ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಹಳ್ಳಿ ವಲಯದಲ್ಲಿ ಸುಮಾರು 2-3 ವರ್ಷದ ಹೆಣ್ಣು ಚಿರತೆ ಶವ ಪತ್ತೆಯಾಗಿದೆ.
ವೀರನಹೊಸಹಳ್ಳಿ ವಲಯದ ಅಗಸನಹುಂಡಿ ಶಾಖೆಯ ಸೊಳ್ಳೆಪುರ ಬಿ.ಗಸ್ತಿನ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮಂಗಳವಾರ ಚಿರತೆ ಶವ ಪತ್ತೆಯಾಗಿದ್ದು, ಗಸ್ತಿನಲ್ಲಿದ್ದ ಸಿಬ್ಬಂದಿಗಳ ಮಾಹಿತಿ ಮೇರೆಗೆ ಸ್ಥಳಕ್ಕೆ ನಾಗರಹೊಳೆ ಹುಲಿ ಯೋಜನೆ ಮುಖ್ಯಸ್ಥ ಹರ್ಷಕುಮಾರ್‌ನರಗುಂದ, ಎಸಿಎಫ್ ದಯಾನಂದ್, ಆರ್.ಎಫ್.ಓ.ಗಣರಾಜ್ ಪಟಗಾರ್ ಭೇಟಿ ಇತ್ತು ಪರಿಶೀಲಿಸಿದರು.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸದಸ್ಯೆ ಕೃತಿಕಾಆಲನಹಳ್ಳಿ, ಮುಖ್ಯ ವನ್ಯಜೀವಿ ಪರಿಪಾಲಕ ಲೋಕೇಶ್‌ರ ಸಮ್ಮುಖದಲ್ಲಿ ನಾಗರಹೊಳೆ ಉದ್ಯಾನದ ಪಶುವೈದ್ಯ ಎಚ್.ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದ್ದು, ಚಿರತೆಯು ಆಂತರಿಕ ಕಾದಾಟ ಅಥವಾ ಹುಲಿಯೊಂದಿಗೆ ಕಾದಾಟದಿಂದ ಗಾಯಗೊಂಡು ಸಾವನ್ನಪ್ಪಿರಬಹುದೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆಂದು ಡಿಸಿಎಫ್ ಹರ್ಷಕುಮಾರ್‌ಚಿಕ್ಕನರಗುಂದ ಉದಯವಾಣಿಗೆ ತಿಳಿಸಿದರು.
ಈ ವೇಳೆ ಡಿ.ಆರ್.ಎಫ್.ಓ ಸಚ್ಚಿನ್, ಗಸ್ತು ಅರಣ್ಯ ಪಾಲಕ ವೆಂಕಟೇಶ್ ಹಾಗೂ ವಲಯ ಸಿಬ್ಬಂದಿ ಇದ್ದರು. ಕಳೆಬರಹವನ್ನು ಸ್ಥಳದಲ್ಲೇ ಸುಟ್ಟು ಹಾಕಲಾಯಿತು.