Advertisement

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

12:57 AM May 08, 2024 | Team Udayavani |

ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಪದೇಪದೆ ವರದಿಯಾಗುತ್ತಲೇ ಇವೆ. ಭ್ರೂಣಹತ್ಯೆಯನ್ನು ದೇಶಾದ್ಯಂತ ನಿಷೇಧಿಸಲಾಗಿದ್ದರೂ, ಇಂಥ ಪೈಶಾಚಿಕ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿರುವುದು ಆಡಳಿತ ವ್ಯವಸ್ಥೆ ಮಾತ್ರವಲ್ಲದೆ ನಾಗರಿಕ ಸಮಾಜ ಕೂಡ ತಲೆತಗ್ಗಿಸುವಂಥ ಸಂಗತಿ. ಶೈಕ್ಷಣಿಕವಾಗಿ ದೇಶದಲ್ಲಿ ಮುಂಚೂಣಿಯ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದಲ್ಲಿ ಹೆಣ್ಣು ಭ್ರೂಣ ಹತ್ಯೆಯಂತಹ ಅಮಾನವೀಯ ಕೃತ್ಯಗಳು ದಂಧೆಯಾಗಿ ಮಾರ್ಪಟ್ಟಿರುವುದು ಒಟ್ಟಾರೆ ಸಮಾಜದ ಬೌದ್ಧಿಕ ದಿವಾಳಿತನಕ್ಕೆ ಹಿಡಿದ ಕನ್ನಡಿ ಎಂದರೆ ಖಂಡಿತ ಅತಿಶಯೋಕ್ತಿಯಾಗಲಾರದು.

Advertisement

ಆರು ತಿಂಗಳುಗಳ ಹಿಂದೆ ಮಂಡ್ಯ ತಾಲೂಕಿನ ಹಾಡ್ಯದ ಆಲೆಮನೆಯೊಂದರಲ್ಲಿ ಕಾರ್ಯಾಚರಿಸುತ್ತಿದ್ದ ಹೆಣ್ಣು ಭ್ರೂಣ ಹತ್ಯೆ ದಂಧೆ ಪ್ರಕರಣ ಬೆಳಕಿಗೆ ಬಂದಾಗ ನಾಗರಿಕ ಸಮಾಜದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ದಂಧೆಕೋರರ ವಿರುದ್ಧ ನಿಷ್ಠುರ ಕ್ರಮಕ್ಕಾಗಿ ಸಾರ್ವತ್ರಿಕ ಆಗ್ರಹ ಕೇಳಿಬಂದಿತ್ತು. ಈ ಪೈಶಾಚಿಕ ಕೃತ್ಯದಲ್ಲಿ ನಿರತರಾದವರನ್ನು ಬಂಧಿಸಿ, ಜೈಲಿನ ಕಂಬಿ ಎಣಿಸುವಂತೆ ಸಂಬಂಧಿತ ಸರಕಾರಿ ಇಲಾಖೆ ಮತ್ತು ಸಂಸ್ಥೆಗಳು ಮಾಡಿದ್ದವು. ಇಂತಹ ಅಕ್ರಮಗಳನ್ನು ಪತ್ತೆ ಹಚ್ಚುವ ದಿಸೆಯಲ್ಲಿ ಸರಕಾರ ರಾಜ್ಯದೆಲ್ಲೆಡೆ ವ್ಯಾಪಕ ಕಾರ್ಯಾಚರಣೆ ಕೈಗೊಂಡು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಹಾಕುವಂತೆ ಪೊಲೀಸ್‌ ಮತ್ತು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿತ್ತು. ಇದರ ಜತೆಯಲ್ಲಿ ಖಾಸಗಿಯಾಗಿ ಕಾರ್ಯಾಚರಿಸುತ್ತಿರುವ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೂ ಹದ್ದುಗಣ್ಣಿರಿಸಲು ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ತೋಟದ ಮನೆಯೊಂದರಲ್ಲಿ ಸರಕಾರಿ ಆಸ್ಪತ್ರೆಗಳ ನರ್ಸ್‌ಗಳೇ ಹೆಣ್ಣು ಭ್ರೂಣ ಹತ್ಯೆಯಂತಹ ಕುಕೃತ್ಯದಲ್ಲಿ ತೊಡಗಿಸಿಕೊಂಡಿದ್ದ ಪ್ರಕರಣ ಇದೇ ಫೆಬ್ರವರಿ ತಿಂಗಳ ಮಧ್ಯಭಾಗದಲ್ಲಿ ಬೆಳಕಿಗೆ ಬಂದಿತ್ತು. ಈ ಸಂದರ್ಭದಲ್ಲೂ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇಲ್ಲೂ ಆರೋಗ್ಯ ಇಲಾಖೆ ಮತ್ತು ಪೊಲೀಸರು ದುರುಳರನ್ನು ಪತ್ತೆ ಹಚ್ಚಿ ಕಾನೂನಿನ ಕೈಗೆ ಒಪ್ಪಿಸುವುದರೊಂದಿಗೆ ಪ್ರಕರಣ ಹಿನ್ನೆಲೆಗೆ ಸರಿದಿತ್ತು.

