Advertisement

ನಿಸರ್ಗಧಾಮದಲ್ಲಿ ಹಬ್ಬದೂಟದ ಸಂಭ್ರಮ

10:01 AM Apr 15, 2018 | Team Udayavani |

ಮಹಾನಗರ: ಪ್ರಾಚೀನ ಕಾಲದ ಗುತ್ತಿನ ಮನೆಯ ಬಿಸು ಹಬ್ಬವನ್ನು ನೆನಪಿಸುವ ಭೋಜನ… ಬಿಸಿಲ ಉರಿ ಇದ್ದರೂ ಬಿಸು ಊಟದ ಸಂಭ್ರಮ. ಬಾಳೆ ಎಲೆಯಲ್ಲಿ ಚಟ್ನಿ, ಕೋಸಂಬರಿ, ಪಲ್ಯ, ಅನ್ನ, ಸಾಂಬಾರು… ಹೀಗೆ 25 ವಿವಿಧ ಬಗೆಯ ಖಾದ್ಯ. ಇದು ಪಿಲಿಕುಳದ ಗುತ್ತುಮನೆಯಲ್ಲಿ ಶನಿವಾರ ಕಂಡು ಬಂದ ಬಿಸು ಪರ್ಬದ ಊಟೋಪಚಾರದ ದೃಶ್ಯ.

Advertisement

ಡಾ| ಶಿವರಾಮ ಕಾರಂತ ನಿಸರ್ಗಧಾಮದ ಗುತ್ತು ಮನೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ ಆಯೋಜಿಸಲಾದ ‘ಪಿಸುಪರ್ಬ’ದಲ್ಲಿ ಹಬ್ಬದ ಸಂಭ್ರಮವಿತ್ತು. ಗುತ್ತು ಮನೆಯ ಹೊರ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಆಗಮಿಸಿದ ಅತಿಥಿಗಳಿಗೆ ಬಗೆ ಬಗೆಯ ಆಹಾರವನ್ನು ಉಣ ಬಡಿಸಲಾಯಿತು. ಪಿಲಿಕುಳ ನಿಸರ್ಗ ಧಾಮಕ್ಕೆ ಆಗಮಿಸುವ ಪ್ರವಾಸಿಗರಿಗೆ ಬಿಸು ಹಬ್ಬದ ವಿಶೇಷ ಊಟ ಸಹಿತ ಶನಿವಾರ ಪ್ರವೇಶ ದರವಾಗಿ 300 ರೂ. ಗಳ ವಿಶೇಷ ಕೂಪನ್‌ ನೀಡಲಾಗಿತ್ತು.

ಬೆಲ್ಲ- ನೀರಿನ ವ್ಯವಸ್ಥೆ
ಗುತ್ತಿನ ಮನೆಯಲ್ಲಿ ಹಣ್ಣು- ತರಕಾರಿಗಳ ಬಿಸು ಕಣಿಯೊಂದಿಗೆ ಬಿಸು ಪರ್ಬ ಆಚರಣೆಗೆ ಚಾಲನೆ ನೀಡಲಾಯಿತು. ಆಗಮಿಸಿದ ಅತಿಥಿಗಳಿಗೆ ಗುತ್ತು ಮನೆಯ ಚಾವಡಿಯಲ್ಲಿ ಬೆಲ್ಲ- ನೀರಿನ ವ್ಯವಸ್ಥೆ ಮಾಡಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಾಸ್ಕರ ರೈ ಕುಕ್ಕುವಳ್ಳಿ ನೇತೃತ್ವದಲ್ಲಿ ‘ತುಳುನಾಡ ಬಲೀಂದ್ರ’ ತಾಳಮದ್ದಳೆ ಹಾಗೂ ಮಂಜುಳಾ ಶೆಟ್ಟಿ ಸಂಯೋಜನೆಯಲ್ಲಿ ಗಾಯನ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್‌ ಭಂಡಾರಿ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ. ವಿ. ರಾವ್‌ ಮೊದಲಾದವರು ಉಪಸ್ಥಿತರಿದ್ದರು.

