ಉತ್ತರ ಕರ್ನಾಟಕದಲ್ಲಿ ರಂಗಭೂಮಿಯ ಸೆಲೆ ಇದೆ. ಹಾಗಂತ ಈ ಕಲೆ ಎಲ್ಲರಿಗೂ ಒಲೆಯುವುದಿಲ್ಲ. ಅದರಲ್ಲೂ ಪುರುಷನೊಬ್ಬ ಸ್ತ್ರೀ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಅಭಿನಯಿಸುವುದು ಕಷ್ಟದ ಕೆಲಸ. ನೀವು ಬನಹಟ್ಟಿ ತಾಲ್ಲೂಕಿನ ಹೊಸೂರ ಗ್ರಾಮದ ಮಹಾದೇವ ಗುಟ್ಲಿ ಅವರ ಸ್ತ್ರೀ ಪಾತ್ರಗಳನ್ನು ನೋಡಿದರೆ ಇವರು ಗಂಡು ಎಂದು ಗೊತ್ತಾಗುವುದೇ ಇಲ್ಲ. ಅಂತಹ ಅಪರೂಪದ ಕಲಾವಿದರು ಇವರು.
ಮಹಾದೇವ 17 ವರ್ಷದ ತಮ್ಮ ವೃತ್ತಿ ಸೇವೆಯಲ್ಲಿ ವೈವಿಧ್ಯಮಯವಾದ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕಂದಗಲ ಹನುಮಂತರಾಯರ ರಕ್ತರಾತ್ರಿ ನಾಟಕದ “ದ್ರೌಪದಿ’, ಪುಟ್ಟರಾಜ ಗವಾಯಿಗಳ ಅಕ್ಕಮಹಾದೇವಿ ನಾಟಕದ “ಅಕ್ಕಮಹಾದೇವಿ’, ನಲವಡಿ ಶ್ರೀಕಂಠ ಶಾಸ್ತ್ರಿಗಳ ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ನಾಟಕದ “ಮಲ್ಲಮ್ಮ”, ಮಲ ಮಗಳು ನಾಟಕದ “ಕಲ್ಯಾಣಿ’ ಬಂಜಿ ತೊಟ್ಟಿಲುದ “ಸಾವಿತ್ರಿ’, ವರ ನೋಡಿ ಹೆಣ್ಣು ಕೊಡು ನಾಟಕದಲ್ಲಿಯ “ಶೆ„ಲಾ’ ಕೊರವಂಜಿ ನಾಟಕದಲ್ಲಿಯ “ಕೊರವಂಜಿ’, ನಾಗಲಿಂಗ ಲೀಲೆ ನಾಟಕದಲ್ಲಿಯ “ಸಮಗಾರ ಭೀಮವ್ವಳ’ ಪಾತ್ರಗಳು ಮಹಾದೇವರಿಗೆ ಬಹಳಷ್ಟು ಹೆಸರು ತಂದುಕೊಟ್ಟವು. ಕೊಪ್ಪಳ ಜಿಲ್ಲೆಯ ಮಂಗಳೂರಿನಲ್ಲಿ ಅಕ್ಕಮಹಾದೇವಿ ನಾಟಕ ಸತತವಾಗಿ ಐದು ತಿಂಗಳ ಕಾಲ ಪ್ರದರ್ಶನಗೊಂಡಿದೆ. ಸಧ್ಯ ಮಹಾದೇವ ಗುಟ್ಲಿ ಅವರು ಗದಗದ ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂ.ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘದ ಸ್ತ್ರೀ ಪಾತ್ರಧಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಸಂಘದ ಮ್ಯಾನೇಜರ್ ಕೂಡ ಆಗಿದ್ದಾರೆ.
ಮಹಾದೇವರಿಗೆ ವಯಸ್ಸು 34. ಅವರು ಬಣ್ಣ ಹಚ್ಚಿದ್ದು ಹನ್ನೊಂದನೆಯ ವಯಸ್ಸಿನಲ್ಲಿ. ಓದಿದ್ದು ಒಂಭತ್ತನೆ ತರಗತಿಯವರೆಗೆ. 1994ರಲ್ಲಿ ಹೊಸೂರ ಗ್ರಾಮದ ಬೆ„ಲಾಟದ ಸಂದರ್ಭದಲ್ಲಿ ಗ್ರಾಮದ ಕಲ್ಲಪ್ಪ ತೇಲಿ ಎಂಬುವರು ಸ್ತ್ರೀ ಪಾತ್ರವನ್ನು ಮಹಾದೇವರಿಗೆ ನೀಡಿದ್ದರು. ಆ ಪಾತ್ರವನ್ನು ಮಹಾದೇವ ಸಮರ್ಥವಾಗಿ ನಿರ್ವಹಿಸಿದರು. 2000ರಲ್ಲಿ ಪಂಚಾಕ್ಷರಿ ಗವಾಯಿಗಳ ವೃತ್ತಿ ರಂಗಭೂಮಿ ಕಂಪನಿಯನ್ನು ಸೇರಿಕೊಂಡು ಅಲ್ಲಿ ಪ್ರಮುಖ ಸ್ತ್ರೀಪಾತ್ರ ಧಾರಿಯಾಗಿ ಸೇವೆ ಸಲ್ಲಿಸತೊಡಗಿದರು.
ಕರ್ನಾಟಕದ ಬಹುತೇಕ ಜಿಲ್ಲೆಗಳು, ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶದ ಶ್ರೀಶೆ„ಲಂನಲ್ಲಿ ಮತ್ತು ಬಳ್ಳಾರಿ, ಕೊಪ್ಪಳ ಮತ್ತು ಗದಗ ಜಿಲ್ಲೆಯ ಪ್ರತಿಯೊಂದು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಹಾದೇವ ಸ್ತ್ರೀ ಪಾತ್ರಧಾರಿಯಾಗಿ ಚಿರಪರಿಚಿತರು. ನಾಡಿನ ಹಲವಾರು ಸಂಘ ಸಂಸ್ಥೆಗಳು ಮತ್ತು ಮಠಗಳು ಅವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಕಳೆದ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿವೆ.
ಕಿರಣ ಆಳಗಿ