ದೀಪಾವಳಿ ಮುಗಿಯಿತು, ಇನ್ನು ಮುಂಜಾನೆಯ ತನಕ ಕಣ್ಣುಮಿಟುಕಿಸದೆ ಮೇಳದಾಟ ನೋಡುವ ಮರ್ಲು ಮಂದಿಗೆ ! ವಿದ್ಯುದ್ದೀಪವಿಲ್ಲದ ಕಾಲ. ಬಯಲು ಹಾದಿ. ಕೆಲವುಕಡೆ ಗೋಡೆಗಳಿಗೆ ತ್ರಿಕೋನಕಿಂಡಿ, ಹಣತೆದೀಪ. ಹೊನ್ನೆಯೆಣ್ಣೆ ತೀರುವ ತನಕ ಉರಿಯುವ ಕಂಬದೀಪ. ತೆಂಗಿನಸೋಗೆಯ ದೀಟಿಗೆ ತಿರುವುತ್ತ ನಡೆದಷ್ಟೂ ಉದ್ದವಾಗುವ ಕತ್ತಲಹಾದಿಯಲಿ ಬೆಳಕು ಹೆಜ್ಜೆಯಿಡುವ ಮಂದಿ. ಕಂಕುಳಲ್ಲಿ ಸುರುಳಿಸುತ್ತಿದ ತಾಳೆಗರಿ ಚಾಪೆ. ಕುಣಿವ ನಡಿಗೆಯ ಮಕ್ಕಳ ಜೇಬಿನಲ್ಲಿ ಹುರಿದ ಹುಣಸೆಬೀಜ, ಹುರುಳಿಯಕ್ಕಿ, ಶೇಂಗಾಕಾಳು. ಕೊಯ್ಲು ಮುಗಿದ ಒಡ್ಡುಗದ್ದೆಯಲ್ಲೇ ನಾಲ್ಕು ಕಂಬವೂರಿ ಅದಕ್ಕೆರಡು ಮಾವಿನೆಲೆಯ ತೋರಣಕಟ್ಟಿ ಚಪ್ಪರಹಾಕಿ ರಂಗಸ್ಥಳ. ಕಂಬಗಳಲ್ಲಿ ಉರಿಯುವ ದೀಟಿಗೆಗಳು, ಅದಕ್ಕೆ ಆಗಾಗ ಸುರಿವ ಎಣ್ಣೆ ! ಉರಿವ ಗ್ಯಾಸ್ಲೈಟುಗಳು !
ಅಮರಾವತಿಯ ದೇವತೆಗಳಂತೆ ಚೌಕಿಯಿಂದ ಹೊರಟು ಸರದಿಯಲ್ಲಿ ರಂಗವನ್ನೇರುವ ಹಸಿರಂಗಿ ಬಿಳಿಕಚ್ಚೆಯ ಕುಕ್ಕು (ಮಾವು)ದುಂಡಿ, ಕೋಡಂಗಿ, ಸೋಮಕಾಸುರ, ಕಟ್ಟೆ ವೇಷಗಳು! ಅನಂತರದಲ್ಲಿ ಎರಡು ಸ್ತ್ರೀವೇಷಗಳು! ಈಗದಂತೆ ಕಣ್ಣುಕುಕ್ಕುವ ಝಿಗಿಝಿಗಿ ಮಿಗಿಮಿಗಿ ವೇಷಭೂಷಣವಿಲ್ಲ. ಬೋಳುಬೊಕ್ಕಸ ಕುಪ್ಪಸ; ಬಿಳಿ-ಕೆಂಪು-ಕಪ್ಪು$ಕಳಕಳದ ಸೀರೆ; ತೋಳಿಗೆ ಸೊಂಟಕೆ ಮಣಿಕಟ್ಟಿಗೆ ಮಣಿಮಣಿ ಗುಂಡುಗುಂಡು ಪಟ್ಟಿ; ಉದ್ದ ಉದುರಿ ಹಾಕಿದ ಜಡೆಗೆ ಮುಡಿದ ಮಲ್ಲಿಗೆ ಹೂವು. ಇದು ಹೆಣ್ಣು ಅಲ್ಲ ಅನ್ನಲಿಕ್ಕೇ ಇಲ್ಲ! ಒಮ್ಮೆ ಸ್ತ್ರೀವೇಷವೊಂದು ಹೊರಗೆ ಬಂದೊಡನೆ, “”ನಿಮ್ಮ ಯಜಮಾನರು ಬರ್ಲಿಲ್ವಾ?” ಎಂದು ಕೇಳಿದಳಂತೆ ಒಬ್ಬಳು ಹೆಂಗಸು! ಇನ್ನು ಹಿಂಭಾಗಕ್ಕೆರಡು ದಿಂಬು ಕಟ್ಟಿಕೊಂಡು ಗಂಡುಕಚ್ಚೆ ಹಾಕಿ ಸೆರಗೆಳೆದು ಕಟ್ಟಿ ದಂಟೆ ಹಿಡ್ಕೊಂಡು ಸೊಂಟತಿರುಗಿಸುತ್ತ ಯದ್ವಾತದ್ವ ಕುಮcಟ್‌ಲಾಗ ಹಾಕುವ ಮುದುಕಿವೇಷ ಕಂಡರೆ ನಗುವೋ ನಗು.ಕೆಲವೊಮ್ಮೆ ರಂಗದ ಮೇಲೆ ವೀರಾವೇಷದಿಂದ ಧಿಗಿಣ ಕುಟ್ಟುವ ಅಂಬೆವೇಷವು ಕೆಳಗೆ ಕುಡಿದು ಡಿಂಗಾಗಿ ಕುಣಿವ ಪ್ರೇಕ್ಷಕನ ಆವೇಶಕ್ಕೆ ಮೂಕವಾಗಿ ಹೆಣ್ಣು ತಟ್ಟಿàರಾಯ!
ಚಾಪೆ ಬಿಡಿಸಿ ಕೂತವರ ಬಾಯಿಗಂತೂ ಪುರುಸೊತ್ತಿಲ್ಲ ಎಂದಮೇಲೆ ಅರ್ಥಗಾರಿಕೆ ಯಾರಿಗೆ ಕೇಳ್ತದೆ? ರಕ್ಕಸನನ್ನು ಕಂಡು ಓಡಿಬಂದ ರಾಜಕುಮಾರಿಗೆ ರಾಜ ಹೂತಗಂಟಲಲ್ಲಿ ಧ್ವನಿಯನ್ನೆತ್ತುತ್ತ, “”ಹೇ(ಯೇ)ನಾಯಿತು ಮಗಳೇ?” ಎಂದರೆ ಕೇಳುವುದು “ಹೇ…’ ಮಾತ್ರ. ರಾಜಕುಮಾರಿ, “”ಅಪ್ಪಯ್ನಾ” ಎಂದರೆ ಕೇಳುವುದು “ಯ್ನಾ’ ಮಾತ್ರ. ಚಟ್ಟಕಟ್ಟಿಸುವ ಚಳಿಯಲ್ಲಿ ತರತರ ನಡುಗುತ್ತ ವೀಳ್ಯದೆಲೆರಸ ಪುಚುಕ್ಕ ಉಗುಳಿ, “”ಅವನದ್ದೊಂದು ಎಂತ ಸಾವು ಮಾರಾಯ?” ಎನ್ನುತ್ತಾರೆ ಜನ. ವೇಷಧಾರಿಗಳೆಲ್ಲರೂ ಪುರುಷರೇ ಆದರೂ ರಂಗಭಾಷೆಯು ಪ್ರೇಕ್ಷಕರನ್ನು ಸರಿಯಾಗಿ ಮುಟ್ಟುತ್ತಲೇ ಇರಲಿಲ್ಲ. ಸ್ತ್ರೀಪಾತ್ರವಿರಲಿ, ಪುರುಷಪಾತ್ರವೇ ಇರಲಿ ಏರುಕಂಠದಲ್ಲಿ ಕಿರುಚಲೇಬೇಕಾದ ಕಾಲ. ನಾಟಕಗಳಲ್ಲೂ ಇದೇ ಸ್ಥಿತಿ. ಗುಟ್ಟಲ್ಲಿ “”ಸದ್ದುಮಾಡಬೇಡ ಸುಮ್ಮನಿರು ಶ್!” ಪಿಸುಗುಟ್ಟನ್ನೂ ಗಟ್ಟಿಯಾಗಿಯೇ ಏರುಧ್ವನಿಯಲ್ಲೇ ಹೇಳಬೇಕಾದ ಅನಿವಾರ್ಯತೆ. ಮುನ್ನೂರುಮಂದಿಗೆ ಕೇಳಬೇಡವೇ? ಧ್ವನಿಯಿಲ್ಲದ ಕಿರುಚಲಾರದ ನಟ ಸೋತ ಹಾಗೆಯೇ. ಏಕೆಂದರೆ ಅದು ಧ್ವನಿವರ್ಧಕವಿಲ್ಲದ ಕಾಲ.
