Advertisement
ಹೊಂದಾಣಿಕೆಗೂ ಹೆಣ್ಣಿಗೂ ಏನೋ ಒಂದು ಅವಿನಾಭಾವ ಸಂಬಂಧ. ಜೀವನದ ಪ್ರತಿಯೊಂದು ಘಟ್ಟದಲ್ಲೂ ಹೊಂದಿಕೊಳ್ಳಲೇ ಬೇಕಾದ ಅನಿವಾರ್ಯತೆ ಆಕೆಗಿರುವುದರಿಂದಲೋ ಏನೋ, ಆಕೆ ಎಲ್ಲಿಯೂ ಯಾರೊಂದಿಗೂ ಸಹಜವೆಂಬಂತೆ ಹೊಂದಿಕೊಳ್ಳುತ್ತಾಳೆ. ಇದಕ್ಕೆ ಅಪವಾದವೂ ಇಲ್ಲದಿಲ್ಲ.
Related Articles
Advertisement
“ಎರಡು ಜಡೆ ಸೇರಿದರೆ ಜಗಳ’ ಎನ್ನುತ್ತಾರೆ. ಆದರೆ, ನನಗೇಕೋ ಇದು ಸತ್ಯಕ್ಕೆ ದೂರವಾದ ಮಾತು ಎಂದೆನಿಸುತ್ತದೆ. ಶಾಲೆಯಲ್ಲಾಗಲಿ ಕಾಲೇಜಿನಲ್ಲಾಗಲಿ ಗೆಳತಿಯರಿಬ್ಬರು ಆತ್ಮೀಯರಾದಷ್ಟು ಗೆಳೆಯರಿಬ್ಬರು ಆಗಿದ್ದಿಲ್ಲ. ನೀವು ನೋಡಿರಬಹುದು, ಯಾವುದೇ ಮನೆಯಲ್ಲಿ ಅತ್ತಿಗೆ-ನಾದಿನಿಯರಿಬ್ಬರು ಅಥವಾ ವಾರಗಿತ್ತಿಯರಿಬ್ಬರು ಅನ್ಯೋನ್ಯರಾಗಿರುವಷ್ಟು, ಸಲಿಗೆಯಿಂದ ಒಟ್ಟಿಗೆ ಕೂತು ಕಷ್ಟಸುಖ ಮಾತಾಡುವಷ್ಟು ಸಲೀಸಾಗಿ ಷಡªಕರಿಬ್ಬರು ಅಥವಾ ಬಾವಬಾಮೈದರು ಇರುವುದನ್ನು ನೋಡಲಿಲ್ಲ. ಅವರ ಮಾತುಕತೆ ಏನಿದ್ದರೂ ಮಳೆಬೆಳೆ, ರಾಜಕೀಯ, ಕ್ರಿಕೆಟ್ ಇದರ ಸುತ್ತ ಸುತ್ತುತ್ತಿರುತ್ತದೆ. ಅಕ್ಕತಂಗಿಯರ ನಡುವೆ ಅಭಿಪ್ರಾಯ ಭೇದವಿದ್ದರೂ ಹೊಂದಿಕೊಂಡು ಇರುತ್ತಾರೆ, ಅದೇ ಅಣ್ಣ-ತಮ್ಮಂದಿರ ನಡುವೆ ಭಿನ್ನಾಭಿಪ್ರಾಯ ಬಂದರೆ ಅದು ಕೋರ್ಟ್ ಮೆಟ್ಟಿಲೇರುತ್ತದೆ. ಮದುವೆಗೆ ಮುಂಚೆ ಯಾವ ವಿಷಯದಲ್ಲಾದರೂ ತನ್ನದೇ ಸರಿ ಎಂದು ನಿರೂಪಿಸಲು ಸಾಕ್ಷಿ ಪುರಾವೆಗಳನ್ನು ಒಟ್ಟು ಹಾಕುತ್ತಿದ್ದ ಹುಡುಗಿ ಈಗ ಮದುವೆಯ ನಂತರ ತನ್ನದು ತಪ್ಪಿಲ್ಲದಿದ್ದರೂ ವಾದ-ಪ್ರತಿವಾದಗಳಿಗಿಂತ ಮನಃಶಾಂತಿ ಮುಖ್ಯ ಎಂದು ತಿಳಿದು ಹೊಂದಿಕೊಂಡು ಹೋಗುವುದನ್ನು ಕಲಿತಿದ್ದಾಳೆ. ಮದುವೆಯಾದೊಡನೆ ಅತ್ತೆಯೊಂದಿಗೆ ಹೊಂದಿಕೊಂಡ ಹೆಣ್ಣು ಈಗ ಇಳಿವಯಸ್ಸಿನಲ್ಲಿ ಸೊಸೆಯೊಂದಿಗೆ ಅನುಸರಿಸಿಕೊಂಡು ಹೋಗಬೇಕಾಗಿದೆ. ಈ ಮೇಲೆ ಹೇಳಿದ ಹೊಂದಾಣಿಕೆಯ ವಿಷಯವೆಲ್ಲ 70-80ರ ದಶಕದಲ್ಲಿ ಹುಟ್ಟಿದ ಹೆಣ್ಣುಮಕ್ಕಳಿಗೆ ಅನ್ವಯವಾಗುವಂಥವು. ಅದಕ್ಕೂ ಹಿಂದಿನ ಹೆಣ್ಣುಮಕ್ಕಳು ಹೊಂದಿಕೊಂಡು ಹೋಗಿದ್ದು, ಅಬಬ್ಟಾ! ಯೋಚಿಸಲೂ ಸಾಧ್ಯವಿಲ್ಲ. ಆದರೆ ಈಗಿನ ಹೆಣ್ಣುಮಕ್ಕಳಿಗೆ ಹೊಂದಾಣಿಕೆಯ ಬಿಸಿ ಅಷ್ಟು ತಾಗುತ್ತಿಲ್ಲ ಎಂದೇ ಹೇಳಬಹುದು. ಕೂಡುಕುಟುಂಬ ಮರೆಯಾಗುತ್ತಿರುವ ಈಗಿನ ಕಾಲದಲ್ಲಿ ಗಂಡ ಹೆಂಡತಿ ಮಗು ಇಂತಹ ನ್ಯೂಕ್ಲಿಯರ್ ಫ್ಯಾಮಿಲಿಯಲ್ಲಿ ಹೇಗಿದ್ದರೂ ಅವರದ್ದೇ ಸಾಮ್ರಾಜ್ಯ. ಹೇಳುವವರಿಲ್ಲ, ಕೇಳುವವರಿಲ್ಲ. “ನಿನಗೆ ಬೇಕಾದ ಹಾಗೆ ಇರಲು ಇದು ನಿನ್ನ ಅಮ್ಮನ ಮನೆಯಲ್ಲ’ ಎನ್ನುವ ಅತ್ತೆಗೆ “ಇದು ನಿಮ್ಮ ಅಮ್ಮನ ಮನೆಯೂ ಅಲ್ಲ’ ಎಂದು ತಣ್ಣಗೆ ಹೇಳಿ ಚಿಕ್ಕಪುಟ್ಟ ವಿಷಯಗಳನ್ನು ತಲೆಗೆ ಹಚ್ಚಿಕೊಳ್ಳದೇ ಇರಲು ಕಲಿತಿದ್ದಾರೆ ಈಗಿನ ಹುಡುಗಿಯರು. ಗಂಡು ಮಕ್ಕಳೂ ಇತ್ತೀಚೆಗೆ ಅನುಸರಿಸಿಕೊಂಡು ಹೋಗಲು ಕಲಿತಿ¨ªಾರೆ. ಇದೊಂದು ಒಳ್ಳೆಯ ಬೆಳವಣಿಗೆಯೇ. ಏನಿದ್ದರೂ ಈ ನಾಲ್ಕು ದಿನದ ಸಂಸಾರದಲ್ಲಿ ಹೆಣ್ಣಾಗಲೀ ಗಂಡಾಗಲೀ ಹೊಂದಿಕೊಂಡು ಹೋಗುವುದರಿಂದ ಸಣ್ಣವರಾಗುವುದಿಲ್ಲ ಬದಲಿಗೆ “ತಾಳಿದವನು ಬಾಳಿಯಾನು’ ಎಂಬಂತೆ ಗೆದ್ದೇ ಗೆಲ್ಲುತ್ತಾರೆ.
ಶಾಂತಲಾ ಎನ್. ಹೆಗ್ಡೆ