Advertisement
ಶುಕ್ರವಾರ ರಾತ್ರಿ ಸುರಿದ ಗಾಳಿ ಮಳೆಗೆ ಗೇಟಿನ ಬಳಿ ಇರುವ ದೊಡ್ಡ ಮರವೊಂದು ಬುಡ ಸಮೇತ ಕಿತ್ತಿದ್ದು, ಮತ್ತೂಂದು ಮರದ ಮೇಲೆ ಒರಗಿದೆ. ಅದು ಯಾವ ಕ್ಷಣದಲ್ಲಾದರೂ ಬೀಳುವ ಸಾಧ್ಯತೆ ಇದೆ. ಮರಗಳು ಉರುಳಿದರೆ ಪಕ್ಕದಲ್ಲಿನ ಅಂಗಡಿ ಮುಂಗಟ್ಟುಗಳು, ಪತ್ರಿಕಾ ಭವನ, ಉಪನೋಂದಣಿ ಕಚೇರಿ, ಸರಕಾರಿ ಆಸ್ಪತ್ರೆಗೆ ಬರುವ ಜನರಿಗೆ ತೊಂದರೆಯಾಗುವ ಅಪಾಯವಿದೆ. ಜತೆಗೆ ಈ ಕಟ್ಟಡಗಳಿಗೂ ಹಾನಿಯಾಗುವ ಸಂಭವವಿದೆ. ಜನನಿಬಿಡಪ್ರದೇಶವೂ ಆಗಿರುವುದರಿಂದ ಹೆಚ್ಚಿನ ತೊಂದರೆಯಾಗಿದೆ.
ಶನಿವಾರ ಬೆಳಗ್ಗೆ ಮರ ಅಪಾಯಕಾರಿ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಉಪ ನೋಂದಣಾಧಿಕಾರಿ ಸ್ಥಳೀಯಾಡಳಿತ ನಗರ ಸಭೆ, ಅರಣ್ಯ ಇಲಾಖೆಗೆ ಮನವಿ ನೀಡಿದ್ದು, ಅಪಾಯಕಾರಿ ಮರವನ್ನು ಆದಷ್ಟು ಶೀಘ್ರ ದಲ್ಲಿ ಕಡಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ. ಪುತ್ತೂರು ವಲಯ ಅರಣ್ಯಾಧಿಕಾರಿ ವಿ.ಪಿ. ಕಾರ್ಯಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮರ ತೆರವುಗೊಳಿಸಲು ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಶೀಘ್ರ ತೆರವು
ಗಾಳಿಗೆ ವಾಲಿರುವ ಮರ ಅಪಾಯಕಾರಿ ಸ್ಥಿತಿಯಲ್ಲಿದೆ. ಜನಸಂದಣಿ ಇರುವ ಪರಿಸರ ಮತ್ತು ಪಕ್ಕದಲ್ಲಿ ಪತ್ರಿಕಾ ಭವನಕ್ಕೆ ವಾಲಿಕೊಂಡಿರುವುದರಿಂದ ಸೂಕ್ಷ್ಮವಾಗಿ ತೆರವುಗೊಳಿಸುವ ಕೆಲಸ ನಡೆಯಬೇಕಿದೆ. ಶೀಘ್ರದಲ್ಲಿ ಮರವನ್ನು ಕಡಿಯಲು ಕ್ರಮ ಕೈಗೊಳ್ಳಲಾಗುವುದು.
– ವಿ.ಪಿ. ಕಾರ್ಯಪ್ಪ
ವಲಯ ಅರಣ್ಯಾಧಿಕಾರಿ, ಪುತ್ತೂರು