ಈ ಒಂದು ತಾಂತ್ರಿಕವಾದ ಸಂಗತಿ ರಂಗಭಾಷೆಯ ಮೇಲೆ ಬಹಳಷ್ಟು ಪರಿಣಾಮ ಬೀರಿದುದರಿಂದ ರಂಗಭಾಷೆಯು ನಾಟಕೀಯವಾಯಿತು, ಶೈಲೀಕೃತವಾಯಿತು. ಪುರುಷನು ಅವನ ಧ್ವನಿಯಲ್ಲಿ ಸ್ತ್ರೀಭಾಷೆಯನ್ನು ಅನುಕರಿಸುವಾಗ ಅಥವಾ ಸ್ತ್ರೀಯೇ ಸ್ತ್ರೀಪಾತ್ರದಲ್ಲಿ ಮಾತಾಡುವಾಗ ಭಾಷೆಯಲ್ಲಿ ಸ್ತ್ರೀಗೆ ಅಸಹಜವಾದ ಒಂದು ರೂಕ್ಷತೆ ಒರಟುತನ, ನಟನೆಯಲ್ಲಿ ಅತಿಶಯ ಎನಿಸುವ ಬೆಡಗು-ಬಿನ್ನಾಣ, ಒನಪು-ಒಯ್ನಾರ ಉತ್ಪ್ರೇಕ್ಷೆ ರೂಪುಗೊಂಡಿತು. ಧ್ವನಿವರ್ಧಕ ಬಂದ ಮೇಲೂ ಇದು ಪರಂಪರೆಯ ಒಂದು ಭಾಗವಾಗಿ ಕಂಪೆನಿ ನಾಟಕಗಳಲ್ಲಿ ಉಳಿದುಕೊಂಡಿದೆ. ತಾಯಿ-ಮಗುವಿನ ಮೇಲೆ ತೋರುವ ಮಮತೆಯಾದರೂ “ಮಗೂ… ಕಂದಾ… ಅಯ್ಯೋ…’ ಎಲ್ಲವೂ ಹೈ ಪಿಚ್ಚಲ್ಲೇ. ಉತ್ತರ ಕರ್ನಾಟಕದ ಕಂಪೆನಿ ನಾಟಕಗಳಲ್ಲಿ ಹೆಂಗಸರ ವೇಷವನ್ನು ಹೆಂಗಸರೇ ಮಾಡುತ್ತಿದ್ದರು, ಅಲ್ಲಿ ಹೆಂಗಸರಿಗೆ ಸಾಮಾಜಿಕ ಮನ್ನಣೆ ಜಾಸ್ತಿಯಿತ್ತು. ಅವರ ಪುರಾಣಪ್ರಜ್ಞೆ, ಸಂಗೀತ ಹಾಗೂ ರಂಗಜ್ಞಾನ ಬೆರಗುಗೊಳಿಸುವಂಥದ್ದು.
