Advertisement

ದೇವಸ್ಥಾನ, ನಾಗಬನಗಳಲ್ಲಿ ಸಿದ್ಧತೆ ಜೋರು; ವ್ಯಾಪಾರ ಬಿರುಸು

08:58 PM Aug 03, 2019 | mahesh |

ಮಹಾನಗರ: ನಾಗರಪಂಚಮಿ ಹಬ್ಬ ಸೋಮವಾರ ನಡೆಯುವ ಹಿನ್ನೆಲೆ ಯಲ್ಲಿ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಾದಿಗಳಿಗೆ ಸಿದ್ಧತೆ ಆರಂಭವಾಗಿದೆ.

Advertisement

ಹಬ್ಬಕ್ಕೆ ಇನ್ನು ಒಂದು ದಿನವಿರುವ ಹಿನ್ನೆಲೆಯಲ್ಲಿ ದೇವಾಲಯ, ನಾಗಸನ್ನಿಧಿ, ಕುಟುಂಬದ ಮೂಲ ನಾಗಬನಗಳಲ್ಲಿ ನಾಗತಂಬಿಲ, ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕಗಳಿಗಾಗಿ ತಯಾರಿ ನಡೆಯುತ್ತಿದೆ. ನಾಗರ ಪಂಚಮಿಗೆಂದೇ ಪೂಜಾ ಪರಿಕರ, ಹೂ ಹಣ್ಣುಗಳ ವ್ಯಾಪಾರ ವಹಿವಾಟು ಕೂಡ ಬಿರುಸಾಗಿದೆ.

ನಗರದ ಐತಿಹಾಸಿಕ ನಾಗ ದೇವಸ್ಥಾನ ವಾದ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ನಾಗರಪಂಚಮಿಗೆಂದೇ ವಿಶೇಷ ಸಿದ್ಧತೆಗಳು ನಡೆಯುತ್ತಿವೆ. ನಸುಕಿನ ವೇಳೆ 5.30ರಿಂದಲೇ ಇಲ್ಲಿನ ನಾಗಬನ ದಲ್ಲಿರುವ ಅಸಂಖ್ಯ ನಾಗಬಿಂಬ ಗಳಿಗೆ ವಿಶೇಷ ಪೂಜೆ, ಸೀಯಾಳ ಅಭಿಷೇಕ, ಕ್ಷೀರಾಭಿಷೇಕ ಹಾಗೂ ನಿರಂತರವಾಗಿ ನಾಗತಂಬಿಲ ಸೇವೆಗಳು ಜರಗಲಿವೆ. ಮಧ್ಯಾಹ್ನ ಶ್ರೀ ಅನಂತ ಪದ್ಮನಾಭ ದೇವರಿಗೆ ನಾಗರ ಪಂಚಮಿಯ ವಿಶೇಷ ಮಹಾಪೂಜೆ ಹಮ್ಮಿಕೊಳ್ಳಲಾಗಿದೆ. ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಮೂಲಬನದಲ್ಲಿ ನಾಗಾರಾಧನೆ
ವಿವಿಧ ಕುಟುಂಬ ಗಳ ಮೂಲ ಬನಗಳ ಲ್ಲಿಯೂ ನಾಗದೇವರಿಗೆ ತಂಬಿಲ, ಕ್ಷೀರಾಭಿ ಷೇಕ, ಸೀಯಾಳ ಅಭಿಷೇಕ ಮುಂತಾದ ಸೇವೆಗಳು ಸೋಮವಾರ ನಡೆಯಲಿವೆ. ಅದಕ್ಕಾಗಿ ತಯಾರಿಯೂ ಬಿರುಸಾಗಿದೆ.

ಖರೀದಿ ಪ್ರಕ್ರಿಯೆ ಆರಂಭ
ನಾಗರ ಪಂಚಮಿ ಹಿನ್ನೆಯಲ್ಲಿ ಈಗಾಗಲೇ ವ್ಯಾಪಾರಸ್ಥರು ಬಿರುಸಿನ ವ್ಯಾಪಾರಕ್ಕೆ ಸಜ್ಜಾಗಿದ್ದಾರೆ. ನಾಗನಿಗೆ ಪ್ರಿಯವಾದ ಹೂ ಹಣ್ಣು, ವಿವಿಧ ಪೂಜಾ ಪರಿಕರಗಳನ್ನು ಮಾರಾಟಕ್ಕೆ ಇಡಲಾಗಿದ್ದು, ರವಿವಾರದಿಂದಲೇ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.

