ಬೆಂಗಳೂರು: ಮತ್ತೊಂದು ಹಬ್ಬದ ಸೀಜನ್. ಪ್ರಯಾಣಿಕರಿಗೆ ಮತ್ತದೇ ದುಬಾರಿ ಪ್ರಯಾಣದ “ಬರೆ’! ಹೌದು, ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ನಗರದಿಂದ ಬಹುತೇಕರು ತಮ್ಮ ಊರುಗಳು ಮತ್ತು ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಇನ್ನೂ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡುವುದಾಗಿಯೂ ಹೇಳಿಲ್ಲ. ಈ ಅವಕಾಶವನ್ನು ಅಕ್ಷರಶಃ ಪ್ರಯಾಣಿಕರ ಸುಲಿಗೆಗೆ ಬಳಸಿಕೊಳ್ಳಲು ಖಾಸಗಿ ಸಾರಿಗೆ ಸಂಸ್ಥೆಗಳು ಮತ್ತು
ಬುಕಿಂಗ್ ಏಜೆನ್ಸಿಗಳು ಸಜ್ಜಾಗಿವೆ.
ದುಪ್ಪಟ್ಟು ಮೂರುಪಟ್ಟು ಅಲ್ಲ ಹಲವು ಪಟ್ಟು ಹೆಚ್ಚಳ ಮಾಡಲಾಗಿದೆ. ಉದಾಹರಣೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಡಿ. 25ಕ್ಕೆ ಪ್ರೀಮಿಯಂ ಬಸ್ ಪ್ರಯಾಣದರ 8 ಸಾವಿರ ಇದ್ದರೆ, ಬೆಂಗಳೂರಿನಿಂದ ಎರ್ನಾಕುಲಂಗೆ ಅದೇ ದಿನ 7 ಸಾವಿರ ಇದೆ. ಇದೇ ಮಾರ್ಗಗಳಲ್ಲಿ ಹೊಸ ವರ್ಷಕ್ಕೆ ಅಂದರೆ ಜ. 1ಕ್ಕೆ ನೀವು ವಾಪಸ್ ಬರಲು ಇದೇ ಮೊತ್ತವನ್ನು ಪಾವತಿಸಬೇಕಾಗಿದೆ.
ಬೆಂಗಳೂರಿನಿಂದ ಎರ್ನಾಕುಲಂ ಪ್ರಯಾಣಕ್ಕೂ 7 ಸಾವಿರ ದರ ಇದೆ. ಮಂಗಳೂರಿಗೆ 3,500 , ಮೈಸೂರಿಗೆ 5 ಸಾವಿರ, ಮಡಿಕೇರಿಗೆ 1,600 ದರ ನಿಗದಿಯಾಗಿರುವುದು ವೆಬ್‌ಸೈಟ್‌ಗಳಲ್ಲಿ ತೋರಿಸುತ್ತಿದೆ. ವಿಚಿತ್ರವೆಂದರೆ ತಿಂಗಳು ಮೊದಲೇ ಬುಕಿಂಗ್ ಮಾಡಿದ್ದರೆ, ಪ್ರಯಾಣಿಕರು ಈ ಮೊತ್ತದಲ್ಲಿ ವಿಮಾನಗಳಲ್ಲೇ ಪ್ರಯಾಣಿಸಬಹುದು.
ಕ್ರಿಸ್‌ಮಸ್ ಪ್ರಯುಕ್ತ ಮುಂದಿನ ವಾರ ಬಹುತೇಕ ಖಾಸಗಿ ಶಾಲೆಗಳಿಗೆ ರಜೆ ಇದ್ದುದರಿಂದ ಬೇಡಿಕೆ ಹೆಚ್ಚಾಗಿದೆ. ಆದರೆ, ಹೊರ ಊರುಗಳಿಗೆ ತೆರಳಲು ಖಾಸಗಿ ಬಸ್‌ಗಳನ್ನು ಹತ್ತಲು ಮುಂದಾದವರು ಪ್ರಯಾಣ ದರ ನೋಡಿ ಗಾಬರಿಗೊಳ್ಳುತ್ತಿದ್ದಾರೆ. ಹಬ್ಬ ಮತ್ತು ಸರ್ಕಾರಿ ರಜೆಗಳ ಸಂದರ್ಭದಲ್ಲಿ ಪ್ರಯಾಣ ದರ ಹೆಚ್ಚಳವಾಗದಂತೆ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದ್ದರು. ಸಾರಿಗೆ ಅಧಿಕಾರಿಗಳು ಖಾಸಗಿ ಬಸ್ ಆಪರೇಟರ್‌ಗಳ ಸಭೆಯನ್ನೂ ಈ ಹಿಂದೆ ಮಾಡಿದ್ದರು. ಅದಾವುದಕ್ಕೂ ಬಸ್ ಮಾಲಿಕರು ಸೊಪ್ಪುಹಾಕಿಲ್ಲ.
ಕೆಎಸ್‌ಆರ್‌ಟಿಸಿ ಬಸ್ ಗಳಲ್ಲಿ ಮಾತ್ರ ಪ್ರಯಾಣ ದರ ಸಾಮಾನ್ಯ ದಿನಗಳಷ್ಟೇ ಇದೆ. ಹೊರ ರಾಜ್ಯಗಳಿಗೆ ವಿಶೇಷ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದು ಕೆಎಸ್‌ಆರ್‌ಟಿಸಿಗೆ ಕಷ್ಟದ ಕೆಲಸ. ಬೇಡಿಕೆ ಆಧರಿಸಿ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆ ಮಾಡಿದರೆ, ಅಂತರರಾಜ್ಯ ಒಪ್ಪಂದ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಹೆಚ್ಚುವರಿ ಬಸ್ ಗಳನ್ನು ಕಾರ್ಯಾಚರಣೆ ಮಾಡುವುದು ಕಷ್ಟ. ಇದರ ನಡುವೆಯೂ ಕ್ರಿಸ್‌ಮಸ್ ರಜೆಯಲ್ಲಿ ಪ್ರಯಾಣಿಕರಿಗೆ ಅನುಕೂಲ ಮಾಡಲು ಹೆಚ್ಚುವರಿ 300 ವಿಶೇಷ ಬಸ್ ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿದೆ ಎಂದು ಕೆಎಸ್ ಆರ್‌ಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.