ಬೆಂಗಳೂರು: ಊರ ಹಬ್ಬದ ಮುಂದಾಳತ್ವ ವಹಿಸಿಕೊಳ್ಳುವ ವಿಚಾರವಾಗಿ ನಡೆದ ಜಗಳ, ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ತಿಲಕ್ ನಗರದ ಕೆಎಚ್ಬಿ ಕಾಲೋನಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕೆಎಚ್ಬಿ ಕಾಲೋನಿಯಲ್ಲಿ ಪ್ರತಿ ವರ್ಷ ಮಾರಿಯಮ್ಮನ ಊರ ಹಬ್ಬ ನಡೆಸಲಾಗುತ್ತಿದ್ದು, ಹಲವು ದಿನಗಳಿಂದ ಊರ ಹಬ್ಬ ಆರಂಭವಾಗಿದೆ. ವಿನೋದ್‌ಕರ್ ಪ್ರತ್ಯೇಕವಾಗಿ ಹಬ್ಬದ ಪ್ರಯುಕ್ತ ಕರಪತ್ರ ಮುದ್ರಿಸಿ ಹಂಚಿದ್ದ. ಇದು ರಾಜಶೇಖರ್, ಆತನ ಸ್ನೇಹಿತರಾದ ಮಣಿಕಂಠ, ಕಾರ್ತಿಕ್ ಅಲಿಯಾಸ್ ಮಾರ್ಕೋನಿಗೆ ಇಷ್ಟವಾಗಿರಲಿಲ್ಲ.
ಭಾನುವಾರ ರಾತ್ರಿ ಮದ್ಯ ಸೇವಿಸಿದ್ದ ರಾಜಶೇಖರ್, ಮಣಿಕಂಠ, ಕಾರ್ತಿಕ್ ಜತೆ ವಿನೋದ್‌ಕರ್ ಮನೆಯ ಹತ್ತಿರ ಹೋಗಿ, ನಿನ್ನೊಂದಿಗೆ ಮಾತನಾಡುವುದಿದೆ ಎಂದು ಹೇಳಿ, ಆತನನ್ನು ಮನೆಯಿಂದ ಸ್ವಲ್ಪ ದೂರ ಕರೆದೊಯ್ದಿದ್ದಾರೆ. ಈ ವೇಳೆ, ‘ನೀನು ಪ್ರತ್ಯೇಕವಾಗಿ ಹ್ಯಾಂಡ್‌ಬಿಲ್ ಹಂಚಿದ್ದಿಯಾ? ಲೀಡರ್ ಆಗೋಕೆ ಹೋಗ್ತೀಯಾ’ ಎಂದು ರಾಜಶೇಖರ್, ಕೆಣಕಿ ಜಗಳ ಆರಂಭಿಸಿದ್ದಾನೆ. ಮಾತಿಗೆ ಮಾತು ಬೆಳೆದು ಇಬ್ಬರೂ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಬಂದಿದೆ. ಕೂಡಲೇ ವಿನೋದ್‌ಕರ್ ಸಹೋದರರೂ ಅಲ್ಲಿಗೆ ಬಂದಿದ್ದಾರೆ.
ಜಗಳ ವಿಕೋಪಕ್ಕೆ ತಿರುಗಿ ವಿನೋದ್‌ಕರ್ ಚಾಕುವಿನಿಂದ ರಾಜಶೇಖರ್ ಹಾಗೂ ಕಾರ್ತಿಕ್‌ಗೆ ಇರಿದಿದ್ದಾನೆ. ಕೂಡಲೇ ಮಣಿಕಂಠ ಅಲ್ಲಿಂದ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಜಶೇಖರ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮುಂಜಾನೆ ಮೂರು ಗಂಟೆ ಸುಮಾರಿಗೆ ಮೃತಪಟ್ಟಿದ್ದಾನೆ. ಕಾರ್ತಿಕ್‌ಗೆ ಚಿಕಿತ್ಸೆ ಮುಂದುವರಿದಿದ್ದು, ಪ್ರಾಣಾಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
Advertisement
ರಾಜಶೇಖರ್ (22) ಕೊಲೆಯಾದ ಯುವಕ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ತಿಲಕ್‌ನಗರ ಠಾಣೆ ಪೊಲೀಸರು, ತನಿಖೆ ಮುಂದುವರಿಸಿದ್ದು, ಆರೋಪಿಗಳಾದ ವಿನೋ ದ್‌ಕರ್, ವಿಶಾಲ್ ಮತ್ತಿತರರ ಬಂಧನಕ್ಕೆ ಬಲೆ ಬೀಸಿದ್ದಾರೆ.
Related Articles
Advertisement