Advertisement

ಕೋಟಿ ಗಿಡ ನೆಟ್ಟರೂ ಕಾಡು ಕ್ಷೀಣ

12:42 PM Jun 06, 2017 | |

ಬೆಂಗಳೂರು: ಕಳೆದ ಎರಡು ವರ್ಷದಲ್ಲಿ ಸುಮಾರು 14 ಕೋಟಿ ಸಸಿಗಳನ್ನು ನೆಟ್ಟಿದ್ದೇವೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಆದರೆ ಅರಣ್ಯ ನಾಶಗೊಂಡು ಮರಗಳ ಸಂಖ್ಯೆ ಮಾತ್ರ ಕ್ಷೀಣಿಸುತ್ತಲೇ ಇದೆ. ನೆಟ್ಟ ಸಸಿಗಳು ಏನಾಗುತ್ತಿವೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Advertisement

ಜಿಕೆವಿಕೆ ಆವರಣದ ಬಾಬು ರಾಜೇಂದ್ರ ಪ್ರಸಾದ್‌ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತ “ಸಸಿ ನೆಡುವ ಯೋಜನೆಯ ಸದುಪಯೋಗವಾಗುತ್ತಿಲ್ಲ,’ ಎಂದು ಸೂಚ್ಯವಾಗಿ ಹೇಳಿದರು.

“ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳ ಕೆರೆಗಳು ಒತ್ತುವರಿಯಾಗಿವೆ. ಕೆರೆಗೆ ನೀರು ಹರಿದು ಬರುವ ಮಾರ್ಗಗಳನ್ನೇ ಮುಚ್ಚಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದರಿಂದ ನೀರಿನ ಕೊರತೆಯ ಜತೆಗೆ ಆಗಾಗ ಸ್ವಲ್ಪ ಮಳೆಗೇ ಪ್ರವಾಹ ಪರಿಸ್ಥಿತಿಯುಂಟಾಗಿ ಸಮಸ್ಯೆ ತಲೆದೋರುತ್ತಿದೆ.

ನಗರೀಕರಣದ ಪ್ರಭಾವದಿಂದಾಗಿ ಜನದಟ್ಟಣೆ ಮತ್ತು ವಾಹನ ದಟ್ಟಣೆ ಹೆಚ್ಚುತ್ತಿದ್ದು, ತ್ಯಾಜ್ಯ ನೀರನ್ನು ಕೆರೆಗಳಿಗೆ ಬಿಡುತ್ತಿರುವುದರಿಂದ ವರ್ತೂರು ಹಾಗೂ ಬೆಳ್ಳಂದೂರು ಕೆರೆಯ ನೀರು ಕಲುಷಿತಗೊಂಡು ನೊರೆ ಹಾಗೂ ಬೆಂಕಿ ಕಾಣಿಸಿಕೊಂಡು ಜನಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ,’ ಎಂದು ಹೇಳಿದರು. 

“ಪರಿಸರ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ನಾಗರಿಕರು ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಕಾನೂನುಗಳನ್ನು ಅನುಷ್ಠಾನಗೊಳಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದ ಅವರು, ಪರಿಸರ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಶಾಲೆಗಳಲ್ಲಿ ಹಸಿರು ವಾತಾವರಣ ನಿರ್ಮಿಸಬೇಕು,’ ಎಂದು ಸಿಎಂ ಸಲಹೆ ನೀಡಿದರು. 

Advertisement

ಅರಣ್ಯ ಸಚಿವ ರಮಾನಾಥ ರೈ ಮಾತನಾಡಿ, “ಅರಣ್ಯ ಸಂರಕ್ಷಣೆಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನರಲ್ಲಿ ಹಸಿರು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಇಲಾಖೆ ಜಾಗೃತಿ ಕಾರ್ಯ ಆಯೋಜಿಸುತ್ತಿದೆ. ಸಾರ್ವಜನಿಕರು, ಅರಣ್ಯ ರಕ್ಷಿಸಲು ಸಹಕಾರ ನೀಡಬೇಕು. ಸಸಿಗಳನ್ನು ಪಡೆದು ಖಾಲಿ ಜಾಗಗಳು, ಮನೆ ಮುಂದೆ ಬೆಳೆಸುವ ಮೂಲಕ ಆರೋಗ್ಯಪೂರ್ಣ ಪರಿಸರಕ್ಕೆ ಕೈಜೋಡಿಸಬೇಕು. ಈ ಮೂಲಕ ಪರಿಸರ ಮಾಲಿನ್ಯ ನಿರ್ಮೂಲನೆ ಮಾಡಬೇಕು,’ ಎಂದರು. 

ಸಮಾರಂಭದಲ್ಲಿ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಚ್‌.ಶಿವಣ್ಣ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಸಿ.ಮುನಿರಾಜು ಮತ್ತಿತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ರಾಜೇಂದ್ರ ಪ್ರಸಾದ್‌ ಸಭಾಂಗಣದ ಆವರಣದಲ್ಲಿ ಪರಿಸರ ಸಂರಕ್ಷಣೆ ಕುರಿತು ಪ್ರಾತ್ಯಕ್ಷಿಕೆ ನಡೆಸುವ ಮೂಲಕ ಗಮನ ಸೆಳೆದವು. 

ಪ್ರಶಸ್ತಿ ಪ್ರದಾನ 
ದಕ್ಷಿಣ ವಲಯ: ಬೆಂಗಳೂರಿನ ಬಿಎಂಎಸ್‌ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಸಿ.ಟಿ.ಪುಟ್ಟಸ್ವಾಮಿ ಮತ್ತು ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಮಪಂಚಾಯತ್‌. 
ಮಲೆನಾಡು ಮತ್ತು ಕರಾವಳಿ ವಲಯ: ಉತ್ತರ ಕನ್ನಡದ ಎಂ.ಬಿನಾಯ್ಡು ಕಡಕೇರಿ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಫೌಂಡೇಶನ್‌.

ಉತ್ತರ ವಲಯ: ರಾಯಚೂರಿನ ಪ್ರೊ.ಸಿ.ಡಿ.ಪಾಟೀಲ್‌ ಮತ್ತು  ಕಲುºರ್ಗಿ ಮಹಾನಗರ ಪಾಲಿಕೆಗೆ 2016-17ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ರಾಜ್ಯದ ನಾಲ್ಕು ಶಾಲೆಗಳಿಗೆ ಪ್ರಶಸ್ತಿ: ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ರಾಜ್ಯದ ನಾಲ್ಕು ವಿಭಾಗದ ಒಂದೊಂದು ಶಾಲೆಗೆ ರಾಜ್ಯ ವಿಜ್ಞಾನ ಪರಿಷತ್‌ ವತಿಯಿಂದ ಪ್ರಶಸ್ತಿ ನೀಡಲಾಯಿತು. ಬೆಂಗಳೂರು ವಿಭಾಗದಿಂದ ಕೋಲಾರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೈಸೂರು ವಿಭಾಗದಿಂದ ಪುತ್ತೂರಿನ ಸುಧನ ವಸತಿ ಶಾಲೆ, ಗುಲ್ಬರ್ಗಾ ವಿಭಾಗದಿಂದ ಮಾರುಗದ್ದೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪ್ರಶಸ್ತಿ ನೀಡಲಾಗಿದ್ದು, ಆಯಾ ಶಾಲೆಗಳ ಮುಖ್ಯೋಪಾಧ್ಯಾಯರು ಪ್ರಶಸ್ತಿ ಸ್ವೀಕರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next