Advertisement

Desi Swara: ಕ್ಲೀವ್‌ಲ್ಯಾಂಡ್‌ನ‌ ಕನ್ನಡಿಗರ ಮನೆಯಲ್ಲಿ ನವರಾತ್ರಿ ಸಡಗರ

11:32 AM Nov 04, 2023 | Team Udayavani |

ಹಿಂದೂಗಳು ಆಚರಿಸುವ ಹಬ್ಬಗಳಲ್ಲಿ ನವರಾತ್ರಿಯ ಆಚರಣೆ ಒಂದು ವಿಶಿಷ್ಟ ಸ್ಥಾನ ಪಡೆದಿದೆ. ವಿದೇಶಗಳಲ್ಲಿರುವ ಹಿಂದೂಗಳು ಈ ಹಬ್ಬವನ್ನು ಮಕ್ಕಳಿಗೆ ಸಂಸ್ಕೃತಿ, ಸಂಪ್ರದಾಯ, ಧಾರ್ಮಿಕ ಆಚರಣೆಗಳ ಪರಿಚಯ ಮಾಡಿಸಿ, ಉಳಿಸಿ ಬೆಳೆಸುವ ಉದ್ದೇಶದಿಂದ ಸಂಭ್ರವದಿಂದ ಆಚರಿಸುತ್ತಾರೆ ಮತ್ತು ಜನರನ್ನು ಆಹ್ವಾನಿಸಿ, ಸಂಪರ್ಕ ಬೆಸೆಯಲು ಸುಸಮಯವೆಂದು ಭಾವಿಸುತ್ತಾರೆ.

Advertisement

ಅಮೆರಿಕದ ಕ್ಲೀವ್‌ಲ್ಯಾಂಡ್‌ನ‌ಲ್ಲಿ ನೆಲೆಸಿದ ಭಾರತೀಯರ ಹಾಗೂ ಕನ್ನಡಿಗರ ಮನೆಯಲ್ಲಿ ನವರಾತ್ರಿಯ ಸಂಭ್ರಮದಲ್ಲಿ ಬೊಂಬೆಗಳನ್ನು ಜೋಡಿಸಲಾಗಿತ್ತು. ಅವರ ಮನೆಗಳಿಗೆ ಭೇಟಿ ನೀಡಲು ಆಮಂತ್ರಣ ನನಗೆ ಸಿಕ್ಕಿತ್ತು. ಮನೆಯವರ ಅಭಿರುಚಿಗೆ ಅವರವರ ಆಸಕ್ತಿಗೆ ತಕ್ಕಂತೆ ಗೊಂಬೆಗಳನ್ನು ವ್ಯವಸ್ಥಿತವಾಗಿ ಜೋಡಿಸಲಾಗಿತ್ತು. ಎಲ್ಲರ ಮನೆಯ ಗೊಂಬೆಗಳು ಆಕರ್ಷಣೀಯವಾಗಿತ್ತು. ನವರಾತ್ರಿಯ ಒಂಬತ್ತು ದಿನವೂ ಒಬ್ಬೊಬ್ಬರ ಮನೆಯಲ್ಲೂ ಸಂಭ್ರಮ ಮನೆಮಾಡಿತ್ತು. ಬೊಂಬೆಗಳ ನೋಟ, ರುಚಿರುಚಿಯಾದ ಊಟ ಎಲ್ಲರ ಮನೆಯಲ್ಲೂ ಸಂಗೀತ ಬಲ್ಲವರಿಂದ ಗಾಯನ. ಇಲ್ಲಿ ಬಹತೇಕ ಮಕ್ಕಳಿಗೆ ಸಂಗೀತ, ನೃತ್ಯ, ವಾದ್ಯಗಳು ಏನಾದರೊಂದು ಹವ್ಯಾಸ ಇದ್ದೇ ಇರುತ್ತದೆ.

ಎಲ್ಲಿ ಹೋದರು ಕಿವಿಗೆ ಇಂಪಾಗುವಂತೆ ಮಕ್ಕಳು ಹಾಡುತ್ತಿದ್ದರು. ಮಕ್ಕಳು, ಹಿರಿಯರು ಸಾಂಪ್ರದಾಯಿಕ ಉಡುಗೆ, ಒಡವೆ ಧರಿಸಿ ಕಂಗೊಳಿಸುತ್ತಿದ್ದರು. ಎಲ್ಲ ಪರಿಚಿತರು, ಗೆಳೆಯರು ಒಂದೆಡೆ ಸೇರಿ ಸಂತೋಷವಾಗಿ ಕಾಲ ಕಳೆಯುವುದಕ್ಕೆ ಹಬ್ಬ ಒಂದು ಮಾಧ್ಯಮ. ನಮ್ಮ ಪರಂಪರೆಯನ್ನು ಎಲ್ಲಿದ್ದರು ಬೆಳೆಸುವುದು ನಮ್ಮ ಕರ್ತವ್ಯ ಎನ್ನುವ ಮನೋಭಾವವು ಎಲ್ಲರಲ್ಲೂ ಇರುವುದೇ ಸಂತಸದ ಸಂಗತಿ.

ಎಲ್ಲರ ಗಮನ ಸೆಳೆದದ್ದು ಶುಭಾ ಪ್ರಸಾದ್‌ ದಂಪತಿಗಳ ಮನೆಯ ಬೇಸ್‌ಮೆಂಟ್‌ನಲ್ಲಿ ವಿಶಿಷ್ಟ ಅರ್ಥಪೂರ್ಣವಾದ ಬೊಂಬೆಗಳ ಜೋಡಣೆ. ಪರಂಪರಾನುಗತವಾಗಿ ನವರಾತ್ರಿ ಹಬ್ಬವನ್ನು ಆಚರಿಸುತ್ತಿರುವ ಇವರ ಮನೆಯಲ್ಲಿ ಮಾಮೂಲಿಯಂತೆ ಪಟ್ಟದ ಗೊಂಬೆಗಳೊಂದಿಗೆ ಪ್ರತೀ ವರ್ಷವೂ ಯಾವುದಾದರೊಂದು ವಿಷಯವನ್ನು ಪ್ರಧಾನವಾಗಿ ಪರಿಗಣಿಸಿ ಅದನ್ನು ಕೇಂದ್ರೀಕರಿಸಿ ಅದರ ಮಹತ್ವ , ತಿಹಾಸವನ್ನು ವಿವರಗಳೊಂದಿಗೆ ಬರೆದು ಮುದ್ರಿಸಿ ಫ‌ಲಕಗಳನ್ನು ಗೊಂಬೆಗಳ ಮುಂದೆ ಪ್ರದರ್ಶಿಸುತ್ತಾರೆ. ಈ ಬಾರಿಯ ವಿಷಯ “ಮಹಾದೇವ ಶಿವ’’. ಭಾರತದ ಯಾವ ಯಾವ ಭಾಗದಲ್ಲಿ ಶಿವಾಲಯಗಳಿವೆಯೋ ಅದನ್ನೆಲ್ಲ ಭಾರತದ ಭೂಪಟದಲ್ಲಿ ನಮೂದಿಸಿ ಅಲ್ಲಿಯ ಲಿಂಗದ ಪ್ರತಿರೂಪಗಳನ್ನಿಟ್ಟಿದ್ದರು.

ಕೈಲಾಸ, ಗಿರಿಜಾ ಕಲ್ಯಾಣ, ಗಣೇಶ, ಷಣ್ಮುಖನ ಜನನ ಮತ್ತು ಷಣ್ಮುಖ-ಗಣೇಶರ ನಡುವೆ ಮಾವಿನ ಹಣ್ಣಿಗಾಗಿ ನಡೆದ ಸ್ಪರ್ಧೆಯ ಬೊಂಬೆಗಳು, ಭಕ್ತ ಮಾರ್ಕಂಡೇಯ, ಬೇಡರ ಕಣ್ಣಪ್ಪ , ಶಿವಗಣ ಬೊಂಬೆಗಳು ಇನ್ನು ಹತ್ತು ಹಲವಾರು ಶಿವನ ಮಹಿಮೆಯನ್ನು ಸಾರುವ ಗೊಂಬೆಗಳು. ಇಷ್ಟೇ ಅಲ್ಲದೆ ಶ್ರೀನಿವಾಸ ಕಲ್ಯಾಣ, ಸೋದೆ ವಾದಿರಾಜರು ಮತ್ತು ಅವರ ಬೃಂದಾವನ, ದಶಾವತಾರದ ಸಾಲು ಸಾಲು ಗೊಂಬೆಗಳು. ಮಕ್ಕಳಿಗೂ ಅರ್ಥವಾಗುವಂತೆ ಸರಳವಾಗಿ ಕಥೆ ಬರೆದು, ಮುದ್ರಿಸಿ ಬೊಂಬೆಗಳ ಮುಂದೆ ಫ‌ಲಕಗಳನ್ನಿಟ್ಟಿದ್ದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿತ್ತು.

Advertisement

ನೋಡುತ್ತಿದ್ದವರಿಗೆ ನಾವು ಯಾವುದೋ ಗೊಂಬೆಯ ಪ್ರದರ್ಶನಾಲಯದಲ್ಲಿದ್ದೇವೆ ಎನ್ನಿಸುತ್ತಿತ್ತು. ನೂರಾರು ಮಂದಿ ಆತ್ಮೀಯರನ್ನು ಆಮಂತ್ರಿಸಿದ್ದರು. ವಿಶೇಷವಾಗಿ ಮಕ್ಕಳಿಗೆಲ್ಲ ಗೊಂಬೆಗಳನ್ನು ಸರಿಯಾಗಿ ಗಮನಿಸಬೇಕೆಂದು ತಿಳಿಸಿ ಅವರಿಗಾಗಿ ಒಂದು ಪ್ರಶ್ನೆಪತ್ರಿಕೆ ತಯಾರಿಸಿ ಒಂದು ಕ್ವಿಜ್‌ ಕಾರ್ಯಕ್ರಮವನ್ನು ನಡೆಸಿ ಮಕ್ಕಳನ್ನೆಲ್ಲ ನಗಿಸಿ ಒಂದೊಂದು ಬಹುಮಾನವನ್ನು ನೀಡಿ ಖುಷಿಪಡಿಸಿದರು. ಎಲ್ಲರನ್ನು ಉಪಚರಿಸಿ ಭರ್ಜರಿ ಊಟ ಹಾಕಿ ಫ‌ಲ ತಾಂಬೂಲ ನೀಡಿ ಆದರದಿಂದ ಬೀಳ್ಕೊಡುತ್ತಿದ್ದರು.

