ತುಮಕೂರು: ಸಿದ್ಧಗಂಗಾ ಮಠದ ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀಶಿವಕುಮಾರ ಮಹಾಸ್ವಾಮಿಗಳ 115ನೇ ಜಯಂತ್ಯುತ್ಸವ ಕಾರ್ಯಕ್ರಮ ಇಂದು ನಡೆಯುತ್ತಿದೆ. ಸಿದ್ದಗಂಗಾ ಮಠದಲ್ಲಿ ಹಬ್ಬದ ಸಂಭ್ರಮವಿದ್ದು, ಬೆಳಗಿನ ಮೂರು ಗಂಟೆಯಿಂದ ಶ್ರೀಗಳ ಗದ್ದುಗೆಯಲ್ಲಿ ವಿಶೇಷ ಪೂಜೆ ಪ್ರಾರ್ಥನೆ ನಡೆಯುತ್ತಿದೆ.
ಉದ್ಘಾಟನಾ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಲಿಂಗೈಕ್ಯ ಮಹಾಸ್ವಾಮೀಜಿಯವರ ಗದ್ದುಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರೊಂದಿಗೆ ಭೇಟಿ ನೀಡಿ ನಂತರ ವೇದಿಕೆಗೆ ಅವರು ಅಗಮಿಸಲಿದ್ದಾರೆ.
ಮೆರವಣಿಗೆ: ಶ್ರೀ ಶಿವಕುಮಾರಸ್ವಾಮೀಜಿಗಳ ಕಂಚಿನ ವಿಗ್ರಹ ಹೊತ್ತ ರುದ್ರಾಕ್ಷಿ ಮಂಟಪದ ವೈಭವ ಮೆರವಣಿಗೆ ಆರಂಭವಾಗಿದೆ. ಡ್ರಮ್ಸ್, ನಂದಿಧ್ವಜ, ಕುಂಭಕಳಸ, ನಾದಸ್ವರಗಳ ಮೂಲಕ ಮೆರವಣಿಗೆ ಆರಂಭವಾಗಿದ್ದು, ಸಿದ್ದಲಿಂಗಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಭಾಗಿಯಾಗಿದ್ದಾರೆ.
ಇದನ್ನೂ ಓದಿ:ಪುತ್ತಿಗೆ ಶ್ರೀ ನಡೆದಾಡುವ ಭಗವದ್ಗೀತೆ: ಪೇಜಾವರ ಶ್ರೀ
ಸಿದ್ದಗಂಗಾ ಮಠದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದ್ದು, ಶ್ರೀ ಶಿವಕುಮಾರ ಶ್ರೀಗಳ 115ನೇ ಜನ್ಮದಿನೋತ್ಸವದ ಪ್ರಯುಕ್ತ 115 ಮಕ್ಕಳಿಗೆ ನಾಮಕರಣ ಶಾಸ್ತ್ರ ನಡೆಯಲಿದೆ.
ನಾಡಿನಾದ್ಯಂತ ಮಠದ ಭಕ್ತರು ಆಭಿಮಾನಿಗಳು ಸಾಗರೋಪಾದಿಯಲ್ಲಿ ಕಾರ್ಯಕ್ರಮಕ್ಕೆ ಆಮಿಸುತ್ತಿದ್ದು, ಅಪೂರ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಮಠದಲ್ಲಿ ನಿರಂತರ ದಾಸೋಹ ಸಾಂಗವಾಗಿ ನಡೆಯುತ್ತಿದೆ.