Advertisement

Bangalore: ಬುಕ್ಕಿಂಗ್‌ ರದ್ದು ಮಾಡಿದ್ದಕ್ಕೆ ಮಹಿಳಾ ಟೆಕಿಗೆ ಹಲ್ಲೆ

11:34 AM Jan 22, 2024 | Team Udayavani |

ಬೆಂಗಳೂರು: ಬುಕ್ಕಿಂಗ್‌ ರದ್ದು ಮಾಡಿದಕ್ಕೆ ಕೋಪಗೊಂಡು ಮಹಿಳಾ ಟೆಕಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದ ರ್ಯಾಪಿಡೋ ಆಟೋ ಚಾಲಕನನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಬೆಳ್ಳಂದೂರಿನ ಗಂಗಾವರಪ್ರಸಾದ್‌(30) ಬಂಧಿತ.

ಶನಿವಾರ ಬೆಳಗ್ಗೆ 8.30ಕ್ಕೆ ಬೆಳ್ಳಂದೂರಿನ ಗ್ರೀನ್‌ಲೇನ್‌ ಲೇಔಟ್‌ನಲ್ಲಿ ಘಟನೆ ನಡೆದಿತ್ತು. ಈ ಸಂಬಂಧ ಹಲ್ಲೆಗೊಳಗಾದ ಮಹಿಳಾ ಟೆಕಿ ಸ್ನೇಹಿತ ರಾಜೇಶ್‌ ಪ್ರಧಾನ ಎಂಬವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ದೂರು ನೀಡಿ ದ್ದರು. ಈ ಹಿನ್ನೆಲೆಯಲ್ಲಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಬೆಳ್ಳಂದೂರು ಪೊಲೀಸರು ಆಟೋ ಚಾಲಕನನ್ನು ಬಂಧಿಸಿದ್ದಾರೆ.

ಏನಿದು ಘಟನೆ?: ಒಡಿಶಾ ಮೂಲದ ಯುವತಿ ನಗರದಲ್ಲಿ ಸಾಫ್ಟ್ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಬೆಳ್ಳಂದೂರಿನ ಗ್ರೇನ್‌ಲೇನ್‌ ಲೇಔಟ್‌ನಲ್ಲಿರುವ ಪಿಜಿಯಲ್ಲಿ ವಾಸವಾಗಿದ್ದಾರೆ. ಶನಿವಾರ ಬೆಳಗ್ಗೆ ಪಿಜಿಯಿಂದ ವೈಟ್‌ ಫೀಲ್ಡ್‌ನ ತುರುಬನಹಳ್ಳಿಗೆ ತೆರಳಲು ರ್ಯಾಪಿಡೋ ಆಟೋ ಬುಕ್‌ ಮಾಡಿದ್ದಾರೆ. ಕೆಲ ಕ್ಷಣಗಳಲ್ಲೇ ಚಾಲಕ ಗಂಗಾವರಪ್ರಸಾದ್‌ ಸ್ಥಳಕ್ಕೆ ಬಂದಿದ್ದಾರೆ.

ಆದರೆ, ಮಹಿಳಾ ಟೆಕಿ ತಡವಾಗಿ ಬಂದಿದ್ದಿರಾ ಎಂದು ಬುಕ್ಕಿಂಗ್‌ ರದ್ದುಗೊಳಿಸಿದ್ದಾರೆ. ಅದರಿಂದ ಕೋಪ ಗೊಂಡ ಆರೋಪಿ, ಮಹಿಳಾ ಟೆಕಿಗೆ ನಿಂದಿಸಿ, ಕೈಗಳಿಂದ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಮಹಿಳಾ ಟೆಕ್ಕಿ ತುರ್ತಾಗಿ ರೈಲಿನಲ್ಲಿ ಊರಿಗೆ ತೆರಳಬೇಕಿದ್ದ ಹಿನ್ನೆಲೆಯಲ್ಲಿ ಘಟನೆ ಸಂಬಂಧ ದೂರು ನೀಡಿಲ್ಲ. ಆದರೆ, ಆಕೆಯ ಸ್ನೇಹಿತ ರಾಜೇಶ್‌ ಪ್ರಧಾನ್‌ ಎಂಬವರು ಘಟನೆ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ನಗರ ಪೊಲೀಸರಿಗೆ ದೂರು ನೀಡಿದ್ದರು. ಘಟನೆಯ ಸಿಸಿ ಕ್ಯಾಮೆರಾ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಬೆಳ್ಳಂದೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆಟೋ ಚಾಲಕನನ್ನು ಬಂಧಿಸಿದ್ದಾರೆ.

Advertisement

ಆಕೆಯೇ ಹಲ್ಲೆ ನಡೆಸಿದಳು: ಆದರೆ, ಆಟೋ ಚಾಲಕ ಪೊಲೀಸರ ವಿಚಾರಣೆಯಲ್ಲಿ ಆಕೆ ವಿರುದ್ಧವೇ ಹೇಳಿಕೆ ನೀಡಿದ್ದಾನೆ. “ಆಟೋ ಬಂದಾಗ ಮಹಿಳಾ ಟೆಕಿ ಲಗೇಜ್‌ ಎತ್ತಿ ಆಟೋ ಒಳಗೆ ಇಡುವಂತೆ ಹೇಳಿದರು. ನನಗೆ ಆರೋಗ್ಯ ಸರಿಯಲ್ಲ. ನೀವೇ ಎತ್ತಿ ಇರಿಸಿಕೊಳ್ಳಿ ಎಂದೆ. ಅಷ್ಟಕ್ಕೆ ಆಕೆ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದರು. ನನ್ನ ಅಂಗಿ ಹಿಡಿದು ಎಳೆದಾಡಿದರು. ಈ ವೇಳೆ ನಾನು ಆಕೆಯನ್ನು ತಳ್ಳಿದೆ’ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next