Advertisement
ಕಳೆದ ತಿಂಗಳು ಅಬಕಾರಿ ಸುಂಕ ಮೂಲದಿಂದ ಬರೋಬ್ಬರಿ 2,005 ಕೋಟಿ ರೂ. ಸಂಗ್ರಹವಾಗಿತ್ತು. 2019ರ ಅಕ್ಟೋಬರ್‌ನಲ್ಲಿ 1,750 ಕೋಟಿ ರೂ. ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಇಲಾಖೆಗೆ 255 ಕೋಟಿ ರೂ. ಹೆಚ್ಚುವರಿ ತೆರಿಗೆ ಆದಾಯ ಬಂದಿದೆ. ಆ ಮೂಲಕ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಕ್ಟೋಬರ್ ಅಂತ್ಯದ ವರೆಗೆ ಅಬಕಾರಿ ಸುಂಕ ಆದಾಯ 11,698 ಕೋಟಿ ರೂ. ತಲುಪಿದೆ. 2019ರ ಅಕ್ಟೋಬರ್ ಅಂತ್ಯಕ್ಕೆ 12,630 ಕೋಟಿ ರೂ. ಸಂಗ್ರಹವಾಗಿದ್ದು, ಅದಕ್ಕೆ ಹೋಲಿಸಿದರೆ 932 ಕೋಟಿ ರೂ. ಕಡಿಮೆ ಇದೆ. ಆರ್ಥಿಕ ವರ್ಷದಲ್ಲಿ ಅಬಕಾರಿ ಸುಂಕ ಆದಾಯ ಮೂಲಕದಿಂದ ಒಟ್ಟು 22,700 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಇದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಮೋಟಾರು ವಾಹನ ಶುಲ್ಕ ಆದಾಯವು ಮಾಸಿಕ ಗುರಿಗಿಂತ ಹೆಚ್ಚು ಸಂಗ್ರಹವಾಗಿರುವುದು ಇಲಾಖೆಯಲ್ಲಿ ಹುರುಪು ಹೆಚ್ಚಿಸಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್‌ನಲ್ಲಿ ಮೋಟಾರು ವಾಹನ ಶುಲ್ಕದಿಂದ 550 ಕೋಟಿ ರೂ. ಆದಾಯ ಸಂಗ್ರಹ ಗುರಿ ಹೊಂದಲಾಗಿತ್ತು. ಆದರೆ 560 ಕೋಟಿ ರೂ. ಆದಾಯ ಸಂಗ್ರಹವಾಗಿದ್ದು, ನಿರೀಕ್ಷೆ ಮೀರಿ ಗುರಿ ಸಾಧನೆಯಾಗಿದೆ. ಆ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ ಮೋಟಾರು ವಾಹನ ಶುಲ್ಕ ಮೂಲದಿಂದ 2,400 ಕೋಟಿ ರೂ. ಸಂಗ್ರಹವಾಗಿದೆ. 2021ರ ಮಾರ್ಚ್ ಅಂತ್ಯದ ಹೊತ್ತಿಗೆ ಒಟ್ಟು 6,616 ಕೋಟಿ ರೂ. ಆದಾಯ ಸಂಗ್ರಹ ಗುರಿ ಇದೆ. ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆ
ಮುದ್ರಾಂಕ ಮತ್ತು ನೋಂದಣಿ ಶುಲ್ಕ ಆದಾಯ ಸಂಗ್ರಹ ಕೂಡ ಅಕ್ಟೋಬರ್‌ನಲ್ಲಿ ಆಶಾದಾಯಕವಾಗಿರುವುದು ಅಂಕಿಸಂಖ್ಯೆಯಿಂದ ಸ್ಪಷ್ಟವಾಗುತ್ತದೆ. ಅಕ್ಟೋಬರ್‌ನಲ್ಲಿ ಈ ಮೂಲದ ಆದಾಯದಿಂದ 933 ಕೋಟಿ ರೂ. ಸಂಗ್ರಹವಾಗಿದೆ. ಹಿಂದಿನ 2019ರ ಅಕ್ಟೊಬರ್‌ನಲ್ಲಿ 902 ಕೋಟಿ ರೂ. ಸಂಗ್ರಹವಾಗಿತ್ತು. ಮುದ್ರಾಂಕ ಮತ್ತು ನೋಂದಣಿ ಶುಲ್ಕ ಆದಾಯ ಹೆಚ್ಚಳವು ರಿಯಲ್ ಎಸ್ಟೇಟ್ ಉದ್ಯಮದ ಚೇತರಿಕೆ, ಹೊಸ ನಿವೇಶನ, ಫ್ಲ್ಯಾಟ್ ಖರೀದಿ, ವರ್ಗಾವಣೆ ಪ್ರಕ್ರಿಯೆ ಕ್ರಮೇಣ ಸಹಜ ಸ್ಥಿತಿಗೆ ಮರಳುವುದರ ಸೂಚನೆ ನೀಡಿದಂತಿದೆ.