Advertisement

ಕಾಳಸಂತೆಯಲ್ಲಿ ಗೊಬ್ಬರ ಮಾರಾಟ: ಕ್ರಮಕ್ಕೆ ಮನವಿ

06:40 PM Oct 14, 2022 | Team Udayavani |

ಹುಣಸೂರು: ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿದ್ದನ್ನು ಪ್ರಶ್ನಿಸಲು ಹೋದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಪ್ರಗತಿಪರ ಸಂಘಟನೆ ಮುಖಂಡರು ಅಂಗಡಿ ಮಾಲಿಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟಿಸಿದರು.

Advertisement

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ತಾಲೂಕಿನ ಹೊಸೂರು ಗೇಟ್‌ನ ಮೇಘ ಟ್ರೇಡಸ್‌ ìನಲ್ಲಿ ಯೂರಿಯಾವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂಬ ದೂರಿನ ಮೇರೆಗೆ ಅಂಗಡಿಗೆ ತೆರಳಿ ಪ್ರಶ್ನಿಸುತ್ತಿದ್ದಂತೆ ಮಾಲಿಕ ರಾಮಕೃಷ್ಣ(ಹೊಸೂರು ಅಣ್ಣಯ್ಯ), ಪುತ್ರ ಧನುಷ್‌, ಕಾರ್ಮಿಕ ನಾಗನಹಳ್ಳಿಯ ಗಿರೀಶ್‌ ಒಮ್ಮೆಲೆ ಪ್ರಶ್ನಿಸಲು ನೀನ್ಯಾರೆಂದು ಹಲ್ಲೆ ನಡೆಸಿ, ಮೊಬೈಲ್‌ ಕಸಿದುಕೊಂಡು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಕೇರಳಕ್ಕೆ ಅಕ್ರಮ ಸಾಗಣೆ: ಯಾವಾಗಲೂ ರಸಗೊಬ್ಬರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಕೇರಳಕ್ಕೆ ಅಕ್ರಮವಾಗಿ ಸಾಗಿಸುವ ಬಗ್ಗೆ ಸಾಕಷ್ಟು ದೂರುಗಳಿದ್ದು, ಇವರ ವಿರುದ್ಧ ಕ್ರಮವಾಗಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ದಸಂಸದ ನಿಂಗರಾಜ ಮಲ್ಲಾಡಿ, ರತ್ನಪುರಿ ಪುಟ್ಟಸ್ವಾಮಿ, ರಾಮಕೃಷ್ಣ, ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ, ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಮುಖಂಡ ವಿಷಕಂಠಪ್ಪ, ಮತ್ತಿತರರು ಮಾತನಾಡಿ, ರೈತ ಸಂಘದ ಜಿಲ್ಲಾಧ್ಯಕ್ಷರ ಮೇಲೆ ಹಲ್ಲೆ ನಡೆಸಿದವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಎಡಿಎ ವೆಂಕಟೇಶ್‌, ಈಗಾಗಲೇ ಮೇಘ ಟ್ರೇಡರ್ಸ್‌ ಸೇರಿ ತಾಲೂಕಿನ ಎಲ್ಲಾ ರಸಗೊಬ್ಬರ ಮಾರಾಟಗಾರರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ಸೂಚಿಸಿ, ದರಪಟ್ಟಿ ಹಾಗೂ ದಾಸ್ತಾನು ವಿವರ ಪ್ರದರ್ಶಿಸಬೇಕೆಂದು ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.ಧರಣಿಯಲ್ಲಿ ತಂಬಾಕು ಬೆಳೆಗಾರರ ಸಂಘದ ಅಧ್ಯಕ್ಷ ಮೋದೂರು ಶಿವಣ್ಣ, ಚಂದ್ರೇಗೌಡ, ದಲಿತ ಮುಖಂಡ ಶಿವಣ್ಣ, ಜೆ.ಮಹದೇವ್‌ 200ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

ಎಸಿ ಸೂಚನೆ: ರಸಗೊಬ್ಬರ ಅಕ್ರಮ ದಾಸ್ತಾನು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲು ತಹಶೀಲ್ದಾರ್‌ಗೆ ಸೂಚಿಸಲಾಗುವುದು. ಎಲ್ಲಾ ಅಂಗಡಿಗಳ ಮುಂದೆ ದರಪಟ್ಟಿ, ದಾಸ್ತಾನು ವಿವರ ಹಾಕಬೇಕು. ಕಡ್ಡಾಯವಾಗಿ ಬಿಲ್‌ ನೀಡಬೇಕು. ಬೋರ್ಡ್‌ ಹಾಕಿರುವ ಬಗ್ಗೆ ´ೋಟೋ ತೆಗೆದು ಕಳುಹಿಸಬೇಕೆಂದು ಕೃಷಿ ಅಧಿ ಕಾರಿ ವೆಂಕಟೇಶ್‌ಗೆ ಸೂಚಿಸಿದರು. ಪ್ರಕರಣ ಪರಿಶೀಲಿಸಲು ಡಿವೈಎಸ್‌ಪಿಗೆ ಸೂಚಿಸಲಾಗುವುದು ಎಂದು ಎಸಿ ವರ್ಣಿತ್‌ ನೇಗಿ ತಿಳಿಸಿದರು.

Advertisement

ಪ್ರತಿ ದೂರು ದಾಖಲು: ಈ ನಡುವೆ ಮೇಘ ಟ್ರೇಡರ್ಸ್‌ನ ಮಾಲಿಕ ರಾಮಕೃಷ್ಣ ಸಹ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್‌ ಮತ್ತವರ ತಂಡ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಲ್ಲದೆ, ಪ್ರತಿ ತಿಂಗಳು ಕಮಿಷನ್‌ ಕೊಡದಿದ್ದಲ್ಲಿ ಗೊಬ್ಬರ ಮಾರಾಟ ಮಾಡಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆಂದು ಗ್ರಾಮಾಂತರ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. ಎರಡೂ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next