ವಿಶೇಷ ಅತಿಥಿಯಾಗಿದ್ದ ಜಾನಪದ ವಿದ್ವಾಂಸ ಡಾ| ಚಿನ್ನಪ್ಪ ಗೌಡ ಅವರು ಆಚರಣೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ತುಳುನಾಡಿನಲ್ಲಿ ಹೊಸ ವರ್ಷದ ಮೊದಲ ದಿನವನ್ನಾಗಿ ಬಿಸುವನ್ನು ಆಚರಿಸಲಾಗುತ್ತದೆ. ಅಂದು ಇಲ್ಲಿ ಬೆಳೆಯಲಾಗುವ ಎಲ್ಲ ರೀತಿಯ ತರಕಾರಿ, ಫ‌ಲವಸ್ತುಗಳನ್ನು ಇಟ್ಟು ಪೂಜೆ ಮಾಡಿಕೊಂಡು ಮಧ್ಯಾಹ್ನ ವಿಶೇಷ ಅಡುಗೆಯೂಟ ಮಾಡಲಾಗುತ್ತದೆ ಎಂದರು.

Advertisement

ಕಾಲ ಬದಲಾಗುತ್ತಿದೆ. ಕಡಿದು ಹೋಗುತ್ತಿರುವ ಅಥವಾ ದೂರವಾಗುತ್ತಿರುವ ಸಂಬಂಧಗಳನ್ನು ಜೋಡಿಸುವ ದೃಷ್ಟಿಯಿಂದ ಈ ಬಿಸು ಪರ್ಬ ಆಚರಣೆ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಊಟಕ್ಕೆ ವಿವಿಧ ವ್ಯಂಜನ
ಉಪ್ಪು, ಉಪ್ಪಿನಕಾಯಿ, ಮಾವಿನಕಾಯಿ ಚಟ್ನಿ, ಮುಳ್ಳು ಸೌತೆ ಪಚ್ಚೊಡಿ, ಹೆಸ್ರು ಬೇಳೆ ಕೋಸಂಬರಿ, ಅಲಸಂಡೆ ಪಲ್ಯ, ಗೇರುತೊಂಡೆ ಉಪ್ಪುಕರಿ, ಮೂಡೆ- ತೆಂಗಿನ ಹಾಲು, ಹೆಸರು- ಸೌತೆ ಗಸಿ, ಗುಜ್ಜೆ- ಕಡ್ಲೆ ಪಲ್ಯ, ಹುರುಳಿ ಸಾರು, ಹಪ್ಪಳ, ಮಾವಿನ ಹಣ್ಣು ಸಾಸಿವೆ, ಸೌತೆ ಸಾಂಬಾರು, ಬದನೆ ಗೊಜ್ಜು, ಬೆಂಡೆಕಾಯಿ ಮಜ್ಜಿಗೆ ಹುಳಿ, ಹಲಸಿನ ಹಣ್ಣು ಚಂಡುರ್ಲಿ, ಹೋಳಿಗೆ, ಹೆಸರು ಬೇಳೆ ಪಾಯಸ, ಬಾಳೆಹಣ್ಣು ಪೋಡಿ, ಗೆಣಸು ಪೋಡಿ, ಮಜ್ಜಿಗೆ, ಹಲಸಿನ ಹಣ್ಣಿನ ಅಪ್ಪವನ್ನು ಆಗಮಿಸಿದ ಅತಿಥಿಗಳಿಗೆ ಉಣ ಬಡಿಸಲಾಯಿತು.

ಕೃಷಿ ಪ್ರೇರಿತ ಬದುಕಿನ ಆಚರಣೆ
ಬಿಸುಪರ್ಬವು ತುಳುನಾಡಿನ ರೈತರ ಬದುಕು ಮತ್ತು ನೆಲದ ಸಂಬಂಧವನ್ನು ತಿಳಿಸುತ್ತದೆ. ಕೃಷಿ ಪ್ರೇರಿತ ಬದುಕಿನ ಆಚರಣೆಯೇ ಇದಾಗಿದೆ.
-ಡಾ| ಚಿನ್ನಪ್ಪ ಗೌಡ
  ಜಾನಪದ ವಿದ್ವಾಂಸ 

Advertisement

Udayavani is now on Telegram. Click here to join our channel and stay updated with the latest news.

Next