ದಾವಣಗೆರೆ: ಸ್ತ್ರೀ-ಪುರುಷರ ಮಧ್ಯೆ ಸಮಾನತೆ ಬರಬೇಕಾದರೆ ಬಾಲ್ಯದಿಂದಲೇ ಹೆಣ್ಣು-ಗಂಡಿನ ನಡುವಿನ ತಾರತಮ್ಯ ನಿವಾರಣೆಯಾಗಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ಎಸ್. ವಂಟಿಗೋಡಿ ಹೇಳಿದ್ದಾರೆ. ಸೋಮವಾರ ವನಿತಾ ಉತ್ಸವದಲ್ಲಿ ಅತಿಥಿಯಾಗಿ ಮಾತನಾಡಿದರು.
ಮಹಿಳಾ ಸಬಲೀಕರಣ ಇನ್ನೂ ಸಾಧ್ಯವಾಗಿಲ್ಲ. ಅದು ಸಾಧ್ಯವಾಗುವುದು ಏಕಾಏಕಿ ಅಲ್ಲ ಎಂದರು. ಇಂದು ದಾವಣಗೆರೆಯಲ್ಲಿಯೇ 53 ಮಹಿಳಾಸಮಾಜಗಳಿವೆ ಎಂಬುದಾಗಿ ಕೇಳಿದ್ದೇನೆ. ಆದರೆ, ಇದುವರೆಗೆ ಮಹಿಳಾ ದೌರ್ಜನ್ಯ ಕಡಮೆಯಾಗಿಲ್ಲ. ಇದಕ್ಕೆ ಕಾರಣ ಪುರುಷ ಪ್ರಧಾನ್ಯತೆ ಹೆಚ್ಚಿರುವುದು.
ಮಹಿಳಾ ದೌರ್ಜನ್ಯ ಸಂಪೂರ್ಣ ಕೊನೆಯಾಗಲು ನಾವು ನಮ್ಮ ಮಕ್ಕಳ ಮಧ್ಯೆ ತಾರತಮ್ಯ ನಿವಾರಣೆಗೆ ಮುಂದಾಗಬೇಕು. ಗಂಡುಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ ಕೊಡುವುದು, ಹೆಣ್ಣುಮಕ್ಕಳಿಗೆ ನಿರ್ಬಂಧ ಹೇರುವುದನ್ನು ನಿಲ್ಲಿಸಬೇಕು ಎಂದರು. ಇನ್ನು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಲೈಂಗಿಕ ತಿಳಿವಳಿಕೆ ಕೊಡಬೇಕು.
ಲೈಂಗಿಕ ತಿಳಿವಳಿಕೆಕೊಡುವುದು ಸಾಧ್ಯವಿಲ್ಲ ಎನ್ನುವುದಾದರೆ ಕಡೆ ಪಕ್ಷ ಯಾರಾದರೂ ಮೈ ಮುಟ್ಟಿದಾಗ ಅದರಲ್ಲಿ ತಪ್ಪು, ಯಾವುದು? ಸರಿ ಯಾವುದು? ಎಂಬುದನ್ನು ತಿಳಿಸಬೇಕಿದೆ. ಪೋಷಕರು ಮಕ್ಕಳೊಂದಿಗೆ ಹೆಚ್ಚು ಬೆರೆಯಬೇಕು ಎಂದು ಅವರು ಹೇಳಿದರು.
ವನಿತಾ ಸಮಾಜ ಉತ್ತಮ ಕೆಲಸ ಮಾಡುತ್ತಿದ್ದು, ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿನವರ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಂಸ್ಥೆಗಳು ಇಂದು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಸಾಧನೆಯ ಹಿಂದೆ ಅನೇಕ ಯಶಸ್ವಿ ಮಹಿಳೆಯರಿದ್ದಾರೆ.
ಇದೇ ಮಾರ್ಗದಲ್ಲಿ ಎಲ್ಲಾ ಮಹಿಳೆಯರು ಸಾಗಬೇಕು. ಕೇವಲ ಮನೆಗೆಲಸ, ಗಂಡ, ಮಕ್ಕಳನ್ನು ನೋಡಿಕೊಳ್ಳುವುದರಲ್ಲೇ ಜೀವನ ಕಳೆಯಬಾರದು ಎಂದು ಅವರು ಸಲಹೆ ನೀಡಿದರು. ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಅಪರ ಜಿಲ್ಲಾಧಿಕಾರಿಪದ್ಮ ಬಸವಂತಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ತ್ರಿಪುಲಾಂಬ, ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್‌ನ ಅಧ್ಯಕ್ಷ ಸಿ.ಆರ್. ವಿರೂಪಾಕ್ಷಪ್ಪ, ವನಿತಾ ಸಮಾಜದ ಅಧ್ಯಕ್ಷೆ ಲತಿಕಾ ದಿನೇಶ್ ಶೆಟ್ಟಿ, ಕಾರ್ಯದರ್ಶಿ ಪದ್ಮಾ ಪ್ರಕಾಶ್ ವೇದಿಕೆಯಲ್ಲಿದ್ದರು. ಮೀನಾ ಪ್ರಭಾಕರ್ ಗೆ ಇದೇ ಸಂದರ್ಭದಲ್ಲಿ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ವನಿತಾ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.