಚಿದ ಈರುಳ್ಳಿ-1, ಶುಂಠಿ- ಅರ್ಧ ಇಂಚು, ಹಸಿರುಮೆಣಸು, ಉಪ್ಪು, ಇಂಗು, ಕರಿಯಲು ಎಣ್ಣೆ

ಮಾಡುವ ವಿಧಾನ: ಕಡಲೆಕಾಳನ್ನು ಚೆನ್ನಾಗಿ ತೊಳೆದು, ನೀರಲ್ಲಿ ನೆನೆಸಿ, ಮೊಳಕೆಯೊಡೆಸಿ. ಮೊಳಕೆಕಾಳಿನ ಜೊತೆಗೆ ತೆಂಗಿನತುರಿ, ಶುಂಠಿ, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಇಂಗು ಸೇರಿಸಿ, ನೀರುಹಾಕದೆ ಗಟ್ಟಿಯಾಗಿ ರುಬ್ಬಿಕೊಳ್ಳಿ. ನಂತರ, ಸಣ್ಣದಾಗಿ  ಹೆಚ್ಚಿದ ಈರುಳ್ಳಿ ಸೇರಿಸಿ ಚೆನ್ನಾಗಿ ಕಲೆಸಿ, ಅಂಬೊಡೆಯಂತೆ ಎಣ್ಣೆಯಲ್ಲಿ ಕರಿದರೆ ಗರಿಗರಿಯಾದ ಕಡಲೆಕಾಳು ಮೊಳಕೆ ವಡೆ ರೆಡಿ. 

Advertisement

3. ಕಡಲೆಕಾಳು ಉಸಲಿ 
ಬೇಕಾಗುವ ಸಾಮಗ್ರಿ:
ಮೊಳಕೆ ಬರಿಸಿದ ಕಡಲೆಕಾಳು, ಉಪ್ಪು, ಹಸಿ/ಒಣಮೆಣಸು, ತೆಂಗಿನತುರಿ, ಶುಂಠಿ, ಕೊತ್ತಂಬರಿಸೊಪ್ಪು, ಒಗ್ಗರಣೆಗೆ ಎಣ್ಣೆ ಮತ್ತು ಸಾಸಿವೆ.

ಮಾಡುವ ವಿಧಾನ: ಕುಕ್ಕರ್‌ನಲ್ಲಿ ಸ್ವಲ್ಪ ಉಪ್ಪು ಹಾಕಿದ ನೀರು ಹಾಕಿ, ಮೊಳಕೆಬಂದ ಕಡಲೆಕಾಳನ್ನು ನಾಲ್ಕೈದು ವಿಷಲ್‌ ಕೂಗುವತನಕ ಬೇಯಿಸಿ. ನಂತರ ನೀರನ್ನು ಬಸಿದು, ಬೆಂದಕಾಳನ್ನು ಬೇರ್ಪಡಿಸಿ.  ಖಾರಕ್ಕೆ ತಕ್ಕಷ್ಟು ಹಸಿ ಅಥವಾ ಒಣ ಮೆಣಸಿನಕಾಯಿ, ತೆಂಗಿನತುರಿ, ಶುಂಠಿ, ಸ್ವಲ್ಪ ಕೊತ್ತಂಬರಿಸೊಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಒಗ್ಗರಣೆಗೆ ಸಾಸಿವೆ ಸಿಡಿಸಿದ ನಂತರ, ಅರೆದ ಖಾರವನ್ನು ಎಣ್ಣೆಯಲ್ಲಿ ಬಾಡಿಸಿ, ನಂತರ ಬೆಂದ ಮೊಳಕೆ ಕಾಳನ್ನು ಬಾಣಲೆಗೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು (ಈಗಾಗಲೇ ಬೇಯಲು ಹಾಕಿದ ಉಪ್ಪಿನ ಪ್ರಮಾಣವನ್ನು ಅನುಸರಿಸಿ)ಹಾಕಿ, ಖಾರದೊಂದಿಗೆ ಬೆರೆಯುವತನಕ  ಚೆನ್ನಾಗಿ ಬಾಡಿಸಿ ಮುಚ್ಚಿಟ್ಟು, ನಾಲ್ಕೈದು ನಿಮಿಷ  ಸಣ್ಣಉರಿಯಲ್ಲಿ ಬೇಯಿಸಿ ಉರಿ ಆರಿಸಿ. ಹತ್ತು ನಿಮಿಷ ತಣಿದನಂತರ ಸ್ವಾದಿಷ್ಟ ಉಸಲಿ  ಸೇವಿಸಲು ಹಿತವಾಗಿರುತ್ತದೆ. 

