ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಹೆಣ್ಣು ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ತನಿಖೆಯನ್ನು ಬಹುತೇಕ ಪೂರ್ಣಗೊಳಿಸಿರುವ ಸಿಐಡಿ ಅಧಿಕಾರಿಗಳು ಸದ್ಯದಲ್ಲೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಹಾಗೂ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಲಿದ್ದಾರೆ.
ಕಳೆದ ವರ್ಷ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ವೇಳೆ ಹೆಣ್ಣು ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಗಳು ಪತ್ತೆಯಾಗಿತ್ತು. ಈ ವೇಳೆ ಮಂಡ್ಯದ ಆಲೆಮನೆ ಯೊಂದರಲ್ಲಿ ಸ್ಕ್ಯಾನಿಂಗ್ ಮಾಡಿ ಹೆಣ್ಣೂ ಭ್ರೂಣ ಪತ್ತೆ ಹಚ್ಚಿ, ಮೈಸೂರಿನ ಆಸ್ಪತ್ರೆಯೊಂದರಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವುದು ಪತ್ತೆಯಾಗಿತ್ತು. ಈ ಸಂಬಂಧ ಮಂಡ್ಯದ ಆಲೆ ಮನೆ, ಮೈಸೂರಿನ ಎರಡು ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಲಾಗಿತ್ತು. ಅಲ್ಲದೆ, ತಮಿಳುನಾಡು ಮೂಲದ ವೈದ್ಯ, ಮೈಸೂರಿನ ಆಯುರ್ವೇದಿಕ್ ವೈದ್ಯ ಡಾ.ಚಂದನ್ ಬಲ್ಲಾಳ್, ಮಧ್ಯವರ್ತಿ ಶಿವಲಿಂಗೇಗೌಡ, ನಯನ್ ಕುಮಾರ್, ವೀರೇಶ್, ನವೀನ್‌ಕುಮಾರ್, ರಿಜ್ಮಾ ಖಾನಂ, ಮೀನಾ ಮತ್ತು ನಿಸಾರ್ ಸೇರಿ 12 ಮಂದಿಯನ್ನು ಬಂಧಿಸಲಾಗಿತ್ತು.
ಬಳಿಕ ಹೆಚ್ಚಿನ ತನಿಖೆಗಾಗಿ ಸಿಐಡಿಗೆ ಪ್ರಕರಣ ವರ್ಗಾವಣೆ ಮಾಡಲಾಗಿತ್ತು. ಇದೀಗ ಪ್ರಕರಣದ ಅಂತಿಮ ಹಂತ ತಲುಪಿ ರುವ ಅಧಿಕಾರಿಗಳು ಸದ್ಯದಲ್ಲೇ ಆರೋಗ್ಯ ಇಲಾಖೆಗೆ ವರದಿ ನೀಡಲಿದ್ದಾರೆ. ಬಳಿಕ ಕೋರ್ಟ್ ಆರೋಪಪಟ್ಟಿ ಸಲ್ಲಿಸಲಿದ್ದಾರೆ.
ಸ್ಕ್ಯಾನಿಂಗ್ ಯಂತ್ರದ ಮೂಲ ಸಿಕ್ಕಿಲ್ಲ?: ಮಂಡ್ಯದ ಆಲೆಮನೆಯಲ್ಲಿ ಪತ್ತೆಯಾದ ಸ್ಕ್ಯಾನಿಂಗ್ ಯಂತ್ರದ ಮೂಲ ಸಿಐಡಿಗೂ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ. ಈ ರೀತಿಯ ಮೈಕ್ರೋ ಸ್ಕ್ಯಾನಿಂಗ್ ಯಂತ್ರವನ್ನು ಕೆಲ ಆಯ್ದ ವೈದ್ಯರಿಗೆ ಮಾತ್ರ ಕೊಡಲಾಗುತ್ತದೆ. ಆದರೆ, ಆರೋಪಿಗಳ ಪೈಕಿ ದಾವಣಗೆರೆ ಸಿದ್ದೇಶ್ ಈ ಮೈಕ್ರೋ ಸ್ಕ್ಯಾನಿಂಗ್ ಯಂತ್ರವನ್ನು ಆಲೆಮನೆಯಲ್ಲಿ ಇರಿಸಿದ್ದ. ಈ ಸಂಬಂಧ ಬೈಯಪ್ಪನಹಳ್ಳಿ ಠಾಣೆ ಪೊಲೀಸರೇ ಯಂತ್ರದ ನಂಬರ್‌ಗಳನ್ನು ನೋಂದಾಯಿಸಿ, ಆರೋಗ್ಯ ಇಲಾಖೆಗೆ ಮಾಹಿತಿ ಕೇಳಿ ಪತ್ರ ಬರೆದಿತ್ತು. ಆದರೆ, ನಿಗದಿತ ಸಮ ಯಕ್ಕೆ ಉತ್ತರ ಬಂದಿರಲಿಲ್ಲ. ಬಳಿಕ ಸಿಐಡಿ ಕೂಡ ಆರೋಗ್ಯ ಇಲಾಖೆಗೆ ಮಾಹಿತಿ ಕೇಳಿತ್ತು. ಆಗಲೂ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಈ ಯಂತ್ರ ಮೂಲ ನಿಗೂಢವಾಗಿದೆ ಎಂದು ಮೂಲಗಳು ತಿಳಿಸಿವೆ.
ಏನಿದು ಪ್ರಕರಣ?: ಆರೋಪಿಗಳು, ಗರ್ಭಿಣಿಯರನ್ನು ಗುರುತಿಸಿಕೊಂಡು ಮಂಡ್ಯದ ಆಲೆಮನೆಯಲ್ಲಿ ಸ್ಕ್ಯಾನಿಂಗ್ ಮಾಡಿಸುತ್ತಿದ್ದರು. ಹೆಣ್ಣು ಭ್ರೂಣವಿರುವುದು ಖಚಿತವಾದರೆ ಮೈಸೂರಿನ ಡಾ.ಚಂದನ್ ಬಲ್ಲಾಳ್ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸುತ್ತಿದ್ದರು. ಆರೋಪಿಗಳು ಪ್ರತಿ ಭಾನುವಾರ ಭ್ರೂಣ ಪತ್ತೆ ಮಾಡುತ್ತಿದ್ದರು. ಈ ಮಾಹಿತಿ ಕೆಲವರಿಗೆ ಗೊತ್ತಾದ ಹಿನ್ನೆಲೆ ಮೈಸೂರಿನ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಮತ್ತೂಂದು ಆಸ್ಪತ್ರೆ ಆರಂಭಿಸಿದ್ದರು. ಈ ದಂಧೆ ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಮೈಸೂರು, ತುಮಕೂರು, ದಾವಣಗೆರೆಗೂ ವ್ಯಾಪ್ತಿಸಿತ್ತು.