Advertisement

ಈಗಾಗಲೇ ಉತ್ತರ ಕರ್ನಾಟಕ ಭಾಗಗಳಿಂದಲೂ ವ್ಯಾಪಾರಸ್ಥರು ನಗರಕ್ಕೆ ಆಗಮಿಸಿದ್ದು, ನಗರದ ಬೀದಿ ಬೀದಿಗಳಲ್ಲಿ ಹೂವಿನ ಮಾರಾಟದಲ್ಲಿ ತೊಡಗಿದ್ದಾರೆ. ಕಂಕನಾಡಿ, ಬಿಜೈ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಬಳಿ, ಸ್ಟೇಟ್‌ಬ್ಯಾಂಕ್‌, ಹಂಪನಕಟ್ಟೆ ಮುಂತಾದೆಡೆಗಳಲ್ಲಿ ಹೂವಿನ ವ್ಯಾಪಾರಸ್ಥರು ಸಿದ್ಧತೆಯಲ್ಲಿ ನಿರತರಾಗಿದ್ದಾರೆ.

ವಿವಿಧೆಡೆ ಆಚರಣೆ
ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಶ್ರೀ ಶರವು ಮಹಾಗಣಪತಿ ದೇವಸ್ಥಾನ, ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ, ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ, ಪಾವಂಜೆ ಶ್ರೀ ಜನ ಶಕಿ ಸುಬ್ರಹ್ಮಣ್ಯ ಸ್ವಾಮಿ ದೇಗುಲ, ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಪುನರೂರು ಶ್ರೀ ವಿಶ್ವನಾಥ ದೇವಸ್ಥಾನ, ಪೋರ್ಕಾಡಿ ಶ್ರೀ ಸೋಮನಾಥೇಶ್ವೆ ದೇವಸ್ಥಾನ, ಸುಂಕದಕಟ್ಟೆ ಶ್ರಿ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನ, ಪೆರಾರ ಶ್ರೀ ನಾಗಬ್ರಹ್ಮ ಶಾಸ್ತ್ರ ದೇವರು ಇಷ್ಟದೇವತಾ ಬಲವಾಂಡಿ ವ್ಯಾಘ್ರಚಾಮುಂಡಿ ದೇವ ದೈವಸ್ಥಾನ, ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರ, ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಾಳ ತೊತ್ತಾಡಿ ಶ್ರೀ ನಾಗಬ್ರಹ್ಮ ದೇವಸ್ಥಾನ ಬಾಳ, ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನ, ಪಣಂಬೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಹೊಸಬೆಟ್ಟು ಶ್ರೀ ನಾಗಬನ ಟ್ರಸ್ಟ್‌, ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನ, ಕಾಪಿಕಾಡು ಉಮಾಪುರಿ ಶ್ರೀ ಉಮಾಮಹೇಶ್ವರೀ ದೇವಸ್ಥಾನ, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಕುಂಪಲ ಶ್ರೀ ದುರ್ಗಾಪರಮೇಶ್ವರ ದೇವಸ್ಥಾನ, ವಿಷ್ಣುಮೂರ್ತಿ ದೇವಸ್ಥಾನ ಕೋಟೆಕಾರ್‌, ಕೊಲ್ಯ ಸೌಭಾಗ್ಯ ನಾಗಬ್ರಹ್ಮ ದೇವಸ್ಥಾನ, ಕುತ್ತಾರು ಶ್ರೀ ರಾಜರಾಜೇಶ್ವರಿ ದೇವಸ್ಥಾನ, ತೊಕ್ಕೊಟ್ಟು ಒಳಪೇಟೆ ಗಣಪತಿ ದೇವಸ್ಥಾನ ಸಹಿತ ನಗರದ ವಿವಿಧ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ನಾಗರಪಂಚಮಿ ಆಚರಣೆಗೆ ತಯಾರಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next