Advertisement
ಜಿಲ್ಲೆಯ ಕೆಲವು ಶಾಲೆಗಳು ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದ ಆರೋಪ ಕೇಳಿ ಬರುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆ ಅಡಿ 6ರಿಂದ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯ. ಇದರಡಿ ಖಾಸಗಿ ಶಾಲೆಗಳು ಆಯಾ ಗ್ರಾಮ ಅಥವಾ ವಾರ್ಡ್ ವ್ಯಾಪ್ತಿಯ ಬಡ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಶಿಕ್ಷಣ ನೀಡಬೇಕು. ಇದರ ವೆಚ್ಚವನ್ನು ಸರಕಾರ ಭರಿಸುತ್ತದೆ. ಖಾಸಗಿ ಶಾಲೆಗಳು ಶೇ. 25ರಷ್ಟು ಸೀಟುಗಳನ್ನು ಇಂಥ ವಿದ್ಯಾರ್ಥಿಗಳಿಗಾಗಿ ಮೀಸಲಿಡಬೇಕು. ಇದಕ್ಕಾಗಿ ಈ ಬಾರಿ ರಾಜ್ಯ ಸರಕಾರ 500 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಓರ್ವ ವಿದ್ಯಾರ್ಥಿಗೆ ಹನ್ನೊಂದೂವರೆ ಸಾವಿರ ರೂ. ನಂತೆ ಪಾವತಿಸುತ್ತಿದೆ. ಇದಲ್ಲದೇ ವಿದ್ಯಾರ್ಥಿಗಳಿಂದ ಯಾವುದೇ ಹಣವನ್ನು ಪಡೆಯುವಂತಿಲ್ಲ.
ಬಿಳಿ ಚೀಟಿ ವ್ಯವಹಾರ
ದಾಖಲಾತಿ ವೇಳೆ 5,000 ರೂ. ನೀಡು ವಂತೆ ಬಿಳಿಚೀಟಿ ನೀಡಲಾಗಿದೆ. ಮುಗ್ಧ ಪೋಷಕರು ಪಾವತಿಸಿದ್ದಾರೆ. ಕೆಲವು ದಿನಗಳಲ್ಲಿ ವಿದ್ಯಾರ್ಥಿಗಳ ಮೂಲಕ ಮತ್ತೂಂದು ಚೀಟಿ ಕಳುಹಿಸಲಾಗಿದೆ. ಇದರಲ್ಲಿ 5,450 ರೂ. ಪಾವತಿಸುವಂತೆ ಸೂಚಿಸಿದ್ದು, ಇದು ಸ್ಟೇಷನರಿ, ಸಮವಸ್ತ್ರಗಳಿಗೆ ಎಂದು ನಮೂದಿಸಲಾಗಿದೆ. ಸಾಮಾನ್ಯ ದಾಖಲಾತಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿಯಿಂದ ಒಟ್ಟೂ 16 ಸಾವಿರ ರೂ.ಗಳಷ್ಟು ಶುಲ್ಕವನ್ನು ಶಾಲೆಗಳು ಸಂಗ್ರಹಿಸುತ್ತಿವೆ. ಆರ್‌ಟಿಇ ವಿದ್ಯಾರ್ಥಿಗಳಿಗೆ ಈ ಹೆಚ್ಚುವರಿ ಶುಲ್ಕವನ್ನು ವಸೂಲು ಮಾಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಒಟ್ಟು 10 ವರ್ಷ ಆರ್‌ಟಿಇ ಅಡಿ ವಿದ್ಯಾರ್ಥಿ ಉಚಿತ ಶಿಕ್ಷಣ ಪಡೆಯಬಹುದು. ಓದುವ ಪುಸ್ತಕಗಳನ್ನು ಕೂಡ ಉಚಿತವಾಗಿಯೇ ನೀಡಲಾಗುತ್ತಿದೆ. ಮಧ್ಯಾಹ್ನ ನೀಡುವ ಊಟದ ಬಗ್ಗೆ ಒಂದಷ್ಟು ಹಣವನ್ನು ಮಾತ್ರ ಶಾಲೆಗಳು ವಸೂಲು ಮಾಡಬಹುದಾಗಿದ್ದು, ಇದು ಕಡ್ಡಾಯವಲ್ಲ.
Related Articles
Advertisement
ಬಿಇಒಗೆ ದೂರು: ತಾಲೂಕಿನ ಶಾಲೆಯೊಂದರ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ, ದೂರು ಬಂದಿದೆ. ತತ್‌ಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಆರ್‌ಟಿಇ ಅಡಿ ಆಯ್ಕೆಗೊಂಡ ವಿದ್ಯಾರ್ಥಿಯಿಂದ ಯಾವುದೇ ಶುಲ್ಕವನ್ನು ಖಾಸಗಿ ವಿದ್ಯಾಸಂಸ್ಥೆ ಪಡೆದುಕೊಳ್ಳುವಂತಿಲ್ಲ. ಆ ಹಣವನ್ನು ಸರಕಾರ ಪಾವತಿಸುತ್ತದೆ. ಪಠ್ಯಪುಸ್ತಕವನ್ನು ಉಚಿತವಾಗಿಯೇ ನೀಡಲಾಗುತ್ತದೆ. ಪ್ರಕರಣವಿದ್ದರೆ ತನಿಖೆ ನಡೆಸಲಾಗುವುದು.-ವೈ. ಶಿವರಾಮಯ್ಯ, ಡಿಡಿಪಿಐ