Advertisement

Felicitation ceremony: ಡಾ| ನಾ. ಮೊಗಸಾಲೆ ಪ್ರತಿಭೆ, ಪರಿಶ್ರಮ ಅನನ್ಯ: ಡಾ| ಹೆಗ್ಗಡೆ

01:46 AM Sep 22, 2024 | Team Udayavani |

ಮೂಡುಬಿದಿರೆ: ಡಾ| ನಾ.ಮೊಗಸಾಲೆ ಅವರು ಕಾಂತಾವರದಂಥ ಹಳ್ಳಿಯಲ್ಲಿ ನೆಲೆಸಿ, ನಾಡು ನುಡಿಯ ಸೇವೆಯ ಮೂಲಕ ನಗರಗಳನ್ನೂ ಸೆಳೆದ, ನಗರಗಳನ್ನೂ ಮೀರಿಸಿದ ಸಾಧಕರು ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು.

Advertisement

ಸಮಾಜಮಂದಿರದ ಸ್ವರ್ಣಮಂದಿರ ದಲ್ಲಿ ಶನಿವಾರ ಜರಗಿದ “ಡಾ| ನಾ. ಮೊಗಸಾಲೆ-80′ ಅಭಿನಂದನ ಸಮಾರಂಭವನ್ನು ಉದ್ಘಾಟಿಸಿದ ಅವರು, ಡಿಜಿಟಲ್‌ ಮಾಧ್ಯಮದ ಪ್ರಭಾವದಲ್ಲಿ ಮುದ್ರಣ ಮಾಧ್ಯಮಕ್ಕೆ ಹಿನ್ನಡೆ ಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆಯಾದರೂ ಪತ್ರಿಕೆಗಳ ಸಂಖ್ಯೆ ಹೆಚ್ಚಾಗಿದೆ, ಓದುಗರೂ ಹೆಚ್ಚಾಗಿದ್ದಾರೆ. ಆದರೆ ಇರುವ ಅವಕಾಶದಲ್ಲಿ ಪತ್ರಿಕೆಗಳ ಮೂಲಕ ಉತ್ತಮ ಸಾಹಿತ್ಯವೂ ಹೊರಬರುವುದು ಅಪೇಕ್ಷಣೀಯ ಎಂದರು.

ಪ್ರೇಮಾ ಮೊಗಸಾಲೆ ಸಹಿತ ಡಾ| ನಾ. ಮೊಗಸಾಲೆಯವರನ್ನು ಶಾಲು ಹೊದೆಸಿ, ತ್ರಿವರ್ಣ ಖಾದಿ ಮಾಲೆ, ಸಮ್ಮಾನ ಪತ್ರ ಸಹಿತ ಸಮ್ಮಾನಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದಲೂ ಡಾ| ಹೆಗ್ಗಡೆಯವರು ಗೌರವಿಸಿದರು. ಮಾಜಿ ಸಚಿವ, ಸಮಾಜಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಮಂದಿರ ಸಭಾ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ, ಕ.ಸಾ.ಪ. ದ.ಕ.ಜಿಲ್ಲೆ ಮತ್ತು ಮೂಡುಬಿದಿರೆ ತಾಲೂಕು ಘಟಕ ಈ ಸಮಾರಂಭವನ್ನು ಆಯೋಜಿಸಿತ್ತು.

ಮೊಗಸಾಲೆ ಅಭಿನಂದನೆ
ಮೊಗಸಾಲೆಯವರ ಏಳು ಕೃತಿಗ ಳನ್ನು ಬಿಡುಗಡೆಗೊಳಿಸಿದ ವಿಶ್ರಾಂತ ಕುಲಪತಿ ಪ್ರೊ| ಬಿ.ಎ. ವಿವೇಕ ರೈ, ಮೊಗಸಾಲೆಯವರು ಕಾವ್ಯ, ಕಥೆ, ಕಾದಂಬರಿಗಳ ಮೂಲಕ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ನೀಡಿದವರು. ಕಾಂತಾವರ ಕನ್ನಡ ಸಂಘ, ನಾಡಿನಲ್ಲೇ ಪ್ರತಿಷ್ಠಿತವಾದ ವರ್ಧಮಾನ ಪ್ರಶಸ್ತಿ ಪೀಠ, ಅಲ್ಲಮ ಪ್ರಭು ಪೀಠ ಇವನ್ನೆಲ್ಲ ಕಟ್ಟಿ ಬೆಳೆಸಿದ ಪರಿ ಅನನ್ಯ. “ನಾಡಿಗೆ ನಮಸ್ಕಾರ’ದಂಥ ಯೋಜನೆಯ ಮೂಲಕ ನಾಡಿಗೆ ವಿಶಿಷ್ಟ ಕೊಡುಗೆ ಇತ್ತಿರುವ 250ಕ್ಕೂ ಅಧಿಕ ಸಾಧಕರನ್ನು ಪರಿಚಯಿಸಿದ, ಸಾಹಸ ಕಾರ್ಯವನ್ನು ಯಾವುದೇ ವಿ.ವಿ., ಅಕಾಡೆಮಿ, ಸಂಸ್ಥೆ ಮಾಡಿದ್ದಿಲ್ಲ ಎಂದರು.

ಹರೀಶ ಕೆ. ಆದೂರು ನಿರ್ದೇಶಿಸಿರುವ ಕಾಂತಾವರ ಕನ್ನಡ ಸಂಘದ ಕುರಿತಾದ ಸಾಕ್ಷéಚಿತ್ರದ ಪೋಸ್ಟರನ್ನು ಬಿಡುಗಡೆಗೊಳಿಸಲಾಯಿತು. ಡಾ| ತಾಳ್ತಜೆ ವಸಂತ ಕುಮಾರ್‌, ಸಾರ್ವಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್‌ ಅಧ್ಯಕ್ಷ ಕೆ. ಶ್ರೀಪತಿ ಭಟ್‌, ವರ್ಧಮಾನ ಪ್ರಶಸ್ತಿ ಪೀಠದ ಕಾರ್ಯಾಧ್ಯಕ್ಷ ಸಂಪತ್‌ ಸಾಮ್ರಾಜ್ಯ, ಕಾಸರಗೋಡು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ| ಜಯಪ್ರಕಾಶ್‌ ತೊಟ್ಟೆತ್ತೋಡಿ ಉಪಸ್ಥಿತರಿದ್ದರು. ದ.ಕ.ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್‌ ಸ್ವಾಗತಿಸಿ, ಡಾ| ಯೋಗೀಶ್‌ ಕೈರೋಡಿ ನಿರೂಪಿಸಿದರು. ಸದಾನಂದ ನಾರಾವಿ ವಂದಿಸಿದರು.

Advertisement

ಹಡಿಲುಬಿದ್ದ ಭೂಮಿ
ಡಾ| ಮೊಗಸಾಲೆ ಮಾತನಾಡಿ, ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಹಜ ಸಂಬಂಧಗಳು ಛಿದ್ರವಾಗುತ್ತಿವೆ, ಮಣ್ಣಿನ ಪ್ರೀತಿ ಕಳಕೊಂಡ ಮನುಷ್ಯರೇ ಕಾಣಿಸುತ್ತಿದ್ದಾರೆ. ಎಲ್ಲೆಲ್ಲೂ ಹಡಿಲು ಬಿದ್ದ ಭೂಮಿ ನೋವು ತರುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next