ಸಂಗೀತ ಗುರು ಚಂದ್ರಿಕಾಗೋಪಾಲರವರ ಮನೆಯಲ್ಲಿ ಅಲಂಕೃತ ಗೊಂಬೆಗಳನ್ನು ಅಂದವಾಗಿ ಜೋಡಿಸಿ ದಿನವೂ ಲಲಿತ ಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ ಮಾಡಿ ಎಲ್ಲರನ್ನು ಆಹ್ವಾನಿಸಿ, ಆದರಿಸಿ ಪ್ರಸಾದ ಹಂಚಿ, ತಾಂಬೂಲ ದಕ್ಷಿಣೆ ನೀಡುತ್ತಿದ್ದರು. ಅನೇಕರ ಮನೆಗಳಲ್ಲಿ ವಿಷ್ಣುಸಹಸ್ರನಾಮ ಪಠಣ, ಭಾಗವತ, ರಾಮಾಯಣ ಪಾರಾಯಣ ನಡೆಸುತ್ತಿದ್ದರು.

ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷೆ ದೀಪಾರಾವ್‌ ಮನೆಯಲ್ಲಿ ದುರ್ಗಾಷ್ಟಮಿಯಂದು ದುರ್ಗಾ ಹೋಮ ಕಾರ್ಯಕ್ರಮಕ್ಕೆ ಎಲ್ಲರನ್ನು ಆಹ್ವಾನಿಸಿ, ವಿಶೇಷವಾದ ಅಡುಗೆ ಮಾಡಿಸಿ ಎಲ್ಲರನ್ನು ಉಪಚರಿಸಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಇಲ್ಲಿರುವ ಸಂಗೀತ, ನೃತ್ಯ ವಾದ್ಯಗಳನ್ನು ಕಲಿಸುವ ಗುರುಗಳು ತಮ್ಮ ಶಿಷ್ಯರೊಂದಿಗೆ ಕೆಲವು ನಿಯಮಗಳನ್ನು ಪಾಲಿಸಲು ಆದೇಶಿಸುತ್ತಾರೆ.

ಹೆಣ್ಣು ಮಕ್ಕಳು ತಲೆಗೂದಲನ್ನು ಕಟ್ಟಿರಬೇಕು. ಹಣೆಗೆ ಕುಂಕುಮ ಹಚ್ಚಿಕೊಳ್ಳಬೇಕು. ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಎಲ್ಲ ಮಕ್ಕಳು ಧರಿಸಬೇಕು. ಎಲ್ಲ ಹಬ್ಬಗಳ ಸಂದರ್ಭದಲ್ಲಿ ಅದರ ಮಹತ್ವವನ್ನು ಮಕ್ಕಳಿಗೆ ತಿಳಿಸಿ ಹೇಳುತ್ತಾರೆ ಮತ್ತು ವಿವಿಧ ಭಾಷೆಯ ವಾಗ್ಗೇಯಕಾರರ ರಚನೆಗಳನ್ನು, ಅದರ ಅರ್ಥವನ್ನು ವಿವರಿಸಿ ಮಕ್ಕಳ ಜ್ಞಾನಾಭಿವೃದ್ಧಿಗೆ ಸಹಾಯ ಮಾಡುತ್ತಾರೆ. ವಿಜಯದಶಮಿಯಂದು ತಮ್ಮ ಸಂಗೀತ ಶಾಲೆಯ ಎಲ್ಲ ಮಕ್ಕಳಿಗೂ ಸರಸ್ವತೀ ಪೂಜೆ ಮಾಡಿಸಿ ಅವರಿಗೆ ಭರ್ಜರಿ ಭೋಜನವನ್ನು ಹಾಕಿ ಆಶೀರ್ವದಿಸುತ್ತಾರೆ. ಎಲ್ಲಿದ್ದರು ತಮ್ಮತನವನ್ನು ಉಳಿಸಿಕೊಂಡು ಸನಾತನ ಧರ್ಮವನ್ನು ಕಾಪಾಡುತ್ತಿರುವ ನಮ್ಮ ಹಿಂದೂಗಳ ಮನೋಧರ್ಮ ವಂದನೀಯ.

* ಸಾವಿತ್ರಿ ರಾವ್‌, ಕ್ಲೀವ್‌ಲ್ಯಾಂಡ್‌

Advertisement

Udayavani is now on Telegram. Click here to join our channel and stay updated with the latest news.

Next