Advertisement
ಇಲ್ಲಿಯವರೆಗೆ ನಡೆದ ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಾಗಿ ಪುರುಷ ಸಾಹಿತಿಗಳನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತಿದೆ. ಸಾಕಷ್ಟು ಅರ್ಹ ಮಹಿಳಾ ಸಾಹಿತಿಗಳಿದ್ದರೂ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಲ್ಲಿ ಮಹಿಳಾ ಸಾಹಿತಿಗಳನ್ನು ಕಡೆಗಣಿಸುತ್ತಿರುವುದರ ವಿರುದ್ಧ ಮಹಿಳಾ ಲೇಖಕಿ ಯರು ಮತ್ತು ಬರಹಗಾರರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ನಡೆದ 82 ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇವಲ 4 ಬಾರಿ ಮಹಿಳಾ ಸಾಹಿತಿಗಳನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಮಂಡ್ಯದಲ್ಲಿ 1948ರಲ್ಲಿ ನಡೆದ 48ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಜಯದೇವಿ ತಾಯಿ ಲಿಗಾಡೆ, 2000ರಲ್ಲಿ ಬಾಗಲಕೋಟೆಯಲ್ಲಿ ನಡೆದ 68ನೇ ಸಮ್ಮೇಳನಾಧ್ಯಕ್ಷರಾಗಿ ಶಾಂತಾದೇವಿ ಮಾಳವಾಡ, 2003ರಲ್ಲಿ ಮೂಡಬಿದಿರೆಯಲ್ಲಿ ನಡೆದ 70ನೇ ಸಾಹಿತ್ಯ ಸಮ್ಮೇಳನದಲ್ಲಿ ಕಮಲಾ ಹಂಪನಾ ಮತ್ತು 2010ರಲ್ಲಿ ಗದಗದಲ್ಲಿ ನಡೆದ 76ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೀತಾ ನಾಗಭೂಷಣ ಆಯ್ಕೆಯಾಗಿದ್ದರು.
ರಿಯಾಯಿತಿ ನೀಡಿ ಸಮ್ಮೇಳನಾಧ್ಯಕ್ಷರಾಗುವ ಅರ್ಹತೆ ಇದ್ದರೂ ಕೂಡ ವಂಚಿತರಾಗಿ ಇಹಲೋಕ ತ್ಯಜಿಸಿದ ಅನೇಕ ಲೇಖಕಿಯರು ಇದ್ದಾರೆ. ಆದ್ದರಿಂದ ರಾಶಿಗಟ್ಟಲೆ ಕೃತಿಗಳನ್ನು ಬರೆಯಬೇಕು, ವಯಸ್ಸಾಗಿರಬೇಕು ಎಂಬಿತ್ಯಾದಿ ನಿಯಮಗಳನ್ನು ಬದಿಗೊತ್ತಿ ಅತ್ಯುತ್ತಮವಾದ ಸಮಾಜಮುಖೀ ಕೃತಿಗಳನ್ನು ಬರೆದು ಪ್ರಜ್ಞಾವಂತ ಸಮಾಜ ನಿರ್ಮಾಣಕ್ಕೆ ಸ್ಪಂದಿಸಿದ ಮಹಿಳಾ ಸಾಹಿತಿಗಳಿಗೆ ಅವಕಾಶ ನೀಡಬೇಕು ಎಂಬುದು ಅನೇಕ ಮಹಿಳಾ ಲೇಖಕಿಯರ ಒಕ್ಕೊರಲಿನ ಮನವಿಯಾಗಿದೆ. ಕರ್ನಾಟಕ ಲೇಖಕಿಯರ ಸಂಘ ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಿಗೆ ಈ ಕುರಿತು ಪತ್ರ ಬರೆದಿದ್ದು, 83ನೇ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಮಹಿಳೆಯನ್ನೇ ಆಯ್ಕೆ ಮಾಡಬೇಕು. ಈ ಮೂಲಕ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದೆ. ಸಾ.ರಾ.ಅಬೂಬಕರ್, ವೈದೇಹಿ, ವೀಣಾ ಶಾಂತೇಶ್ವರ, ಬಿ.ಟಿ.ಲಲಿತನಾಯಕ್ ಅವರಲ್ಲಿ ಯಾರನ್ನಾದರೂ ಒಬ್ಬರನ್ನು 83ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವಂತೆ ಮನವಿ ಮಾಡಿದೆ. ಸಮ್ಮೇಳನಾಧ್ಯಕ್ಷರ ಆಯ್ಕೆ ಸಂಬಂಧ ಅಕ್ಟೋಬರ್‌ನಲ್ಲಿ ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.
83ನೇ ಸಮ್ಮೇಳನಾಧ್ಯಕ್ಷರು ಯಾರು ಎಂಬುದು ಆ ನಂತರವೇ ಗೊತ್ತಾಗಲಿದೆ.
Related Articles
ಡಾ.ವಸುಂಧರಾ ಭೂಪತಿ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ
Advertisement
ಸಂಪತ್ ತರೀಕೆರೆ