ಭಾಷೆ ಎಂಬುದೇ ಪುರುಷ ಕೇಂದ್ರಿತ, ಜಗತ್ತಿನ ಭಾಷೆಯೇ ಪುಲ್ಲಿಂಗ ! ಸಾರ್ವತ್ರಿಕವಾಗಿ ಎಲ್ಲರನ್ನೂ ಉದ್ದೇಶಿಸಿ ಮಾತಾಡುವಾಗಲೂ “ಮನುಷ್ಯಬುದ್ಧಿಜೀವಿ’ ಅನ್ನುತ್ತೇವೆ, “ಮಾನುಷಿ’ ಅನ್ನುವುದಿಲ್ಲ. ಎಷ್ಟೋ ಶಬ್ದಗಳು, ಕೆಲವು ಕ್ರಿಯೆಗಳು, ಬೈಗುಳಗಳು ಹೆಣ್ಣಿಗೇ ಅನ್ವಯವಾಗುವ ಪುಲ್ಲಿಂಗಗಳೇ. ಒಂದು ಸ್ತ್ರೀಮನಸ್ಸು ಪುರುಷನಂತೆ ಬೋಲ್ಡಾಗಿ ವರ್ತಿಸಿದ್ರೆ ಗಂಡುಬೀರಿ! ಹೆಣ್ಣುಬೀರ ಏಕಿಲ್ಲ? ಹಾದರಗಿತ್ತಿ! ಅಂತಾರೆ, ಹಾದರಗಿತ್ತ ಯಾಕಿಲ್ಲ? “ಬೋ… ಮಗ'(ಬೋಳ ಇಲ್ಲ) ಎಂದು ಬೈದರೆ ತಾಗುವುದು ತಾಯಿಗೇ. ಯಾಕೆಂದರೆ, ಪತಿ ಸತ್ತೂಡನೆ ತಲೆಬೋಳಿಸಿಕೊಳ್ಳುತ್ತಿದ್ದದ್ದು ಹೆಣ್ಣು. ಇಂತಹ ಪದಗಳೇ ಅವಳ ಸ್ಥಿತಿಗೆ ಹಿಡಿದ ಕನ್ನಡಿ. ಸಮಾಜದಲ್ಲಿ ಮಹಿಳೆಯ ಸ್ಥಾನದಂತೆ ಅವಳ ಭಾಷೆಯೂ ಸೆಕೆಂಡರಿಯೇ. ಅವನು ಪ್ರಧಾನವಾಗಿರುವಾಗ ಅವಳು ಅಧೀನವಾಗಿರಲೇಬೇಕು ತಾನೆ? ಸ್ತ್ರೀ ಎಂದ ಕೂಡಲೇ ನಿಜ ಬದುಕಿನಲ್ಲಿ , ಕಲೆಗಳಲ್ಲಿ , ಸಿನೆಮಾ ಧಾರಾವಾಹಿಗಳಲ್ಲಿ ಚಿತ್ರಣಗೊಂಡದ್ದು ಒಂದಾ ಉತ್ಪ್ರೇಕ್ಷಿತವಾದ ಒನಪು ವಯ್ನಾರ ನುಣುಪು ಚಾಂಚಲ್ಯದಲ್ಲಿ ನಯವಾಗಿ ಮಾತಾಡುತ್ತ ಪುರುಷನ ಕೈಕೆಳಗೆ ಬದುಕಬೇಕಾದ ಮನಸ್ಥಿತಿಗೆ ಒಗ್ಗಿಕೊಂಡು ತಾನಾಗಿಯೇ ಗುಲಾಮಗಿರಿಗೆ, ಪರಾಧೀನತೆಗೆ ಒಗ್ಗಿಕೊಂಡ ಮನಸ್ಸಿನ ಅಬಲೆಯಾಗಿ, ಒಂದಾ ಇಷ್ಟವಿಲ್ಲದಿದ್ದರೂ ತ್ಯಾಗ ಮಾಡಿ ದೈವತ್ವಕ್ಕೇರುವ ದೇವಿಯಾಗಿ. ಇಲ್ಲಾ, ಪುರುಷನನ್ನು ಕೈಗೊಂಬೆಯಾಗಿಸಿ ಕ್ರೌರ್ಯ ಮಸಲತ್ತು ನಡೆಸುವ ರಕ್ಕಸಿಯಾಗಿ. ಮೊನ್ನೆಯವರೆಗೂ ಅವಳು ಮಾತನಾಡಿದ್ದು ಗುಲಾಮ ಭಾಷೆಯಲ್ಲಿ , ದೇವಿ ಭಾಷೆಯಲ್ಲಿ, ರಕ್ಕಸಿ ಭಾಷೆಯಲ್ಲಿ. ಪುರುಷಪ್ರಧಾನ ಚಿಂತನೆಯಿಂದ ಕಳಚಿಕೊಳ್ಳುತ್ತ ಮನುಷ್ಯಭಾಷೆಯಲ್ಲಿ ಮಾತನಾಡಲು ಆಕೆ ಆರಂಭಿಸಿದ್ದು ಶಿಕ್ಷಣದ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾದಂದಿನಿಂದ! ಅಭಿವ್ಯಕ್ತಿಯ ದೃಷ್ಟಿಯಿಂದ ಗಮನಿಸಿದಾಗ ಕೂಲಿಕಾರ್ಮಿಕ ವರ್ಗದ ಹೆಂಗಸರು ಹಾಗೂ ಉನ್ನತ ವರ್ಗದ ಬೌದ್ಧಿಕವಾದ ಸ್ತ್ರೀಯರು ಭಾಷಾ ಅಭಿವ್ಯಕ್ತಿಯ ಮೂಲಕ ತಮ್ಮನ್ನು ತಾವು ನಿರುಮ್ಮಳವಾಗಿ ತೆರೆದುಕೊಳ್ಳುವಷ್ಟು ಮಧ್ಯಮ ವರ್ಗದ ಸಾಂಪ್ರದಾಯಿಕ ಚೌಕಟ್ಟಿನ ಮನಸ್ಸುಗಳು ತೆರೆದುಕೊಳ್ಳುವುದಿಲ್ಲ. ಅವರದ್ದು ಪಂಜರದ ಹಕ್ಕಿಗಳಂತೆ ಮೂಕ ಉಮ್ಮಳ!
ಗ್ರೀಕ್ ರಂಗಭೂಮಿಯಿಂದ ಹಿಡಿದು ಇಲ್ಲಿಯವರೆಗೂ ನಾಟಕ ಬರೆದವರು ಹೆಚ್ಚು ಪುರುಷನಾಟಕಕಾರರೇ. ಅವರು ಸ್ತ್ರೀಯೊಳಗೆ ಪರಕಾಯಪ್ರವೇಶ ಮಾಡಿ ಬರೆದುದರಿಂದ ಅಲ್ಲಿ ಸ್ತ್ರೀಕಳಕಳಿಯಿದ್ದರೂ ಅದಕ್ಕೆ ಪುರುಷಕೇಂದ್ರಿತ ಚೌಕಟ್ಟು , ಸ್ತ್ರೀ ಅಂತಃಕರಣ ಸಹಜವಾಗಿ ಮೂಡಬೇಕಾದರೆ ನಾಟಕಕಾರ್ತಿಯರು ಹೆಚ್ಚು ಬರಬೇಕು. ಹೊಸಗಾಲದ ಹಲವು ಉದಾರವಾದೀ ನಾಟಕಕಾರರು ಸ್ತ್ರೀಯನ್ನು ನಾಲ್ಕು ಗೋಡೆಯಿಂದ ಹೊರತಂದು ಬದುಕಿನ ವಿಸ್ತಾರಕ್ಕೊಡ್ಡುವ ಮನುಷ್ಯ ಪಾತ್ರಗಳಾಗಿಸಿ ಮಾತಾಡಿಸಿದ್ದಾರೆ. ನೀನಾಸಂ, ರಂಗಾಯಣ, ಎನ್‌ಎಸ್‌ಡಿ ಮುಂತಾದ ಸಂಸ್ಥೆಗಳ ನಾಟಕಗಳಲ್ಲಿ ಅನುಭವಿ ನಿರ್ದೇಶಕರು ಸ್ತ್ರೀಯನ್ನು ಅವಳ ಬೆಡಗು-ಬಿನ್ನಾಣ-ದೈವಿಕತೆ ಎಲ್ಲದರಿಂದ ಹೊರತಂದು ಅವಳ ಧ್ವನಿಯನ್ನು ಹೆಚ್ಚು ಜನರಿಗೆ ತಲುಪುವಂತೆ ಮಾಡಿದ್ದಾರೆ.
ಕಾತ್ಯಾಯಿನಿ ಕುಂಜಿಬೆಟ್ಟು