Advertisement

Agri: ರಸಗೊಬ್ಬರಕ್ಕೆ ಸಬ್ಸಿಡಿ: ರೈತರ ನೆರವಿಗೆ ಧಾವಿಸಿದ ಕೇಂದ್ರ

01:01 AM Oct 26, 2023 | Team Udayavani |

ಪ್ರಸಕ್ತ ವರ್ಷ ದೇಶದ ಬಹುತೇಕ ಎಲ್ಲೆಡೆ ಮುಂಗಾರು ಕೈಕೊಟ್ಟ ಪರಿಣಾಮ ಆಹಾರಧಾನ್ಯಗಳ ಸಹಿತ ಕೃಷಿ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳ ಒಟ್ಟಾರೆ ಉತ್ಪಾದನೆಯಲ್ಲಿ ಕುಸಿತ ತಲೆದೋರುವ ಆತಂಕ ಎದುರಾಗಿದೆ. ಸಹಜವಾಗಿಯೇ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಇದೇ ವೇಳೆ ಕೃಷಿ ಕ್ಷೇತ್ರದಲ್ಲಿನ ಈ ಹಿನ್ನಡೆ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳು ನಿಚ್ಚಳವಾಗಿವೆ. ಈ ಎಲ್ಲ ಆತಂಕ, ಭೀತಿಯ ನಡುವೆಯೇ ಕೇಂದ್ರ ಸರಕಾರ ಮುಂಬ ರುವ ಹಿಂಗಾರು ಅವಧಿಗಾಗಿ ರೈತರಿಗೆ ಪೂರೈಸಲಾಗುವ ರಸಗೊಬ್ಬರಕ್ಕೆ 22,303 ಕೋ. ರೂ. ಸಬ್ಸಿಡಿಯನ್ನು ನೀಡುವ ನಿರ್ಧಾರವನ್ನು ಬುಧವಾರ ಕೈಗೊಂಡಿದೆ.

Advertisement

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆ ಏರುಗತಿಯಲ್ಲಿ ಸಾಗಿದ್ದರೂ ಕೇಂದ್ರ ಸರಕಾರ ದೇಶದ ರೈತರ ಹಿತವನ್ನು ದೃಷ್ಟಿಯಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಂಡಿದೆ. ಸರಕಾರದ ಸಹಾಯಧನದಿಂದಾಗಿ ರೈತರಿಗೆ ಒಂದಿಷ್ಟು ಕಡಿಮೆ ಬೆಲೆಯಲ್ಲಿ ರಸಗೊಬ್ಬರ ಲಭಿಸಲಿದೆ. ಇದರಿಂದಾಗಿ ಮುಂಗಾರು ಹಂಗಾಮಿನಲ್ಲಾದ ಬೆಳೆ ನಷ್ಟ ಮತ್ತು ಆರ್ಥಿಕ ಹೊಡೆತದಿಂದ ನಲುಗಿ ಹೋಗಿರುವ ರೈತರು ಹಿಂಗಾರು ಹಂಗಾಮಿನ ಬೆಳೆಗೆ ಸನ್ನದ್ಧರಾಗಲು ಸರಕಾರ ಉತ್ತೇಜನ ನೀಡಿದಂತಾಗಿದೆ. ದೇಶದ ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಹಿಂಗಾರು ಹಂಗಾಮಿಗೆ ರೈತರು ಸಿದ್ಧತೆ ನಡೆಸಲಾರಂಭಿಸಿದ್ದು ಭೂಮಿಯನ್ನು ಹದಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನು ಹಲವೆಡೆ ಮುಂಗಾರು ಬೆಳಗಳ ಕಟಾವಿನ ಬಳಿಕ ಹಿಂಗಾರು ಬೆಳೆಗಳ ಬಿತ್ತನೆ ಕಾರ್ಯ ಆರಂಭವಾಗಲಿದೆ.

ಸದ್ಯ ದೇಶದಲ್ಲಿ ಆಹಾರಧಾನ್ಯಗಳು, ಎಣ್ಣೆಕಾಳುಗಳ ಸಹಿತ ಬಹುತೇಕ ಕೃಷಿ ಬೆಳೆಗಳಿಗೆ ರಸಗೊಬ್ಬರವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರ ಪ್ರತೀವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ರಸಗೊಬ್ಬರವನ್ನು ಪೂರೈಸುತ್ತ ಬಂದಿದೆ. ಈ ಬಾರಿ ಮುಂಗಾರು ಹಂಗಾಮಿನ ಆರಂಭಕ್ಕೂ ಮುನ್ನ ಅಂದರೆ ಮೇ ತಿಂಗಳಿನಲ್ಲಿ ಕೇಂದ್ರ ಸರಕಾರ ರಸಗೊಬ್ಬರ ಸಬ್ಸಿಡಿಗಾಗಿ 38,000ಕೋ. ರೂ. ಗಳನ್ನು ಮೀಸಲಿರಿಸಿತ್ತು. ಈಗ ಹಿಂಗಾರು ಅವಧಿಗಾಗಿ ಅಂದರೆ ಅಕ್ಟೋಬರ್‌ನಿಂದ ಮುಂದಿನ ವರ್ಷದ ಮಾರ್ಚ್‌ ಅಂತ್ಯದವರೆಗೆ 22,303 ಕೋ. ರೂ.ಗಳನ್ನು ರಸಗೊಬ್ಬರಕ್ಕೆ ಸಹಾಯಧನವಾಗಿ ನೀಡಲು ತೀರ್ಮಾನಿಸಿದೆ.

ಈ ಬಾರಿ ಮುಂಗಾರು ಕೈಕೊಟ್ಟಿದ್ದು, ಹಿಂಗಾರುವಿನ ಅನಿಶ್ಚಿತತೆ ಮುಂದುವರಿದಿದೆ. ಈ ಎಲ್ಲ ಗೊಂದಲಗಳ ಹೊರತಾಗಿಯೂ ರೈತರು ಹಿಂಗಾರು ಹಂಗಾಮಿಗಾಗಿ ಸನ್ನದ್ಧರಾಗುತ್ತಿದ್ದಾರೆ. ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ಮತ್ತು ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ಲಭ್ಯವಾಗುವಂತೆ ರಾಜ್ಯ ಸರಕಾರ ನೋಡಿಕೊಳ್ಳಬೇಕಿದೆ. ಅಷ್ಟು ಮಾತ್ರವಲ್ಲದೆ ಪ್ರತೀ ವರ್ಷದಂತೆ ಸಬ್ಸಿಡಿ ಬೆಲೆಯ ರಸಗೊಬ್ಬರ ಕಾಳಸಂತೆಯಲ್ಲಿ ನಿಗದಿಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ವಾಗದಂತೆ ಕಟ್ಟೆಚ್ಚರ ವಹಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next