ನವದೆಹಲಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಡಿಎಪಿ, ಫೋಸಾ#ಟಿಕ್ ಮತ್ತು ಪೊಟಾಸಿಕ್ ರಸಗೊಬ್ಬರಗಳಿಗೆ 60,939 ಕೋಟಿ ರೂ. ಮೌಲ್ಯದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನವದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ವಾರ್ತಾ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಈ ಸೌಲಭ್ಯ ಸಿಗಲಿದೆ. ಪ್ರತಿ ಚೀಲ ಡಿಎಪಿ ರಸಗೊಬ್ಬರಕ್ಕೆ ಸದ್ಯ 1,650 ರೂ. ಸಬ್ಸಿಡಿ ನೀಡುತ್ತಿದ್ದು, ಅದನ್ನು 2,501 ರೂ.ಗೆ ಏರಿಕೆ ಮಾಡಲಾಗಿದೆ. ಅಂದರೆ ಕಳೆದ ವರ್ಷಕ್ಕಿಂತ ಶೇ.50ರಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
2020-21ನೇ ಸಾಲಿನಿಂದ ಇದುವರೆಗೆ ಐದು ಬಾರಿ ಡಿಎಪಿ ಸಬ್ಸಿಡಿ ಮೊತ್ತವನ್ನು ಏರಿಕೆ ಮಾಡಲಾಗಿದೆ ಎಂದು ಸಚಿವ ಠಾಕೂರ್ ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರ ದರ ಹೆಚ್ಚಾಗುತ್ತಿದ್ದರೂ, ಕೇಂದ್ರ ಸರ್ಕಾರ ದೇಶದಲ್ಲಿ ಅವುಗಳ ದರ ನಿಯಂತ್ರಣದಲ್ಲಿ ಇರುವಂತೆ ಮಾಡಿದೆ ಎಂದರು.
ಕೇಂದ್ರ ಸರ್ಕಾರ ಪ್ರಕಟಿಸಿದ ಸಬ್ಸಿಡಿ ಮೊತ್ತದಲ್ಲಿ ದೇಶೀಯವಾಗಿ ರಸಗೊಬ್ಬರ ತಯಾರಕರಿಗೆ ತಮ್ಮ ಉತ್ಪನ್ನಗಳನ್ನು ಸಾಗಣೆಯ ವೆಚ್ಚ ನೀಡಿಕೆಯ ಮೊತ್ತ, ಅವರಿಗೆ ಬೇಕಾಗಿರುವ ಡಿ- ಅಮೋನಿಯಂ ಫಾಸ್ಫೇಟ್ (ಡಿಎಪಿ) ಅನ್ನು ಆಮದು ಮಾಡಿಕೊಳ್ಳುವ ವಿಚಾರವೂ ಸೇರ್ಪಡೆಯಾಗಿದೆ ಎಂದರು.