ಈಗ ಮತ್ತೆ ಹೆಣ್ಣು ಭ್ರೂಣ ಹತ್ಯೆಯ ಕರಾಳತೆಯ ಮತ್ತೂಂದು ಮುಖ ಅನಾವರಣಗೊಂಡಿದೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಆರೋಗ್ಯ ಇಲಾಖೆಯ ವಸತಿಗೃಹವೊಂದರಲ್ಲಿಯೇ ಹೆಣ್ಣು ಭ್ರೂಣ ಹತ್ಯೆ ದಂಧೆ ನಡೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಆರು ತಿಂಗಳ ಅವಧಿಯಲ್ಲಿ ಪತ್ತೆ ಹಚ್ಚಲಾದ ಮೂರನೇ ಗಂಭೀರ ಪ್ರಕರಣ ಇದಾಗಿದ್ದು ಈ ಮೂರರಲ್ಲೂ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ನರ್ಸ್‌ಗಳು ಅಥವಾ ಸಿಬಂದಿ ಒಂದಲ್ಲ ಒಂದು ತೆರನಾಗಿ ಪಾಲ್ಗೊಂಡಿದ್ದುದು ನಿಜಕ್ಕೂ ಕಳವಳಕಾರಿ ವಿದ್ಯಮಾನ.

ಆರೋಗ್ಯ ರಕ್ಷಣೆ, ಜನಸೇವೆಯ ಪ್ರತಿಜ್ಞೆ ತೊಟ್ಟು ಆರೋಗ್ಯ ಇಲಾಖೆಯಲ್ಲಿ ಹುದ್ದೆಗಿಟ್ಟಿಸಿಕೊಳ್ಳುವ ಇವರು ಕ್ಷಣಕಾಲ ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಂಡಿದ್ದೇ ಆಗಿದ್ದಲ್ಲಿ ಇಂತಹ ಅಮಾನವೀಯ ಕೃತ್ಯದಲ್ಲಿ ತೊಡಗಿಕೊಳ್ಳುತ್ತಿರಲಿಲ್ಲ. ಧನದಾಹದ ಮುಂದೆ ಇವರಿಗೆ ಮಾನವೀಯತೆಯ ಬಗೆಗೆ ಕನಿಷ್ಠ ತುಡಿತವೂ ಇಲ್ಲದಂತಾ ದುದು ತೀರಾ ಖೇದನೀಯ. ಇನ್ನು ಭ್ರೂಣಹತ್ಯೆ ನಿಷೇಧ ಕಾಯಿದೆ ಜಾರಿಯಲ್ಲಿದ್ದರೂ ರಾಜಾರೋಷವಾಗಿ ರಾಜ್ಯದ ಅಲ್ಲಲ್ಲಿ ಇದು ದಂಧೆಯೋಪಾದಿ ಯಲ್ಲಿ ನಡೆಯುತ್ತಿದೆ ಎಂದಾದರೆ ಕಾನೂನು ಜಾರಿಯಲ್ಲಿ ಭಾರೀ ಲೋಪವಿರು ವುದು ಸ್ಪಷ್ಟ. ಇದೇ ವೇಳೆ ಕಾನೂನು ಜಾರಿಗೊಳಿಸುವವರೇ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಶಾಮೀಲಾಗಿರುವಂತೆ ಕಾಣುತ್ತಿದೆ. ಇದರ ಕುರಿತಂತೆ ಸಂಬಂಧ ಪಟ್ಟ ಸರಕಾರಿ ಇಲಾಖೆಗಳು, ಸಂಸ್ಥೆಗಳು ಇನ್ನಷ್ಟು ಹೆಚ್ಚು ಆಸ್ಥೆ ವಹಿಸಿ ಕಾರ್ಯ ಪ್ರವೃತ್ತರಾಗಬೇಕಿವೆ. ಹೆಣ್ಣು ಭ್ರೂಣ ಹತ್ಯೆಗೆ ಪೂರ್ಣ ಕಡಿವಾಣ ಹಾಕದಿದ್ದಲ್ಲಿ ಇಡೀ ಮನುಕುಲದ ಭವಿಷ್ಯ ಗಾಢಾಂಧಕಾರದ ಮಡುವಿನಲ್ಲಿ ಮುಳಗಲಿರುವುದಂತೂ ನಿಸ್ಸಂಶಯ. ಸರಕಾರ ಮತ್ತು ಸಮಾಜ ಎಚ್ಚೆತ್ತುಕೊಳ್ಳಲು ಇದು ಸಕಾಲ.

Advertisement

Udayavani is now on Telegram. Click here to join our channel and stay updated with the latest news.

Next