ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆ ಎಂಬುದು ಎಲ್ಲರೂ ಒಪ್ಪುವಂಥ ಮಾತು. ಇಂಥ ಮಾತುಗಳ ನಡುವೆಯೂ ಪ್ರತಿವರ್ಷ ಒಂದಷ್ಟು ನವ ನಿರ್ದೇಶಕಿಯರು ಚಿತ್ರರಂಗಕ್ಕೆ ಪರಿಚಯವಾಗುತ್ತಲೇ ಇರುತ್ತಾರೆ. ಈ ಸಾಲಿಗೆ ಈಗ ಹೊಸದಾಗಿ ಸೇರ್ಪಡೆಯಾಗುತ್ತಿರುವ ಹೊಸ ಹೆಸರು “ರಂಗ ಪ್ರವೇಶ’ ಸಿನಿಮಾದ ನಿರ್ದೇಶಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರದ್ದು.
ಎಂ.ಕಾಂ ಪದವಿಧರೆಯಾಗಿ ವೃತ್ತಿಯಲ್ಲಿ ಅಕೌಂಟ್ ಮ್ಯಾನೇಜರ್ ಆಗಿಯೂ ಕೆಲಸ ಮಾಡುತ್ತಿರುವ, ಜೊತೆಗೆ ಕನ್ನಡ ಮತ್ತು ಕೊಡವ ಭಾಷೆಯಲ್ಲಿ ಈಗಾಗಲೇ ನಾಲ್ಕಾರು ಚಿತ್ರಗಳನ್ನು ನಿರ್ಮಿಸಿದ ಅನುಭವವಿರುವ ಕೊಡಗು ಮೂಲದ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಈಗ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
ಅಂದಹಾಗೆ, ಕೊಟ್ಟುಕತ್ತಿರ ಯಶೋಧ ಪ್ರಕಾಶ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ “ರಂಗ ಪ್ರವೇಶ’ ಎಂದು ಹೆಸರಿಡಲಾಗಿದ್ದು, ಸದ್ದಿಲ್ಲದೆ ಶುರುವಾದ ಈ ಚಿತ್ರದ ಚಿತ್ರೀಕರಣ ಈಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಒಂದೊಳ್ಳೆ ಸದಭಿರುಚಿ ಚಿತ್ರವನ್ನು ನಿರ್ದೇಶಿಸಬೇಕು ಎಂಬ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರ ಬಹು ವರ್ಷಗಳ ಕನಸು ಈಗ “ರಂಗ ಪ್ರವೇಶ’ದ ಮೂಲಕ ನನಸಾಗುತ್ತಿದೆ.
ಇದನ್ನೂ ಓದಿ: ತಾಜ್ ಮಹಲ್-2 ಹಾಡು ಹೊರಬಂತು
“ರಂಗ ಪ್ರವೇಶ’ ಅಪ್ಪಟ ಕೌಟುಂಬಿಕ ಮಹಿಳಾ ಕಥಾಹಂದರದ ಚಿತ್ರ. ಆಧುನಿಕ ಜೀವನ ಶೈಲಿ, ಬಿಡುವಿಲ್ಲದ ಸಮಯ, ಕೆಲಸದ ಒತ್ತಡ ಕುಟುಂಬ ಮತ್ತು ಮಕ್ಕಳ ಮೇಲೆ ಹೇಗೆಲ್ಲ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು “ರಂಗ ಪ್ರವೇಶ’ ಚಿತ್ರದ ಕಥೆಯ ಒಂದು ಎಳೆ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ, ಕಣ್ಣಾರೆ ಕಂಡ ಹತ್ತಾರು ಘಟನೆಗಳನ್ನು ಸ್ಫೂರ್ತಿಯಾಗಿಟ್ಟುಕೊಂಡು ಇಂಥದ್ದೊಂದು ಸಾಮಾಜಿಕ ಮತ್ತು ಕೌಟುಂಬಿಕ ಕಥಾಹಂದರದ ಚಿತ್ರವನ್ನು ತೆರೆಮೇಲೆ ಹೇಳಲು ಹೊರಟಿದ್ದಾರೆ ಕೊಟ್ಟುಕತ್ತಿರ ಯಶೋಧ ಪ್ರಕಾಶ್.
ತಾಯಿ ಮತ್ತು ಮಗಳ ಬಾಂಧವ್ಯ, ಹೆಣ್ಣು ಮಕ್ಕಳ ಬದುಕು ಮತ್ತು ಭವಿಷ್ಯವನ್ನು ಕಟ್ಟುವ ಸ್ತ್ರೀ ಸಂವೇದನೆಯುಳ್ಳ ಚಿತ್ರವನ್ನು ಪರಿಣಾಮಕಾರಿಯಾಗಿ ಕನ್ನಡ ಚಿತ್ರ ಪ್ರೇಕ್ಷಕರ ಮುಂದೆ ಇಡಬೇಕು ಎಂಬ ಅಭಿಲಾಷೆ ಯಶೋಧ ಪ್ರಕಾಶ್ ಅವರದ್ದು.
“ರಂಗ ಪ್ರವೇಶ’ ಚಿತ್ರದಲ್ಲಿ ಸುಮನ್ ನಗರ್‌ಕರ್, ಎಂ. ಡಿ ಕೌಶಿಕ್, ಪುಷ್ಪಾ ಸ್ವಾಮಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ, ಸ. ಹರೀಶ್ ಕಥೆ, ನಾಗೇಶ್ ಸಂಭಾಷಣೆ, ಪ್ರೊ. ದೊಡ್ಡರಂಗೇಗೌಡ ಸಾಹಿತ್ಯವಿದೆ. ಚಿತ್ರದ ಹಾಡುಗಳಿಗೆ ಇಂದೂ ವಿಶ್ವನಾಥ್ ಸಂಗೀತವಿದೆ. “ಎಮೆ ರಾಲ್ಡ್ ಕ್ರಿಯೇಶನ್ಸ್’ ಬ್ಯಾನರ್‌ನಲ್ಲಿ “ರಂಗ ಪ್ರವೇಶ’ ಸಿನಿಮಾ ನಿರ್ಮಾಣವಾಗುತ್ತಿದೆ.