Advertisement

ಹಬ್ಬದ ಖರೀದಿ ಭರಾಟೆ ಜೋರು

01:39 PM Oct 18, 2018 | |

ಶಿವಮೊಗ್ಗ: ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಖರೀದಿ ಭರಾಟೆ ಬುಧವಾರ ಜೋರಾಗಿತ್ತು. ಗಾಂಧಿ ಬಜಾರ್‌ ನಿಂದ ಶಿವಪ್ಪ ನಾಯಕ ಸರ್ಕಲ್‌ವರೆಗೂ ಜನದಟ್ಟಣೆ ಹೆಚ್ಚಾಗಿದ್ದರಿಂದ ವಾಹನ ಸವಾರರು ಪರದಾಡಿದರು.

Advertisement

 ಅಷ್ಟೇ ಅಲ್ಲದೆ ಗೋಪಿ ಸರ್ಕಲ್‌, ಜೈಲ್‌ ಸರ್ಕಲ್‌, ಹೊಳೆ ಬಸ್‌ ಸ್ಟಾಪ್‌ ಹೀಗೆ ಹಲವು ಪ್ರಮುಖ ವೃತ್ತಗಳಲ್ಲಿ ಹೂವು, ಹಣ್ಣು, ಬಾಳೆದಿಂಡು, ಕಬ್ಬಿನ ದಿಂಡು, ಬೂದುಗುಂಬಳ ಮಾರಾಟ ಜೋರಾಗಿತ್ತು. ಬೂದುಗುಂಬಳ ಮತ್ತು ಚೆಂಡು ಹೂವು ದರ ಸಾಮಾನ್ಯ ದಿನಕ್ಕಿಂತ ಹೆಚ್ಚಾಗಿತ್ತು.
 
 ಚೆಂಡೂ ಹೂ ಕೆಜಿಗೆ 40 ರಿಂದ 50 ರೂ., ಸೇಬು 100 ರೂ., ಮೂಸಂಬಿ 40 ರಿಂದ 50ರೂ., ಸೀತಾಫಲ 60 ರೂ., ದ್ರಾಕ್ಷಿ 100 ರೂ., ಸಪೋಟ 40 ರೂ., ದಾಳಿಂಬೆ 100 ರೂ., ಸೇವಂತಿಗೆ ಮಾರಿಗೆ 50ರಿಂದ 0 ರೂ., ಮಲ್ಲಿಗೆ ಮಾರಿಗೆ 80 ರೂ., ಬೂದುಗುಂಬಳ ಸೈಜಿನ ಆಧಾರದ ಮೇಲೆ 40 ರಿಂದ 150 ರೂ.ವರೆಗೂ ಮಾರಾಟವಾದವು.

 ಬೆಳೆ ತುಸು ಹೆಚ್ಚಾದರೂ ವ್ಯಾಪಾರಕ್ಕೆ ಗರ ಬಡಿದಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿ ಸುರೇಶ್‌. ಹಬ್ಬ ಎಂದು ಹೆಚ್ಚಾಗಿ ಹೂವು ತರಿಸಿದ್ದೇವೆ. ಸಂಜೆ ಆದರೂ ಇನ್ನೂ ಖರ್ಚಾಗಿಲ್ಲ. ಹೀಗೆ ಆದರೆ ನಮಗೆ ಲಾಸ್‌ ಆಗುತ್ತದೆ. ಗಣಪತಿ ಹಬ್ಬಕ್ಕೆ ಹೋಲಿಸಿದರೆ ದರದಲ್ಲಿ ತುಂಬಾ ಹೆಚ್ಚಾಗಿಲ್ಲ. ಆದರೂ ವ್ಯಾಪಾರವಾಗುತ್ತಿಲ್ಲ ಎನ್ನುತ್ತಾರೆ ಅವರು.

 ಹಾಸನದಿಂದ ಲಾರಿ ಮಾಡಿಕೊಂಡು ಬೂದುಗುಂಬಳ ತರಿಸಿದ್ದೇನೆ. ಲಾರಿ ಬಾಡಿಗೆಯೇ 10 ಸಾವಿರ ಆಗಿದೆ. ಇಲ್ಲಿ ಜನ ನೋಡಿದರೆ 10, 20 ರೂ.ಗೆ ಕೇಳುತ್ತಾರೆ. ಇದನ್ನು ಇಟ್ಟುಕೊಳ್ಳಲು ಬರೋದಿಲ್ಲ. ಏನು ಮಾಡೋದು ಅದಕ್ಕೆ ಹೋದಷ್ಟು ದರಕ್ಕೆ ಕೊಡುತ್ತಿದ್ದೇವೆ ಎನ್ನುತ್ತಾರೆ ವ್ಯಾಪಾರಿ ಜೋಯ. 

ದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಅಲಂಕಾರ ಸಂಭ್ರಮ, ಸಡಗರದಿಂದ ಕೂಡಿದ್ದು ಮಹಾನವಮಿಗೆ ಭರದ ಸಿದ್ಧತೆ ನಡೆಯುತ್ತಿದೆ. ಪಾಲಿಕೆ ವತಿಯಿಂದ ನಡೆಯುತ್ತಿರುವ ದಸರಾದಲ್ಲಿ ನಗರದ ದೇವತೆಗಳಿಗೆ ಭಾಗವಹಿಸಲು ಅನುದಾನ ನೀಡಿರುವುದರಿಂದ ಎಲ್ಲ ದೇವಾಲಯಗಳು ಭಾಗವಹಿಸುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next