(ಮೇಲೆ ಹೇಳಿದ ವಿಧಾನದಲ್ಲಿ ಮೊಳಕೆಬರಿಸಿದ ಹೆಸರುಕಾಳಿನಲ್ಲೂ  ಖಾರದ ಉಂಡೆ, ಉಸಲಿ ತಯಾರಿಸಬಹುದು)

4. ಗೋಧಿ ನುಚ್ಚು ,ಸಬ್ಬಕ್ಕಿ ಹಲ್ವ   
ಬೇಕಾಗುವ ಸಾಮಗ್ರಿ: ಗೋಧಿನುಚ್ಚು- 1 ಕಪ್‌, ಸಬ್ಬಕ್ಕಿ- 1ಕಪ್‌, ಬೆಲ್ಲದ ತುರಿ, ತುಪ್ಪ, ಏಲಕ್ಕಿ ಪುಡಿ, ಗೋಡಂಬಿ, ದ್ರಾಕ್ಷಿ. 

ಮಾಡುವ ವಿಧಾನ: ಗೋಧಿನುಚ್ಚು, ಸಬ್ಬಕ್ಕಿ ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ. ಅದರ ಅಳತೆಯ ಎರಡರಷ್ಟು ನೀರು ಹಾಕಿ ಕುಕ್ಕರ್‌ನಲ್ಲಿ ಬೇಯಿಸಿ. ದಪ್ಪ ತಳದ ಪಾತ್ರೆಯಲ್ಲಿ ಮೊದಲಿಗೆ ಸ್ವಲ್ಪ ತುಪ್ಪ ಹಾಕಿ,ಅದಕ್ಕೆ ಸಿಹಿಯ ಅಗತ್ಯಕ್ಕೆ ತಕ್ಕಂತೆ ಹೆರೆದು ಶುದ್ಧೀಕರಿಸಿದ ಬೆಲ್ಲದಪುಡಿ ಬೆಚ್ಚಗಾಗಿಸಿ ಹಾಕಿ. ಈಗಾಗಲೇ ಬೆಂದ ಗೋಧಿನುಚ್ಚು ,ಸಬ್ಬಕ್ಕಿಯನ್ನು ಬೆಲ್ಲದೊಂದಿಗೆ ಬೆರೆಸಿ ಸಣ್ಣ ಉರಿಯಲ್ಲಿ ಗೊಟಾಯಿಸುತ್ತಿರಿ. ಮಿಶ್ರಣ, ಪಾತ್ರೆಗೆ ಅಂಟದೇ ಹೊರಬರುತ್ತಿದೆ ಎನ್ನುವಾಗ ಏಲಕ್ಕಿ ಪುಡಿ ಸೇರಿಸಿ ಬೇರೊಂದು ಪಾತ್ರೆಗೆ ವರ್ಗಾಯಿಸಿ. ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿಯನ್ನು ಹಲ್ವದ ಮೇಲಿಟ್ಟು ಅಲಂಕರಿಸಿ. 

5. ಕಡಲೆಬೇಳೆ, ಸಬ್ಬಕ್ಕಿ ಪಾಯಸ 
ಬೇಕಾಗುವ ಸಾಮಗ್ರಿ:
ಕಡಲೆಬೇಳೆ- 2 ಕಪ್‌, ಸಬ್ಬಕ್ಕಿ- 1 ಕಪ್‌, ಬೆಲ್ಲದ ಪುಡಿ, ಏಲಕ್ಕಿಪುಡಿ, ದ್ರಾಕ್ಷಿ, ಗೋಡಂಬಿ

ಮಾಡುವ ವಿಧಾನ: ಕಡಲೆಬೇಳೆ ಹಾಗೂ ಸಬ್ಬಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಸ್ವಲ್ಪ ಬೆಚ್ಚಗೆ ಮಾಡಿ. ನಂತರ ಕುಕ್ಕರ್‌ನಲ್ಲಿ ನಾಲ್ಕು ಅಳತೆಯಷ್ಟು ನೀರು ಹಾಕಿ  ಬೇಯಿಸಿ. ಬೆಂದ ಮಿಶ್ರಣಕ್ಕೆ ಬೆಲ್ಲದ ಪುಡಿ ಹಾಕಿ, ಸಣ್ಣ ಉರಿಯಲ್ಲಿ ಮಿಶ್ರಣ ಬೆಲ್ಲದೊಂದಿಗೆ ಬೆರೆಯುವತನಕ ಕೈಯಾಡಿಸಿ. ಪಾಯಸದ ಹದ ಬರುತ್ತಲೇ ಏಲಕ್ಕಿಪುಡಿ ಹಾಕಿ. ನಂತರ ತುಪ್ಪದಲ್ಲಿ ಕರಿದ ಗೋಡಂಬಿ, ದ್ರಾಕ್ಷಿ ಬೆರೆಸಿ. (ಪಾಯಸಕ್ಕೆ ಮತ್ತಷ್ಟು ರುಚಿ ಬರಲು ಹಾಲು ಸೇರಿಸುವ ಪಕ್ಷದಲ್ಲಿ ದ್ರಾಕ್ಷಿ ಬಳಸಬೇಡಿ )

ಕೆ.ವಿ.ರಾಜಲಕ್ಷ್ಮಿ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next